ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರದ ಟ್ರೈಲರ್ ರಿಲೀಸ್ ಆಗಿರುವುದು ಒಂದು ಕಡೆ ಖುಷಿಯಾದರೆ ಇನ್ನೊಂದು ಕಡೆ ಬೇಸರವುಂಟಾಗಿದೆ. ಬಹು ದೂರದ ಊರುಗಳಿಂದ ದರ್ಶನ್ ನೋಡಲು ಅಭಿಮಾನಿಗಳು ಬಂದಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಯಾದಗಿರಿಯಿಂದ ಅಂಧ ಅಭಿಮಾನಿಯೊಬ್ಬರು ದರ್ಶನ್ ಭೇಟಿ ಮಾಡಿ ವಿಶ್ ಮಾಡಲು ಮನೆ ಮುಂದೆ ಕಾದು ನಿಂತಿದ್ದರು. ಆದರೆ ಈ ಬಾರಿ ದರ್ಶನ್ ಮನೆಯಲ್ಲಿ ಇರಲ್ಲ ಎನ್ನುವುದು ಗೊತ್ತಿಲ್ಲದೇ ಬಂದಿದ್ದ ಆ ಅಭಿಮಾನಿಗೆ ಪೊಲೀಸರು ತಿಳಿಸಿ ವಾಪಸ್ಸು ಕಳುಹಿಸಿದರು.
ಈ ಬಾರಿ ಕೊರೊನಾದಿಂದ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲ್ಲ ಅಂತಾ ಅಭಿಮಾನಿಗಳಲ್ಲಿ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ ನಟ ದರ್ಶನ್ ಯಾವೊಬ್ಬ ಅಭಿಮಾನಿಯೂ ಮನೆಯ ಬಳಿ ಬರಬೇಡಿ. ನಾನು ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಆದರೂ ಕೂಡ ಆರ್.ಆರ್. ನಗರದ ದರ್ಶನ್ ಮನೆ ಮುಂದೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ. ಆದರೆ ನಟ ದರ್ಶನ್ ಮನೆಯಲ್ಲಿ ಇಲ್ಲದಿರುವುದು ತಿಳಿದು ಅಭಿಮಾನಿಗಳು ವಾಪಾಸ್ಸಾಗಿದ್ದಾರೆ.