ದುನಿಯಾ ವಿಜಯ್ (Duniya Vijay) ನಟನೆಯ ಹೊಸ ಸಿನಿಮಾ (ಏಪ್ರಿಲ್ 11) ಘೋಷಣೆ ಆಗಿದೆ. ‘ದುನಿಯಾ’ ವಿಜಯ್ ಅಭಿನಯದ 29ನೇ ಚಿತ್ರ ಇದಾಗಿದ್ದು, ಮುಹೂರ್ತ ಇಂದೇ ನಡೆದಿದೆ. ಈ ಚಿತ್ರದ ಮೂಲಕ ಅವರ ಮಗಳು ಮೋನಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾಗೆ ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ನಿರ್ದೇಶನದಲ್ಲೂ ಸಾಕಷ್ಟು ಅನುಭವ ಇದೆ.
ದುನಿಯಾ ವಿಜಯ್ ಅವರ 29ನೇ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ಎದುರು ಭಾಗದಲ್ಲಿರುವ ಕಟ್ಟಡ ಬೆಂಕಿಯಿಂದ ಹತ್ತಿ ಉರಿಯುತ್ತಿದೆ. ಇದಕ್ಕೆ ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಲೈನ್ ಕೂಡ ಇದೆ. ಇದರಿಂದ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ದುನಿಯಾ ವಿಜಯ್ ಅವರಿಗೆ ಮಗ ಸಾಮ್ರಾಟ್‍ನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಆಸೆ ಇದೆ. ಇದಕ್ಕಾಗಿಯೇ ಅವರು ಕೆಲ ವರ್ಷಗಳ ಹಿಂದೆ ‘ಕುಸ್ತಿ’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ, ಸಿನಿಮಾದ ಶೂಟಿಂಗ್ ಪ್ರಾರಂಭ ಆಗಿರಲಿಲ್ಲ. ಈಗ ಅವರ ಮಗಳು ಈ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮೋನಿಕಾ ಅವರು ಸಿನಿಮಾದಲ್ಲಿ ವಿಜಯ್ ಮಗಳಾಗಿಯೇ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎನ್ನಲಾಗಿದೆ.
ಇದನ್ನೂ ಓದಿ: ‘ರಾಬರ್ಟ್’ ಟೈಟಲ್ ಹುಟ್ಟಿದ್ದು ಹೇಗೆ? ‘ಕಾಟೇರ’ ಕತೆ ಪ್ರಾರಂಭವಾಗಿದ್ದು ಹೇಗೆ?
ಜಡೇಶ್ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ‘ರಾಜಹಂಸ’, ‘ಜಂಟಲ್‍ಮ್ಯಾನ್’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಸಾರಥಿ’ ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ