ಡಾ. ರಾಜ್ಕುಮಾರ್ ಜನ್ಮದಿನಕ್ಕೆ ‘ಮೈ ನೇಮ್ ಇಸ್ ರಾಜ್’ ಸಂಗೀತ ಕಾರ್ಯಕ್ರಮ
ಏಪ್ರಿಲ್ 24ರಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಾ. ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ವೇದಿಕೆಯಲ್ಲಿ ಅನೇಕ ಗಾಯಕರು ಹಾಡುಗಳ ಮೂಲಕ ವರನಟನಿಗೆ ನಮನ ಸಲ್ಲಿಸಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಡಾ. ರಾಜ್ಕುಮಾರ್ (Dr Rajkumar) ಅವರ ಜನ್ಮದಿನ (ಏಪ್ರಿಲ್ 24) ಎಂದರೆ ಅಭಿಮಾನಿಗಳಿಗೆ ಹಬ್ಬ. ಈ ವರ್ಷ ಡಾ. ರಾಜ್ಕುಮಾರ್ ಅವರ 95ನೇ ಹುಟ್ಟುಹಬ್ಬ (Dr Rajkumar Birthday). ಆ ದಿನ ಸಂಜೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ‘ಮೈ ನೇಮ್ ಇಸ್ ರಾಜ್’ (ಭಾಗ 3) ಸಮಾರಂಭ ನಡೆಯಲಿದೆ. ‘ಸ್ವಾಮಿ ವಿವೇಕಾನಂದ ಟ್ರಸ್ಟ್’ ಮತ್ತು ‘ಟೀಮ್ ಆತ್ರೇಯ’ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ‘ರಾಜ್ ಗೀತ ನಮನ’ ಎಂಬ ಹೆಸರಿನಲ್ಲಿ ಈ ಬಾರಿ ಗಾಯಕ ಮನೋಜವಂ ಆತ್ರೇಯ ಸಾರಥ್ಯದಲ್ಲಿ ಹಲವು ಹೆಸರಾಂತ ಗಾಯಕರು ಡಾ. ರಾಜ್ಕುಮಾರ್ ಅವರ ಸುಪ್ರಸಿದ್ಧ ಗೀತೆಗಳನ್ನು (Dr Rajkumar Songs) ಹಾಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗುತ್ತು.
‘ನಾನು ಮತ್ತು ನನ್ನ ಕುಟುಂಬದವರು ಡಾ. ರಾಜ್ಕುಮಾರ್ ಫ್ಯಾನ್ಸ್. ಅವರ ಜನ್ಮದಿನದಂದು ಏನಾದರೂ ಕಾರ್ಯಕ್ರಮ ಮಾಡಬೇಕು ಎಂದುಕೊಂಡು ಟೀಮ್ ಆತ್ರೇಯ ತಂಡದಿಂದ ಪ್ರತಿ ವರ್ಷವೂ ‘ಮೈ ನೇಮ್ ಇಸ್ ರಾಜ್’ ಎಂಬ ಸಂಗೀತ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದ್ದೇವೆ. ಇದರೊಂದಿಗೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದೇವೆ. ಈ ಬಾರಿ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಇದೆ’ ಎಂದು ಮನೋಜವಂ ಆತ್ರೇಯ ಹೇಳಿದ್ದಾರೆ.
‘ಏ.24ರಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ಸಮಾರಂಭ ನಡೆಯಲಿದೆ. ‘ಸರಿಗಮಪ’ ಖ್ಯಾತಿಯ ಚನ್ನಪ್ಪ ಹುದ್ದರ್, ಮೈತ್ರಿ ಅಯ್ಯರ್, ಪೃಥ್ವಿ ಭಟ್, ಸೇರಿದಂತೆ ಹಲವು ಗಾಯಕರು ಹಾಡಲಿದ್ದಾರೆ. 12ಕ್ಕೂ ಅಧಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಾದ್ಯ ಕಲಾವಿದರು ಈ ಸಮಾರಂಭದಲ್ಲಿ ಇರುತ್ತಾರೆ. ಡಾ. ರಾಜ್ಕುಮಾರ್ ಅವರು ಸಿನಿಮಾ, ಧ್ವನಿಸುರುಳಿ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅವರು ಕೇವಲ ಹಾಡುಗಾರರಷ್ಟೇ ಅಲ್ಲ. ಕೆಲವು ವಾದ್ಯಗಳನ್ನೂ ನುಡಿಸುತ್ತಿದ್ದರು. ಅವರೊಬ್ಬ ಸರಸ್ವತಿ ಪುತ್ರ’ ಎಂದಿದ್ದಾರೆ ಮನೋಜವಂ ಆತ್ರೇಯ.
ಇದನ್ನೂ ಓದಿ: ‘ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಅದಕ್ಕಾಗಿಯೇ..’: ಮನದ ಮಾತು ತಿಳಿಸಿದ ಶಿವಣ್ಣ
‘ಡಾ. ರಾಜ್ ಅವರು ಸರಸ್ವತಿ ಪುತ್ರ ಎಂಬುದಕ್ಕೆ ಮಾಣಿಕ್ಯ ವೀಣಾ, ನಾದಮಯ, ಮೇಘ ಬಂತು ಮೇಘ ಮುಂತಾದ ಗೀತೆಗಳೇ ಸಾಕ್ಷಿ. ಈ ಬಾರಿ ಅವರ ಗೀತೆಗಳನ್ನು ಪ್ರಸ್ತುತ ಪಡಿಸುತ್ತಾ ಅಣ್ಣವ್ರಲ್ಲಿದ್ದ ಓರ್ವ ಶ್ರೇಷ್ಠ ಸಂಗೀತಗಾರನನ್ನು ಗೌರವಿಸುವ ಮೂಲಕ ಈ ಸಂಗೀತ ಕಾರ್ಯಕ್ರಮವನ್ನು ಸಮರ್ಪಿಸುತಿದ್ದೇವೆ. ಹೆಚ್ಚಿನ ಜನರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಿ ಎಂದು ಟೀಮ್ ಆತ್ರೇಯ ಪರವಾಗಿ ಹೇಳಿಕೊಳ್ಳುತ್ತೇನೆ’ ಎಂದು ಮನೋಜವಂ ಆತ್ರೇಯ ಹೇಳಿದರು. ಸ್ವಾಮಿ ವಿವೇಕಾನಂದ ಟ್ರಸ್ಟ್ನ ಪಾಟೀಲ್ ಅವರು ಮಾತನಾಡಿ, ‘ನಾವು ಈ ಬಾರಿ ಮನೋಜವಂ ಅವರ ಜೊತೆಯಾಗಿದ್ದೆವೆ. ಅಣ್ಣಾವ್ರ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಅನೇಕ ಗಣ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋನಲ್ಲಿ ಸಿಗಲಿವೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.