ನಟ, ನಿರ್ದೇಶಕ ದುನಿಯಾ ವಿಜಯ್ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದ ಮಾಸ್ ನಾಯಕರಲ್ಲಿ ದುನಿಯಾ ವಿಜಯ್ ಸಹ ಒಬ್ಬರು. ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಅವರಿಗಿದೆ. ಕಳೆದ ಕೆಲ ವರ್ಷಗಳಲ್ಲಿ ನಿರ್ದೇಶಕರಾಗಿಯೂ ದುನಿಯಾ ವಿಜಯ್ ಯಶಸ್ಸು ಗಳಿಸಿದ್ದಾರೆ. ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡಿರುವ ದುನಿಯಾ ವಿಜಯ್, ಕಳೆದ ಕೆಲ ವರ್ಷದಿಂದ ತಮ್ಮ ಹುಟ್ಟುಹಬ್ಬವನ್ನು ಹುಟ್ಟೂರಿನಲ್ಲಿ ತಂದೆ-ತಾಯಿಯ ಸಮಾಧಿ ಬಳಿ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ದುನಿಯಾ ವಿಜಯ್ ಬರೆದಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡ್ತಾ ಇದ್ರಿ. ಈ ಬಾರಿಯೂ ನಿಮ್ಮ ಜತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು ಆದರೆ ಕೆಲಸ ಎಂಬ ಜವಬ್ದಾರಿ ನನ್ನ ಬೆನ್ನೆರಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ.ಅಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ. ವಿಶೇಷ ಮನವಿ: ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ.. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ’ ಎಂದಿದ್ದಾರೆ ವಿಜಿ.
ಇದನ್ನೂ ಓದಿ:ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ದುನಿಯಾ ವಿಜಯ್ ಈ ವರ್ಷ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರಲಿದ್ದಾರೆ. ಜಡೇಶ್ ನಿರ್ದೇಶನದ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಜಡೇಶ್, ಕನ್ನಡ ಚಿತ್ರರಂಗದ ಜನಪ್ರಿಯ ಕತೆಗಾರರಾಗಿದ್ದು, ‘ಕಾಟೇರ’ ಸೇರಿದಂತೆ ಹಲವು ಸಿನಿಮಾಗಳಿಗೆ ಕತೆ, ಚಿತ್ರಕತೆಗಳನ್ನು ಒದಗಿಸಿದ್ದಾರೆ. ಈ ಹಿಂದೆ ಅವರು ‘ಗುರು ಶಿಷ್ಯರು’, ‘ರಾಜಹಂಸ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ದುನಿಯಾ ವಿಜಿ, ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ವಿಕೆ29’ ಸೇರಿದಂತೆ ವಿನಯ್ ರಾಜ್ಕುಮಾರ್ ನಟನೆಯ ‘ಸಿಟಿಲೈಟ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಂದು ಪರಭಾಷೆ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ಹೊಸ ಸಿನಿಮಾದಲ್ಲಿಯೂ ದುನಿಯಾ ವಿಜಿ ನಟಿಸಲಿದ್ದಾರೆ ಎಂದು ಈ ಹಿಂದೆ ಘೋಷಣೆ ಆಗಿತ್ತು. ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇದೆಲ್ಲದರ ಜೊತೆಗೆ ತಮ್ಮದೇ ನಿರ್ದೇಶನದ ಇನ್ನೊಂದು ಸಿನಿಮಾ ಆರಂಭದ ಯೋಜನೆಯಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ