ಮೇರುನಟ ಡಾ. ರಾಜ್​ಕುಮಾರ್​ ಸ್ಮರಿಸಿದ ಗಣ್ಯರು; ಅಣ್ಣಾವ್ರ ಜನ್ಮದಿನಕ್ಕೆ ಅಭಿಮಾನದ ಹೊಳೆ

| Updated By: ಮದನ್​ ಕುಮಾರ್​

Updated on: Apr 24, 2022 | 12:49 PM

Dr Rajkumar Birthday: ಡಾ. ರಾಜ್​ಕುಮಾರ್​ ಜನ್ಮದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸೋಶಿಯಲ್​ ಮೀಡಿಯಾ ಮೂಲಕವೂ ಅನೇಕರು ಶುಭಕೋರುತ್ತಿದ್ದಾರೆ.

ಮೇರುನಟ ಡಾ. ರಾಜ್​ಕುಮಾರ್​ ಸ್ಮರಿಸಿದ ಗಣ್ಯರು; ಅಣ್ಣಾವ್ರ ಜನ್ಮದಿನಕ್ಕೆ ಅಭಿಮಾನದ ಹೊಳೆ
ಡಾ. ರಾಜ್​ಕುಮಾರ್​
Follow us on

ಡಾ. ರಾಜ್​ಕುಮಾರ್​ (Dr Rajkumar) ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸುವಲ್ಲಿ ಅಣ್ಣಾವ್ರ ಕೊಡುಗೆ ಅಪಾರ. ಹಲವು ದಶಕಗಳ ಕಾಲ ಚಂದನವನದಲ್ಲಿ ಸ್ಟಾರ್​ ಆಗಿ ಮೆರೆದ ಅವರ ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಕೊನೆ ಇಲ್ಲ. ಎವರ್​ಗ್ರೀನ್​ ಆಗಿರುವ ಅವರ ಸಿನಿಮಾಗಳನ್ನು ಪ್ರೇಕ್ಷಕರು ಇಂದಿಗೂ ಕಣ್ಣರಳಿಸಿ ನೋಡುತ್ತಾರೆ. ಇಂದು (ಏ.24) ಡಾ. ರಾಜ್​ಕುಮಾರ್​ ಜನ್ಮದಿನ. ರಾಜ್ಯದ ಅನೇಕ ಕಡೆಗಳಲ್ಲಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೇರುನಟನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಕಳೆದ ಎರಡು ವರ್ಷಗಳು ಕೊವಿಡ್​ ಕಾಟದಿಂದ ಸರಿಯಾಗಿ ಅಣ್ಣಾವ್ರ ಬರ್ತ್​ಡೇ (Dr Rajkumar Birth Anniversary) ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಯಾವುದೇ ಅಡೆತಡೆ ಇಲ್ಲದೇ ರಾಜ್​ಕುಮಾರ್​ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಈ ವೇಳೆ ಸೋಶಿಯಲ್​ ಮೀಡಿಯಾ ಮೂಲಕವೂ ಅನೇಕರು ಶುಭಕೋರುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಗೃಹ ಸಚಿವ ಅರಗ ಜ್ಞಾನೇಂದ್ರ, ಎಚ್​.ಡಿ. ಕುಮಾರಸ್ವಾಮಿ, ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಹಲವರು ಡಾ. ರಾಜ್​ಕುಮಾರ್​ ಅವರ ಸಾಧನೆಯನ್ನು ಸ್ಮರಿಸಿದ್ದಾರೆ. ಅಭಿಮಾನಿಗಳು ಕೂಡ ಅಣ್ಣಾವ್ರ ಜನ್ಮದಿನಕ್ಕೆ ಶುಭ ಹಾರೈಸುತ್ತಿದ್ದಾರೆ.

‘ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ. ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.

‘ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಗೋಕಾಕ್ ಚಳುವಳಿಯ ಮೂಲಕ ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು ಶ್ರಮಿಸುವ ಜತೆ ಅನೇಕ ಸುಪ್ರಸಿದ್ಧ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಚಲನಚಿತ್ರ ನೀಡಿದ ಕನ್ನಡದ ಕಣ್ಮಣಿ ಅಣ್ಣಾವ್ರ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶ’ ಎಂದು ಸಚಿವ ಅಶ್ವಥ್ ನಾರಾಯಣ್ ಪೋಸ್ಟ್ ಮಾಡಿದ್ದಾರೆ.

‘ಕನ್ನಡ ಕಲಾರಂಗದ ಶ್ರೇಷ್ಠ ನಟ, ನಟಸಾರ್ವಭೌಮ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್‍ಕುಮಾರ್ ಅವರ ಜಯಂತಿಯಂದು ಆದರಪೂರ್ವಕ ಪ್ರಣಾಮಗಳು. ಅಮೋಘ ಕಂಠಸಿರಿ, ಅದ್ಭುತ ನಟನೆಯಿಂದ ಅವರು ಸದಾ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ’ ಎಂದು ಸಚಿವ ಬಿ.ಸಿ. ನಾಗೇಶ್ ಸ್ಮರಿಸಿದ್ದಾರೆ.

‘ಕನ್ನಡ ನಾಡಿನ ಮೇರುನಟ, ಗಾನಗಂಧರ್ವ, ನಟ ಸಾರ್ವಭೌಮ ಡಾ. ರಾಜ್​ಕುಮಾರ್​ ಅವರ ಜನ್ಮದಿನದಂದು ಗೌರವಯುತ ನಮನಗಳು’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮನ ಸಲ್ಲಿಸಿದ್ದಾರೆ. ‘ನಾಡಿನ ಹೆಮ್ಮೆಯ ವರನಟ, ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರ ಜಯಂತಿಯಂದು ಕೋಟಿ ಪ್ರಣಾಮಗಳು. 200ಕ್ಕೂ ಹೆಚ್ಚು ಚಿತ್ರಗಳ ಮೂಲಕ ಕಲಾರಸಿಕರ ಮನ ಗೆದ್ದ ಜನಪ್ರಿಯ ಕಲಾವಿದರು ಅಣ್ಣಾವ್ರು. ಸರಳ ವ್ಯಕ್ತಿತ್ವ, ಸಜ್ಜನಿಕೆಯ ಅವರು ನಾಡಿನ ಜನರ ಮನದಲ್ಲಿ ವಿರಾಜಮಾನರಾಗಿದ್ದಾರೆ’ ಎಂದು ಆರಗ ಜ್ಞಾನೇಂದ್ರ ಪೋಸ್ಟ್​ ಮಾಡಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ ಅವರು ಕೂಡ ಮೇರು ನಟನನ್ನು ಸ್ಮರಿಸಿದ್ದಾರೆ. ‘ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್​ಕುಮಾರ್‌ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು. ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ. ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. ‘ಬಂಗಾರದ ಮನುಷ್ಯʼ ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ. ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯೂ ಆಗಿರುವ ಡಾ. ರಾಜ್​ ಕುಮಾರ್‌ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ’ ಎಂದು ಎಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.​

ಇದನ್ನೂ ಓದಿ:

ದೇವರ ರೀತಿ ಬೆಳ್ಳಿಯ ರಥದಲ್ಲಿ ಡಾ. ರಾಜ್​ ಪ್ರತಿಮೆ ಮೆರವಣಿಗೆ ಮಾಡಲು ಸಜ್ಜಾದ ಅಭಿಮಾನಿಗಳು

Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​

Published On - 12:16 pm, Sun, 24 April 22