ಡೈನಾಮಿಕ್ ಕುಟುಂಬದಲ್ಲಿ ಸಂಭ್ರಮ; ನಟ ಪ್ರಣಮ್ ದೇವರಾಜ್-ನಮಿತಾ ನಿಶ್ಚಿತಾರ್ಥ

ಡೈನಾಮಿಕ್ ಸ್ಟಾರ್ ದೇವರಾಜ್ ಕಿರಿಯ ಪುತ್ರ ನಟ ಪ್ರಣಮ್ ದೇವರಾಜ್ ತಮ್ಮ ಪ್ರೇಯಸಿ ನಮಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಣ್ಣ ಪ್ರಜ್ವಲ್ ದೇವರಾಜ್ ಮುಂದೆ ನಿಂತು ನಡೆಸಿಕೊಟ್ಟ ಈ ಲವ್ ಕಮ್ ಅರೇಂಜ್ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತರು ಭಾಗವಹಿಸಿ ಶುಭ ಹಾರೈಸಿದ್ದಾರೆ.

ಡೈನಾಮಿಕ್ ಕುಟುಂಬದಲ್ಲಿ ಸಂಭ್ರಮ; ನಟ ಪ್ರಣಮ್ ದೇವರಾಜ್-ನಮಿತಾ ನಿಶ್ಚಿತಾರ್ಥ
ಪ್ರಣಮ್-ನಮಿತಾ

Updated on: Aug 27, 2026 | 7:38 AM

ಮುಖ್ಯಾಂಶಗಳು

  • ‘ಡೈನಾಮಿಕ್’ ಮನೆಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ
  • ಉಂಗುರ ಬದಲಾಯಿಸಿದ ಪ್ರಣಮ್-ನಮಿತಾ
  • 'ಕುಮಾರಿ 21 ಎಫ್' ನಟ ಪ್ರಣಮ್ ಜೀವನದಲ್ಲಿ ಹೊಸ ಇನ್ನಿಂಗ್ಸ್

ಕನ್ನಡ ಚಿತ್ರರಂಗದ ಖ್ಯಾತ ‘ಡೈನಾಮಿಕ್’ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಕಳೆಗಟ್ಟಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಕಿರಿಯ ಪುತ್ರ, ಯುವ ನಟ ಪ್ರಣಮ್ ದೇವರಾಜ್ ಅವರು ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಪ್ರಣಮ್ ಹಾಗೂ ನಮಿತಾ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಟ್ಟಿದೆ.

ಈ ಸುಂದರ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ಪ್ರಣಮ್ ಅವರ ಹಿರಿಯ ಸಹೋದರ, ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಮುಂದೆ ನಿಂತು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಕುಟುಂಬಸ್ಥರು, ಆತ್ಮೀಯ ಗೆಳೆಯರು ಹಾಗೂ ಚಿತ್ರರಂಗದ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ಜೋಡಿಗೆ ಶುಭ ಹಾರೈಸಿದರು. ಮೂಲಗಳ ಪ್ರಕಾರ ಇದು ಲವ್ ಕಮ್ ಅರೇಂಜ್ ವಿವಾಹವಾಗಿದ್ದು, ಶೀಘ್ರದಲ್ಲೇ ಮದುವೆ ದಿನಾಂಕವನ್ನು ಕುಟುಂಬದವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಚಿತ್ರರಂಗದ ಹಿನ್ನೆಲೆಯಿಂದ ಬಂದ ಪ್ರಣಮ್ ದೇವರಾಜ್, ತೆಲುಗಿನ ಹಿಟ್ ಸಿನಿಮಾದ ರಿಮೇಕ್ ಆಗಿ ಮೂಡಿ ಬಂದ ‘ಕುಮಾರಿ 21 ಎಫ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ತದನಂತರ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಲು ಶ್ರಮಿಸಿದ್ದಾರೆ.

ಚಿತ್ರರಂಗದಲ್ಲಿ ಹಿರಿಯ ಸಹೋದರ ಪ್ರಜ್ವಲ್ ದೇವರಾಜ್ ಅವರಿಗೆ ಸಿಕ್ಕಂತೆ ಪ್ರಣಮ್ ಅವರಿಗೆ ಇನ್ನು ದೊಡ್ಡ ಮಟ್ಟದ ಕಮರ್ಷಿಯಲ್ ಗೆಲುವು ಸಿಕ್ಕಿಲ್ಲವಾದರೂ, ತಮ್ಮ ವಿಭಿನ್ನ ಕಥೆಗಳ ಆಯ್ಕೆ ಮತ್ತು ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿರುವ ಪ್ರಣಮ್ ಅವರಿಗೆ ಈ ಹೊಸ ಜೀವನದ ಹೆಜ್ಜೆ ಮತ್ತಷ್ಟು ಯಶಸ್ಸು ತರಲಿ ಎಂಬುದು ಅಭಿಮಾನಿಗಳ ಹಾರೈಕೆ.

ಇದನ್ನೂ ಓದಿ: ಏಳು ವರ್ಷ ಗ್ಯಾಪ್ ಪಡೆದಿದ್ದೇಕೆ ಪ್ರಣಮ್ ದೇವರಾಜ್? ಸ್ಪಷ್ಟನೆ ಕೊಟ್ಟ ನಟ

ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಪ್ರಣಮ್ ದೇವರಾಜ್ ಮತ್ತು ನಮಿತಾ ಜೋಡಿಗೆ ಸ್ಯಾಂಡಲ್‌ವುಡ್ ತಾರೆಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us