‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ; ಅಣ್ಣಾವ್ರು ನಟಿಸಿದ ಈ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ

| Updated By: ಮದನ್​ ಕುಮಾರ್​

Updated on: Mar 31, 2022 | 10:07 AM

Dr Rajkumar | Bangarada Manushya: ಜನಮನ ಗೆಲ್ಲುವಲ್ಲಿಯೂ, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುವಲ್ಲಿಯೂ ‘ಬಂಗಾರದ ಮನುಷ್ಯ’ ಚಿತ್ರ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರ ತೆರೆಕಂಡು ಇಂದಿಗೆ (ಮಾ.31) ಐವತ್ತು ವರ್ಷ.

‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ; ಅಣ್ಣಾವ್ರು ನಟಿಸಿದ ಈ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ
ಬಂಗಾರದ ಮನುಷ್ಯ - ಡಾ. ರಾಜ್​ಕುಮಾರ್
Follow us on

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್​ (Dr Rajkumar) ನೀಡಿದ ಕೊಡುಗೆ ಅಪಾರ. ಒಂದಕ್ಕಿಂತ ಒಂದು ಸೂಪರ್​ ಹಿಟ್​ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಅವರ ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೊಂದು ಉತ್ತಮ ಸಂದೇಶ ಇದ್ದೇ ಇರುತ್ತಿತ್ತು. ಆ ಕಾರಣಕ್ಕಾಗಿ ಡಾ. ರಾಜ್​ಕುಮಾರ್​ ಎಂದರೆ ಕನ್ನಡಿಗರ ಪಾಲಿಗೆ ಆದರ್ಶ ವ್ಯಕ್ತಿ ಆಗಿದ್ದರು. ಪಾತ್ರಗಳ ಆಯ್ಕೆಯಲ್ಲಿ ಅವರು ತೋರುತ್ತಿದ್ದ ಕಾಳಜಿ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ನೋಡುಗರನ್ನು ದಾರಿ ತಪ್ಪಿಸುವಂತಹ ಪಾತ್ರವನ್ನು ಅವರು ಎಂದಿಗೂ ಆಯ್ಕೆ ಮಾಡಿಕೊಳ್ಳಲಿಲ್ಲ. ಡಾ. ರಾಜ್​ ನಟಿಸಿದ ಪಾತ್ರಗಳನ್ನೇ ಅನುಸರಿಸಿದರೂ ಸಾಕು, ಬಾಳಿಗೊಂದು ಅತ್ಯುತ್ತಮ ಮಾರ್ಗದರ್ಶನ ಸಿಗುತ್ತದೆ ಎಂಬುದರಲ್ಲಿ ಅನುಮಾನ ಬೇಡ. ಅಷ್ಟು ಮೌಲ್ಯಯುತವಾದ ಸಿನಿಮಾಗಳನ್ನೇ (Dr Rajkumar Movie) ಅವರು ಈ ನಾಡಿಗೆ ಕೊಡುಗೆಯಾಗಿ ನೀಡಿದರು. ಆ ಪೈಕಿ ‘ಬಂಗಾರದ ಮನುಷ್ಯ’ ಸಿನಿಮಾವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಬೆಸ್ಟ್​ ಸಿನಿಮಾಗಳನ್ನು ಪಟ್ಟಿ ಮಾಡುವಾಗ ‘ಬಂಗಾರದ ಮನುಷ್ಯ’ (Bangarada Manushya) ಚಿತ್ರವನ್ನು ಬಿಡಲು ಸಾಧ್ಯವಿಲ್ಲ. ಈ ಸಿನಿಮಾ ತೆರೆಕಂಡು ಇಂದಿಗೆ (ಮಾ.31) 50 ವರ್ಷ ಪೂರೈಸಿದೆ. ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್​ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಸಿನಿಪ್ರಿಯರ ಸಂವಾದದಲ್ಲಿ ‘ಬಂಗಾರದ ಮನುಷ್ಯ’ ಚಿತ್ರ ಪ್ರಸ್ತುತವಾಗಿ ಉಳಿದುಕೊಂಡಿದೆ.

‘ಬಂಗಾರದ ಮನುಷ್ಯ’ ಸಿನಿಮಾವನ್ನು ನಿರ್ದೇಶನ ಮಾಡಿದವರು ಎಸ್​. ಸಿದ್ದಲಿಂಗಯ್ಯ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಸಿದ್ದಲಿಂಗಯ್ಯ ಅವರು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಟಿ.ಕೆ. ರಾಮ ರಾವ್​ ಬರೆದ ‘ಬಂಗಾರದ ಮನುಷ್ಯ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ರಾಜ್​ಕುಮಾರ್​, ಭಾರತಿ, ಬಾಲಕೃಷ್ಣ, ಶ್ರೀನಾಥ್​, ಲೋಕನಾಥ್​, ದ್ವಾರಕೀಶ್​, ವಜ್ರಮುನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಹತ್ತು ಹಲವು ಕಾರಣಗಳಿಂದಾಗಿ ‘ಬಂಗಾರದ ಮನುಷ್ಯ’ ಚಿತ್ರ ಇಂದಿಗೂ ವಿಶೇಷ ಸ್ಥಾನ ಉಳಿಸಿಕೊಂಡಿದೆ.

ಈ ಸಿನಿಮಾ ನೋಡಿದ ಅನೇಕ ಯುವಕರು ನಗರವನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ತೆರಳಿ ಪುನಃ ಕೃಷಿಯಲ್ಲಿ ತೊಡಗಿಕೊಂಡರು. ಈಗಲೂ ಕೂಡ ಈ ಚಿತ್ರದ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..’ ಹಾಡನ್ನು ಕೇಳಿದರೆ ಎಂಥವರಿಗಾದರೂ ಸ್ಫೂರ್ತಿ ಉಕ್ಕುತ್ತದೆ. ಮನದಲ್ಲಿ ಜೀವನೋತ್ಸಾವ ತುಂಬುತ್ತದೆ. ಕನ್ನಡ ಚಿತ್ರರಂಗ ಇರುವವರೆಗೂ ಈ ಹಾಡಿನ ತೂಕ ಕಡಿಮೆ ಆಗುವುದಿಲ್ಲ. ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಸಂಗೀತ ನೀಡಿದವರು ಜಿ.ಕೆ. ವೆಂಕಟೇಶ್​. ಚಿತ್ರದ ಎಲ್ಲ ಹಾಡುಗಳಿಗೆ ಪಿ.ಬಿ. ಶ್ರೀನಿವಾಸ್​, ಪಿ. ಸುಶೀಲ ಧ್ವನಿ ನೀಡಿದ್ದರು. ‘ನಗು ನಗುತಾ ನಲಿ..’, ‘ಬಾಳ ಬಂಗಾರ ನೀನು..’, ‘ಆಹಾ ಮೈಸೂರು ಮಲ್ಲಿಗೆ..’, ‘ಆಗದು ಎಂದು ಕೈ ಕಟ್ಟಿ ಕುಳಿತರೆ..’ ಗೀತೆಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ.

ಕನ್ನಡ ಚಿತ್ರರಂಗದಲ್ಲಿ ‘ಬಂಗಾರದ ಮನುಷ್ಯ’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ.

  • ಜನಮನ ಗೆಲ್ಲುವಲ್ಲಿಯೂ, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುವಲ್ಲಿಯೂ ಈ ಚಿತ್ರ ಮೈಲಿಗಲ್ಲು ಸ್ಥಾಪಿಸಿತು.
  • ಆ ಕಾಲಕ್ಕೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ‘ಬಂಗಾರದ ಮನುಷ್ಯ’ ಪಡೆದುಕೊಂಡಿತು.
  • ಬೆಂಗಳೂರಿನ ‘ಸ್ಟೇಟ್ಸ್​’ ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದ್ದು ಅಮೋಘ ಸಾಧನೆಯೇ ಸರಿ.
  • ಮೈಸೂರಿನ ‘ಚಾಮುಂಡೇಶ್ವರಿ’ ಚಿತ್ರಮಂದಿರದಲ್ಲಿ 60 ವಾರಗಳ ಕಾಲ ಪ್ರದರ್ಶನ ಕಂಡಿತು.
  • ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನವಾಯಿತು. ಜನರು ಮುಗಿಬಿದ್ದು ಈ ಸಿನಿಮಾ ವೀಕ್ಷಿಸಿದರು.
  • 1988ರಲ್ಲಿ ಮರು ಬಿಡುಗಡೆ ಆದಾಗಲೂ ಈ ಚಿತ್ರ ಬರೋಬ್ಬರಿ 25 ವಾರಗಳ ಕಾಲ ಪ್ರದರ್ಶನ ಕಂಡಿತು.

ಇಂಥ ಹಲವಾರು ದಾಖಲೆಗಳನ್ನು ಬರೆದ ‘ಬಂಗಾರದ ಮನುಷ್ಯ’ ಸಿನಿಮಾ ತೆರೆಕಂಡು ಇಂದಿಗೆ (ಮಾ.31) ಸರಿಯಾಗಿ 50 ವರ್ಷ ಪೂರೈಸಿದೆ. ಈಗಲೂ ಕೂಡ ಈ ಚಿತ್ರ ಟಿವಿಯಲ್ಲಿ ಪ್ರಸಾರವಾದರೆ ಗಮನವಿಟ್ಟು ನೋಡುವ ಪ್ರೇಕ್ಷಕರಿದ್ದಾರೆ. 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಈ ಚಿತ್ರದ ಕುರಿತ ತಮ್ಮ ಅನಿಸಿಕೆ ಮತ್ತು ನೆನಪುಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ರಾಜ್​ಕುಮಾರ್​ ಗೌರವ ಡಾಕ್ಟರೇಟ್​ ಪಡೆದು 46 ವರ್ಷ ಪೂರ್ಣ; ಕೋಟ್ಯಂತರ ಜನರಿಗೆ ವರನಟ ಸ್ಫೂರ್ತಿ

3ನೇ ಕ್ಲಾಸ್​ ಓದಿದ ಡಾ. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್​