ಮತ್ತೆ ಕ್ರಿಕೆಟ್ ಕಾರಣಕ್ಕೆ ಸ್ಯಾಂಡಲ್ವುಡ್ (Sandalwood) ತಾರೆಯರು ಒಂದಾಗುತ್ತಿದ್ದಾರೆ. ಚಂದನವನದ ತಾರೆಯರು ವೃತ್ತಿಪರವಾಗಿ ನಟರಾಗಿರುವ ಜೊತೆಗೆ ವೃತ್ತಿಪರ ಕ್ರಿಕೆಟಿಗರೂ ಆಗಿಬಿಟ್ಟಿದ್ದಾರೆ. ಕಳೆದ ವರ್ಷದಿಂದ ಸತತವಾಗಿ ಒಂದರ ಹಿಂದೊಂದು ಕ್ರಿಕೆಟ್ ಟೂರ್ನಿಗಳಲ್ಲಿ (Cricket Tournament) ಚಂದನವನದ (Sandalwood) ತಾರೆಯರು ಆಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಬೀಸಲು ಚಂದನವನದ ತಾರೆಯರು ತಯಾರಾಗಿದ್ದಾರೆ. ಹಲವು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಡಾ ರಾಜ್ ಕಪ್ (Raj Cup) ಮತ್ತೊಮ್ಮೆ ಬಂದಿದ್ದು ಈ ಬಾರಿ ಅದ್ಧೂರಿಯಾಗಿ ಕ್ರಿಕೆಟ್ ಟೂರ್ನಿಯನ್ನು ನಡೆಸಲು ಆಯೋಜಕರು ತಯಾರಾಗಿದ್ದಾರೆ.
ಡಾ ರಾಜ್ ಕಪ್ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆದಿದ್ದು, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಟರಾದ ಅನಿರುದ್ಧ, ನಟ ರವಿಶಂಕರ್, ರಾಜಾಹುಲಿ ಹರ್ಷ, ನಾಗಕಿರಣ್, ಪವನ್ ಒಡೆಯರ್, ನಿರ್ದೇಶಕ ಚೇತನ್ ಹಾಗೂ ಸಿಂಪಲ್ ಸುನಿ ಅವರುಗಳು ಕ್ರೀಡಾಕೂಟದ ಬಗ್ಗೆ ಮಾಹಿತಿ ಹಂಚಿಕೊಂಡರು. ಕಳೆದ ಬಾರಿಗಿಂತಲೂ ವ್ಯವಸ್ಥಿತವಾಗಿ ಹಾಗೂ ಅದ್ಧೂರಿಯಾಗಿ ಈ ಬಾರಿ ಕ್ರೀಡಾಕೂಟ ಆಯೋಜನೆ ಮಾಡುವುದಾಗಿ ಮಾಹಿತಿ ನೀಡಿದರು.
ರಾಜ್ ಕಪ್ನ ಆರನೇ ಸೀಸನ್ ನಡೆಸಲು ತಯಾರಾಗಿದ್ದು. ರಾಜೇಶ್ ಬ್ರಹ್ಮವರ್ ಅವರ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಜೂನ್ 17ರಂದು ದುಬೈನಲ್ಲಿ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಾದ ಬಳಿಕ ಮೈಸೂರಿನಲ್ಲಿ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದ್ದು, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಲೀಗ್ ಹಂತದ ಪಂದ್ಯಗಳು ದುಬೈ, ಬ್ಯಾಂಕಾಂಕ್, ಶ್ರೀಲಂಕಾ, ಸಿಂಗಪುರ್, ಮಲೇಷ್ಯಾಗಳಲ್ಲಿ ನಡೆಯಲಿದೆ. ಜೊತೆಗೆ ಮೈಸೂರು ಹಾಗೂ ಬೆಂಗಳೂರುಗಳಲ್ಲಿಯೂ ಪಂದ್ಯಗಳು ನಡೆಯಲಿವೆ. ವಿದೇಶದಲ್ಲಿ ಪಂದ್ಯಾವಳಿಗಳನ್ನು ನೆಡೆಸಬೇಕು ಎಂಬುದು ಅಪ್ಪು ಅವರ ಆಸೆಯಾಗಿತ್ತಂತೆ, ಹಾಗಾಗಿ ಅವರ ಕನಸನ್ನು ನನಸು ಮಾಡುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಆಯೋಜಕರು ಹೇಳಿದ್ದಾರೆ.
ಡಾ. ರಾಜ್ ಕಪ್ನಲ್ಲಿ ಡಾಲಿ ಧನಂಜಯ್, ಅನಿರುದ್ದ್, ಮದರಂಗಿ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ರಾಜುಗೌಡ ಅವರ ನೇತೃತ್ವದಲ್ಲಿ ತಂಡಗಳು ಕ್ರಿಕೆಟ್ ಆಡಲಿದ್ದು ಕಪ್ಗಾಗಿ ಸೆಣೆಸಲಿವೆ. ಸಿಸಿಎಲ್ನಲ್ಲಿ ಆಡಿ ಅನುಭವವಿರುವ ಹಲವು ಆಟಗಾರರು ಈ ಪಂದ್ಯಾವಳಿಗಳಲ್ಲಿಯೂ ಭಾಗಿಯಾಗಲಿದ್ದಾರೆ.
ಜೂನ್ 17ರಂದು ನಡೆವ ಹರಾಜಿನ ಬಳಿಕ ಯಾವ ನಟರ ನಾಯಕತ್ವದ ತಂಡಕ್ಕೆ ಯಾವ ನಟರು ಆಡಲಿದ್ದಾರೆ ಎಂಬುದು ಗೊತ್ತಾಗಲಿದೆ. ಈ ತಂಡಗಳಲ್ಲಿ ಕೇವಲ ನಟರು ಮಾತ್ರವೇ ಅಲ್ಲದೆ ಚಿತ್ರರಂಗದ ತಂತ್ರಜ್ಞರು ಸಹ ಇರಲಿದ್ದಾರೆ ಎಂಬುದು ವಿಶೇಷ. ಸಿಸಿಎಲ್ ನಲ್ಲಿ ಕೇವಲ ನಟರುಗಳಷ್ಟೆ ಆಡುತ್ತಿದ್ದರು. ರಾಜ್ ಕಪ್ನಲ್ಲಿ ನಟರು, ತಂತ್ರಜ್ಞರು ಒಟ್ಟಿಗೆ ಆಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ