ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​

|

Updated on: Nov 28, 2023 | 3:22 PM

ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಲೀಲಾವತಿ ಅವರು ಪಶು ಆಸ್ಪತ್ರೆ ಕಟ್ಟಿಸಿದ್ದಾರೆ. ಸ್ವಂತ ಹಣದಲ್ಲಿ ಅವರು ಈ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಇಂದು (ನವೆಂಬರ್​ 28) ಅದರ ಉದ್ಘಾಟನೆ ಸಲುವಾಗಿ ನೆಲಮಂಗಲದ ಸೋಲದೇವನಹಳ್ಳಿಗೆ ಆಗಮಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದಾರೆ.

ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​
ಲೀಲಾವತಿ ಆರೋಗ್ಯ ವಿಚಾರಿಸಿದ ಡಿಕೆ ಶಿವಕುಮಾರ್
Follow us on

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ (DK Shivakumar) ಅವರು ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅವರ ಆರೋಗ್ಯದ ಬಗ್ಗೆ ಡಿಕೆಶಿ ವಿಚಾರಿಸಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಅವರು ಪಶು ಆಸ್ಪತ್ರೆ (Veterinary Hospital) ನಿರ್ಮಿಸಿದ್ದಾರೆ. ಇಂದು (ನವೆಂಬರ್​ 28) ಅದರ ಉದ್ಘಾಟನೆ ಮಾಡುವ ಸಲುವಾಗಿ ಆಗಮಿಸಿರುವ ಡಿ.ಕೆ. ಶಿವಕುಮಾರ್​ ಅವರು ಹಿರಿಯ ಕಲಾವಿದೆಯ ಮನೆಗೆ ಭೇಡಿ ಕೊಟ್ಟಿದ್ದಾರೆ. ಈ ವೇಳೆ ಲೀಲಾವತಿ (Leelavathi) ಅವರ ಪುತ್ರ ವಿನೋದ್​ ರಾಜ್​ ಜೊತೆ ಡಿಕೆಶಿ ಮಾತನಾಡಿದ್ದಾರೆ. ಲೀಲಾವತಿ ಅವರಿಗೆ ಈಗ 86 ವರ್ಷ ವಯಸ್ಸು. ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದೆ.

ಒಂದು ಕಾಲದಲ್ಲಿ ಲೀಲಾವತಿ ಅವರು ಬಹುಬೇಡಿಕೆಯ ನಟಿಯಾಗಿದ್ದರು. ನಾಯಕಿಯಾಗಿ ಮಿಂಚಿದ್ದ ಅವರು ನಂತರದಲ್ಲಿ ಪೋಷಕ ಪಾತ್ರಗಳನ್ನು ಒಪ್ಪಿಕೊಂಡರು. ಅಂದಾಜು 650 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಪ್ರಮುಖ ಕಲಾವಿದರ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ಕೃಷಿಯಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು. ಕಳೆದ ಅನೇಕ ವರ್ಷಗಳಿಂದ ಸೋಲದೇವನಹಳ್ಳಿಯಲ್ಲಿ ಅವರು ಕೃಷಿ ಮಾಡುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ.

ಇದನ್ನೂ ಓದಿ: ನಟಿ ಲೀಲಾವತಿಗೆ ತೀವ್ರ ಅನಾರೋಗ್ಯ: ಅಮ್ಮನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ ವಿನೋದ್​ ರಾಜ್​

ಲೀಲಾವತಿ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿ. ಎಲ್ಲ ಬಗೆಯ ಪ್ರಾಣಿಗಳಿಗೂ ಅವರು ಕರುಣೆ ತೋರಿಸುತ್ತಾರೆ. ಅದೇ ಕಾರಣಕ್ಕಾಗಿ ತಮ್ಮ ಸ್ವಂತ ದುಡ್ಡಿನಲ್ಲಿ ಪಶು ಆಸ್ಪತ್ರೆ ನಿರ್ಮಿಸಿದ್ದಾರೆ. ಅದಕ್ಕಾಗಿ ಅಂದಾಜು 45 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಸೋಲದೇವನಹಳ್ಳಿಯ ಅಕ್ಕಪಕ್ಕದ ಎಲ್ಲ ಗ್ರಾಮಗಳಿಗೆ ಅನುಕೂಲ ಆಗಲಿ ಎಂಬ ಕಾರಣದಿಂದ ಈ ಆಸ್ಪತ್ರೆ ಕಟ್ಟಲಾಗಿದೆ. ಅದೇ ರೀತಿ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಅವರು ಕಟ್ಟಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ

ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಲೀಲಾವತಿ ಅವರನ್ನು ನೋಡಲು ಅನೇಕ ಸೆಲೆಬ್ರಿಟಿಗಳು ಇತ್ತೀಚೆಗೆ ಅವರ ನಿವಾಸಕ್ಕೆ ಆಗಮಿಸಿದ್ದರು. ದರ್ಶನ್​, ಅರ್ಜುನ್​ ಸರ್ಜಾ, ಅಭಿಷೇಕ್​ ಅಂಬರೀಷ್​ ಸೇರಿದಂತೆ ಅನೇಕರು ಬಂದು ಅವರ ಆರೋಗ್ಯ ವಿಚಾರಿಸಿದ್ದಾರೆ. ಇಂದು (ನ.28) ಶಿವರಾಜ್​ಕುಮಾರ್​ ಹಾಗೂ ಅವರ ಪತ್ನಿ ಗೀತಾ ಕೂಡ ಬಂದು ಹೋಗಿದ್ದಾರೆ. ‘ಲೀಲಾವತಿ ಅಮ್ಮನವರು ಇನ್ನೂ ಒಂದಷ್ಟು ವರ್ಷಗಳ ಕಾಲ ನಮ್ಮ ಜೊತೆ ಇರಬೇಕು’ ಎಂದು ಶಿವಣ್ಣ ಹಾರೈಸಿದ್ದಾರೆ. ವಿನೋದ್​ ರಾಜ್​ಗೆ ಅವರು ಧೈರ್ಯ ತುಂಬಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.