
ಡಾ ರಾಜ್ಕುಮಾರ್ ಅವರ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ‘ಸಂಪತ್ತಿಗೆ ಸವಾಲ್’ ಸಿನಿಮಾ ಒಂದು. ಈ ಸಿನಿಮಾದ ವಿಶೇಷವೆಂದರೆ, ಕೇವಲ ನಟರಾಗಿದ್ದ ರಾಜ್ಕುಮಾರ್ ಅವರು ಹಿನ್ನೆಲೆ ಗಾಯಕರೂ ಆಗಿದ್ದು ಇದೇ ಸಿನಿಮಾದ ಮೂಲಕ. ‘ಸಂಪತ್ತಿಗೆ ಸವಾಲ್’ ಸಿನಿಮಾದ ‘ಎಮ್ಮೆ ನಿನಗೆ ಸಾಟಿ ಇಲ್ಲ’ ಹಾಡಿನ ಮೂಲಕ ಸಿನಿಮಾಗಳಲ್ಲಿ ನಟನೆಯ ಜೊತೆಗೆ ಹಿನ್ನೆಲೆ ಗಾಯಕನಾಗಿಯೂ ಹಾಡಲು ಅಣ್ಣಾವ್ರು ಪ್ರಾರಂಭಿಸಿದರು. ‘ಎಮ್ಮೆ ನಿನಗೆ ಸಾಟಿ ಇಲ್ಲ’ ಹಾಡಂತೂ ಭಾರಿ ದೊಡ್ಡ ಹಿಟ್ ಆಯ್ತು. ಈಗಲೂ ಸಹ ಅದು ಹಿಟ್ ಹಾಡೆ. ಆ ಹಾಡಿನಲ್ಲಿ ರಾಜ್ಕುಮಾರ್ ಅವರು ಎಮ್ಮೆಯ ಮೇಲೆ ಕೂತು ನಟಿಸಿದ ರೀತಿ ಅದ್ಭುತ. ಆದರೆ ಅಣ್ಣಾವ್ರು ಕೂತಿದ್ದ ಆ ಎಮ್ಮೆಯ ಕತೆ ಬಲು ರೋಚಕ.
ಇತ್ತೀಚೆಗಷ್ಟೆ, ಡಾ ರಾಜ್ಕುಮಾರ್ ಅವರ ಸಹೋದರ ವರದಣ್ಣನವರ ಹೆಸರಿನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಣ್ಣಾವ್ರ ಕುಟುಂಬಕ್ಕೆ ಆಪ್ತರೂ, ಸಿನಿಮಾ ಕರ್ಮಿಗಳೂ ಆದ ಬಿ ಮಲ್ಲೇಶ್ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ಸಂಪತ್ತಿಗೆ ಸವಾಲ್’ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಸ್ವಾರಸ್ಯಕರ ಘಟನೆಯನ್ನು ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
‘ಸಂಪತ್ತಿಗೆ ಸವಾಲ್’ ಸಿನಿಮಾದ ‘ಎಮ್ಮೆ ನಿನಗೆ ಸಾಟಿ ಇಲ್ಲ’ ಹಾಡಿನ ಚಿತ್ರೀಕರಣಕ್ಕಾಗಿ ಅಣ್ಣಾವ್ರ ಕುಟುಂಬದವರು, ಸಿನಿಮಾ ತಂಡ ಎಲ್ಲರೂ ಗಾಜನೂರಿಗೆ ಹೋಗಿದ್ದರಂತೆ. ಅಲ್ಲಿ ಸೂಕ್ತವಾದ ಎಮ್ಮೆ ಹುಡುಕುವ ಕೆಲಸ ಮಲ್ಲೇಶ್ ಹಾಗೂ ವೆಂಕಟರಾಜು ಎಂಬುವರ ಮೇಲೆ ಜವಾಬ್ದಾರಿ ಬಿತ್ತಂತೆ. ಇಬ್ಬರೂ ಹೋಗಿ ಎಲ್ಲೆಡೆ ಹುಡುಕಿ ಒಂದು ಲಕ್ಷಣವಾದ ಎಮ್ಮೆಯನ್ನು ಹುಡುಕಿ ತಂದರಂತೆ. ಅಣ್ಣಾವ್ರು ಸೇರಿದಂತೆ ಎಲ್ಲರಿಗೂ ಎಮ್ಮೆ ಇಷ್ಟವಾಯ್ತಂತೆ, ಅಣ್ಣಾವ್ರು ಸಹ ಎಮ್ಮೆ ಮೇಲೆ ಕೂತು ಚಿತ್ರೀಕರಣ ಮಾಡಿದರಂತೆ. ಮೊದಲ ದಿನ ಚಿತ್ರೀಕರಣ ಮುಗಿದ ಮೇಲೆ, ಎಮ್ಮೆಯನ್ನು ಮಾಲೀಕರಿಗೆ ಕೊಟ್ಟು ಕಳಿಸಿದರಂತೆ. ಚೆನ್ನಾಗಿ ಹಿಂಡಿ, ಬೂಸ ತಿನ್ನಿಸಿ ನಾಳೆ ಎಂಟು ಗಂಟೆಗೆ ಕರೆತನ್ನಿ ಎಂದು ಹೇಳಿ ಕಳಿಸಿದರಂತೆ.
ಇದನ್ನೂ ಓದಿ:ಆಹಾರದ ವಿಷಯದಲ್ಲಿ ರಜನಿಕೊಟ್ಟ ಟಿಪ್ಸ್ಗೆ ರಾಜ್ಕುಮಾರ್ ಫಿದಾ ಆಗಿದ್ದರು
ಆದರೆ ಮಾರನೇಯ ದಿನ ಎಮ್ಮೆ ಬರಲೇ ಇಲ್ಲವಂತೆ, ಕೊನೆಗೆ ಮಲ್ಲೇಶ್ ಮತ್ತು ವೆಂಕಟರಾಜು ಅವರು ಎಮ್ಮೆಯ ಮಾಲೀಕನ ಬಳಿ ಕೇಳಿದಾಗ. ‘ಯಾರೋ ಚಾಮರಾಜನಗರದಿಂದ ಒಬ್ಬರು ಬಂದಿದ್ದರು. ಈ ಎಮ್ಮೆಯ ಮೇಲೆ ಡಾ ರಾಜ್ಕುಮಾರ್ ಕೂತಿದ್ದಾರೆ ಹಾಗಾಗಿ ಈ ಎಮ್ಮೆ ನನಗೆ ಬೇಕು. ಈ ಎಮ್ಮೆಯನ್ನು ಲಕ್ಷ್ಮಿ ನೋಡಿಕೊಳ್ಳುವ ಹಾಗೆ ನೋಡಿಕೊಳ್ತೀನಿ ಎಂದು ಹೇಳಿ, 1500 ಹಣ ಕೊಟ್ಟು ಎಮ್ಮೆ ತೆಗೆದುಕೊಂಡು ಹೋಗಿಬಿಟ್ಟರು’ ಎಂದರಂತೆ. ಎಮ್ಮೆ ಮಾಲೀಕನ ಉತ್ತರ ಕೇಳಿ ಮಲ್ಲೇಶ್ ಮತ್ತು ವೆಂಕಟರಾಜುಗೆ ಆಘಾತವಾಗಿಬಿಟ್ಟಿತಂತೆ.
ಒಂದು ದಿನದ ಚಿತ್ರೀಕರಣ ಮುಗಿದಿದೆ. ಬೇರೆ ಎಮ್ಮೆ ತೆಗೆದುಕೊಂಡು ಹೋದರೆ ಕಂಟಿನ್ಯೂಟಿ ಮಿಸ್ ಆಗುತ್ತದೆ. ಕೊನೆಗೆ ಬಹಳ ಕಷ್ಟಪಟ್ಟು, ಹಿಂದಿನ ದಿನ ಬಂದಿದ್ದ ಎಮ್ಮೆಯನ್ನೇ ಹೋಲುವ ಇನ್ನೊಂದು ಎಮ್ಮೆಯನ್ನು ಹುಡುಕಿ ತಂದರಂತೆ. ಸರಿ ಸಿನಿಮಾದ ಚಿತ್ರೀಕರಣವು ಇನ್ನೇನು ಶುರು ಆಗಬೇಕು, ಅಣ್ಣಾವ್ರು ಎಮ್ಮೆಯ ಮೇಲೆ ಹತ್ತಿ ಕೂತವರೇ ಕೆಳಗೆ ಇಳಿದು ಬಿಟ್ಟರಂತೆ. ಬಳಿಕ ಮಲ್ಲೇಶ್ ಅವರನ್ನು ಕರೆದು, ‘ಇದು ನಿನ್ನೆ ಬಂದಿದ್ದ ಎಮ್ಮೆ ಅಲ್ಲವಲ್ಲ’ ಎಂದರಂತೆ. ಅದಕ್ಕೆ ಮಲ್ಲೇಶ್, ನಡೆದ ಘಟನೆಯಲ್ಲ ವಿವರಿಸಿದರಂತೆ. ಬಳಿಕ ಮಲ್ಲೇಶ್, ನಿಮಗೆ ಹೇಗೆ ಗೊತ್ತಾಯ್ತು ಎಂದಿದ್ದಕ್ಕೆ, ‘ನಿನ್ನೆ ಎಮ್ಮೆಯ ಮೇಲೆ ಕೂತಾಗ ಅದರ ಕೂದಲು ಮೈ ಎಲ್ಲ ನುಣುಪಾಗಿತ್ತು, ಇಂದು ಹತ್ತಿದರೆ ಅದರ ಕೂದಲು ಕಾಲು, ತೊಡೆಗೆ ಚುಚ್ಚುತ್ತಿದೆ’ ಎಂದರಂತೆ. ಬಳಿಕ ಮಲ್ಲೇಶ್ ಅವರ ಭಯ, ದುಗುಡ ಕಂಡು, ಅವರೇ, ಒಂದು ಕಂಬಳಿ ತರೆಸಿ, ಎಮ್ಮೆ ಮೇಲೆ ಹಾಕಿ, ಅದರ ಮೇಲೆ ಕೂತು ಶೂಟಿಂಗ್ ಮುಗಿಸಿದರಂತೆ.
ಆದರೆ ಮಲ್ಲೇಶ್ ಅವರಿಗೆ ಭಯ ಇತ್ತಂತೆ. ಕೊನೆಗೆ ಅಣ್ಣಾವ್ರೇ ಅವರನ್ನು ಸಮಾಧಾನ ಮಾಡಿದರಂತೆ. ಮಲ್ಲೇಶ್ ಅವರು ಹೇಳಿದಂತೆ ಅಣ್ಣಾವ್ರು ಹಾಗೂ ಅವರ ಜೊತೆಗೆ ಬಂದಿದ್ದ ವೆಂಕಟರಾಜು ಬಿಟ್ಟು ಇಡೀ ಸಿನಿಮಾ ಸೆಟ್ನಲ್ಲಿ ಎಮ್ಮೆ ಬದಲಾದ ವಿಷಯ ಯಾರಿಗೂ ತಿಳಿಯಲಿಲ್ಲವಂತೆ. ‘ಸಂಪತ್ತಿಗೆ ಸವಾಲ್’ ಸಿನಿಮಾ ಅನ್ನು ಮೂರು ತಿಂಗಳು ಎಡಿಟ್ ಮಾಡಲಾಯ್ತಂತೆ. ಆದರೆ ಎಡಿಟರ್ಗೆ ಸಹ ಎಮ್ಮೆ ಬದಲಾದ ವಿಷಯ ಗೊತ್ತಾಗಲಿಲ್ಲವಂತೆ. ಆ ಹಾಡನ್ನೂ ಕೋಟ್ಯಂತರ ಜನ ಕೋಟ್ಯಂತರ ಬಾರಿ ನೋಡಿದ್ದಾರೆ ಆದರೆ ಈಗಲೂ ಎಷ್ಟೋ ಜನರಿಗೆ ಹಾಡಿನಲ್ಲಿ ಇರುವುದು ಎರಡು ಎಮ್ಮೆ ಎಂಬುದು ಗೊತ್ತಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ