ವರನಟ ಡಾ. ರಾಜ್ಕುಮಾರ್ (Rajkumar) ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಕನ್ನಡದ ಸ್ಟಾರ್ ಹೀರೋ. ಅವರನ್ನು ಆರಾಧಿಸುವ ಕೋಟ್ಯಂತರ ಮಂದಿ ಈಗಲೂ ಇದ್ದಾರೆ. ರಾಜ್ಕುಮಾರ್ ಇಂದು ನಮ್ಮೊಂದಿಗೆ ಇರದೇ ಇರಬಹುದು, ಆದರೆ ಅವರು ಹಾಕಿಕೊಟ್ಟ ಆದರ್ಶ, ಸಿನಿಮಾ, ನೆನಪು ಸದಾ ಜೀವಂತ. ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರ ಹೆಸರಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್ಕುಮಾರ್ ಸಮಾಧಿಗೆ ಕುಟುಂಬದವರು ಬಂದು ಪೂಜೆ ಸಲ್ಲಿಸೋ ಸಾಧ್ಯತೆ ಇದೆ. ರಾಜ್ಕುಮಾರ್ ಬಗ್ಗೆ ಪಾರ್ವತಮ್ಮ ಹೇಳಿದ ಒಂದು ಅಪರೂಪದ ವಿಚಾರ ಇಲ್ಲಿದೆ.
ರಾಜ್ಕುಮಾರ್ ಅವರು ಅನೇಕರಿಗೆ ಮಾದರಿ. ಅವರು ಫಿಟ್ನೆಸ್ನ ಆ ರೀತಿಯಲ್ಲಿ ಕಾಪಾಡಿಕೊಂಡು ಹೋಗಿದ್ದರು. ಒಮ್ಮೆ ರಾಜ್ಕುಮಾರ್ ಮನೆಗೆ ಬಂದಿದ್ದ ಕಾಲೇಜು ಹುಡುಗಿಯರು ಅಣ್ಣಾವ್ರನ್ನು ಶರ್ಟ್ಲೆಸ್ ಆಗಿ ನೋಡಲು ಇಚ್ಛಿಸಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತುಂಬಾನೇ ವಿಚಿತ್ರವಾದದ್ದು. ಈ ಬಗ್ಗೆ ಪಾರ್ವತಮ್ಮ ಅವರು ಹೇಳಿಕೊಂಡಿದ್ದರು.
‘ಒಮ್ಮೆ ಮನೆಗೆ ಸುಮಾರು 25 ಕಾಲೇಜು ಹುಡುಗಿಯರು ಬಂದರು. ಅವರಿಗೆ ರಾಜ್ಕುಮಾರ್ ಅವರನ್ನು ನೋಡೋ ಬಯಕೆ. ನನ್ನ ಬಳಿ ಬಂದು ರಾಜ್ಕುಮಾರ್ ಅವರನ್ನು ನೋಡಬೇಕು ಎಂದರು. ಅವರು ಮಲಗಿದ್ದಾರೆ ಆ ಬಳಿಕ ಬನ್ನಿ ಎಂದು ಹೇಳಿ ಕಳುಹಿಸಿದೆ. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ. ಕೊನೆಗೆ ನಾನು ಹೋಗಿ ಅವರನ್ನು ಎಬ್ಬಿಸಿದೆ. ಅವರು ಎದ್ದು ಬಂದರು’ ಎಂದರು ಪಾರ್ವತಮ್ಮ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಜನ್ಮದಿನಕ್ಕೆ ‘ಮೈ ನೇಮ್ ಇಸ್ ರಾಜ್’ ಸಂಗೀತ ಕಾರ್ಯಕ್ರಮ
ಹುಡುಗಿಯರು ಇಟ್ಟ ಬೇಡಿಕೆ ಕೇಳಿ ಅವರಿಗೆ ಶಾಕ್ ಆಗಿತ್ತು. ‘ರಾಜ್ಕುಮಾರ್ ಅವರನ್ನು ಶರ್ಟ್ಲೆಸ್ ಆಗಿ ನೋಡಬೇಕು ಎಂದು ಕೇಳಿದರು. ನನಗೆ ಶಾಕ್ ಆಯಿತು. ಆಗ ಅವರು ದಯವಿಟ್ಟು ಬೇರೆ ಅರ್ಥದಲ್ಲಿ ತಿಳಿದುಕೊಳ್ಳಬೇಡಿ. ಸಿನಿಮಾದಲ್ಲಿ ಆ ರೀತಿ ಫಿಟ್ ಆಗಿ ಕಾಣುತ್ತಾರಲ್ಲ, ನಿಜಕ್ಕೂ ಹಾಗೆಯೇ ಇದ್ದಾರಾ ಅನ್ನೋದನ್ನು ನೋಡಬೇಕು. ಅದಕ್ಕಾಗಿ ಶರ್ಟ್ಲೆಸ್ ಆಗಿ ನೋಡಬೇಕು ಎಂದು ಅವರು ನನ್ನ ಬಳಿ ಹೇಳಿದರು. ಕೊನೆಗೆ ರಾಜ್ಕುಮಾರ್ ಅವರನ್ನು ಒಪ್ಪಿಸಬೇಕಾಯಿತು’ ಎಂದಿದ್ದರು ಪಾರ್ವತಮ್ಮ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Wed, 24 April 24