
ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು (ಸೆಪ್ಟೆಂಬರ್ 27) ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅತ್ಯಂತ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ದಾದಾ ನೆನಪಲ್ಲಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆಯಲಿದೆ. ಈ ಮೂಲಕ ಡಾ. ವಿಷ್ಣುವರ್ಧನ್ ಅವರು ಕಲಾರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.
ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವಕ್ಕೆ 20 ಸಾವಿರ ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ಗಾಳಿ ಆಂಜನೇಯ ದೇವಸ್ಥಾನದಿಂದ ಭವ್ಯ ಮೆರವಣಿಗೆ ಶುರುವಾಗಲಿದೆ. ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ವಿಷ್ಣು ಹಬ್ಬ ನಡೆಯಲಿದೆ. ದಾದಾ ನೆನಪಲ್ಲಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಇರಲಿದೆ. 2 ಸಾವಿರ ಅಭಿಮಾನಿಗಳಿಂದ 1.5 ಕಿ.ಮೀ ಉದ್ದದ ಕನ್ನಡ ಧ್ವಜದೊಂದಿಗೆ ಭವ್ಯ ಮೆರವಣಿಗೆ ಇರಲಿದೆ.
ವಿಷ್ಣು ಅಮೃತ ಮಹೋತ್ಸವಕ್ಕೆ ಚಿತ್ರರಂಗದ ಗಣ್ಯರ ಸಮಾಗಮ ಆಗಲಿದೆ. ನಟರು, ಕಲಾವಿದರು, ಡಾ. ವಿಷ್ಣು ಸೇನಾ ಸಮಿತಿಯ ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿ ಆಗಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀನಾಥ್, ರಮೇಶ್ ಅರವಿಂದ್, ಶ್ರುತಿ, ಜಯಮಾಲಾ, ಅವಿನಾಶ್, ಮಾಳವಿಕಾ ಅವಿನಾಶ್, ಎಸ್. ನಾರಾಯಣ್, ರಾಜೇಂದ್ರ ಸಿಂಗ್ ಬಾಬು, ಸುಂದರರಾಜ್, ಅಭಿಜಿತ್, ಸಿಹಿಕಹಿ ಚಂದ್ರು, ಶ್ರೀಮುರಳಿ, ರಮೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆಯವರೆಗೆ ರಾಜೇಶ್ ಕೃಷ್ಣನ್ ನೇತೃತ್ವದಲ್ಲಿ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ಬಳಿಕ ‘ಸಂಪಾದಕರ ಕಣ್ಣಲ್ಲಿ ವಿಷ್ಣುವರ್ಧನ್’ ವಿಶೇಷ ಸಂವಾದ ಇರಲಿದೆ. ಮಧ್ಯಾಹ್ನ 3.30ಕ್ಕೆ 75 ಕಲಾವಿದರಿಗೆ ಗೌರವ ಸಲ್ಲಿಕೆ ನಡೆಯಲಿದೆ. ಸಂಜೆ 5 ಗಂಟೆಗೆ ಸಿಎಂ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಪ್ರಮುಖ ವೇದಿಕೆ ಕಾರ್ಯಕ್ರಮ ಆರಂಭ ಆಗಲಿದೆ.
ಇದನ್ನೂ ಓದಿ: ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ಶಿವರಾಜ್‌ಕುಮಾರ್, ರವಿಚಂದ್ರನ್, ಸುದೀಪ್, ದುನಿಯಾ ವಿಜಯ್, ಗಣೇಶ್, ನೀನಾಸಂ ಸತೀಶ್, ನೆನಪಿರಲಿ ಪ್ರೇಮ್, ಶ್ರುತಿ, ಜಯಮಾಲಾ, ಶ್ರೀನಗರ ಕಿಟ್ಟಿ, ರಚಿತಾ ರಾಮ್ ಆಗಮಿಸಲಿದ್ದಾರೆ. ಸಂಜೆ 7 ಗಂಟೆಯಿಂದ ವಸಿಷ್ಠ ಸಿಂಹ, ನವೀನ್ ಕೃಷ್ಣ, ಕಾರುಣ್ಯ ರಾಮ್, ಅಂಕುಶ್ ಏಕಲವ್ಯ ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನ ಇರಲಿದೆ. ರಾತ್ರಿ 10 ಗಂಟೆಗೆ ಲೇಸರ್ ಶೋ, ‘ದಾದಾ ಡಿಜೆ’ ವಿಶೇಷ ನೃತ್ಯ ರೂಪಕ ನಡೆಯಲಿದೆ. ವಿಷ್ಣುವರ್ಧನ್ ಗೀತೆಗಳಿಗೆ ಅಭಿಮಾನಿಗಳು ಹೆಜ್ಜೆ ಹಾಕುವ ಮೂಲಕ ಅಮೃತ ಮಹೋತ್ಸವಕ್ಕೆ ಅದ್ದೂರಿ ತೆರೆ ಬೀಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.