ಫೈಟರ್ ಸಾವು ಪ್ರಕರಣ: ನಿರ್ಮಾಪಕ ಗುರು ದೇಶಪಾಂಡೆ ಪರಾರಿ; ಐವರ ವಿರುದ್ಧ ಎಫ್ಐಆರ್
Fighter Vivek Death: ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಚಿತಾ ರಾಮ್ (Rachita Ram) ಮತ್ತು ಅಜಯ್ ರಾವ್ (Ajay Rao) ಅಭಿನಯಿಸುತ್ತಿದ್ದ ‘ಲವ್ ಯೂ ರಚ್ಚು’ (Love You Racchu) ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ವಿದ್ಯುತ್ ತಗುಲಿ ಫೈಟರ್ ವಿವೇಕ್ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರ್ದೇಶಕ ಶಂಕರ್ ರಾಜ್ ಎ1, ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಹಾಗೂ ಕ್ರೇನ್ ಆಪರೇಟರ್ ಮಹದೇವ್ ಎ5 ಎಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ ಘಟನೆ ಬಳಿಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದಾರೆ. ಅವರನ್ನು ಬಿಡದಿ ಪೊಲೀಸರು ಹುಡುಕುತ್ತಿದ್ದಾರೆ.
ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಸಾಹಸ ದೃಶ್ಯದಲ್ಲಿ ನಟಿಸುತ್ತಿರುವಾಗ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿದ್ದರಿಂದ ಫೈಟರ್ ವಿವೇಕ್ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದುರ್ಘಟನೆಯಲ್ಲಿ ರಂಜಿತ್ ಎಂಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬೆಳಗ್ಗೆ 10 ಗಂಟೆ ಬಳಿಕ ವಿವೇಕ್ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಫೈಟರ್ ವಿವೇಕ್ ಶವ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುವುದು.
‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ಗೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಚಿತ್ರೀಕರಣ ವೇಳೆ ರೋಪ್ ಎಳೆಯುವಾಗ ದುರಂತ ನಡೆದಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ದುರ್ಘಟನೆಗೆ ಕಾರಣ ಎಂಬ ಆರೋಪ ಎದುರಾಗಿದೆ. ಹಾಗಾಗಿ ವಿವೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಶೂಟಿಂಗ್ ಸೆಟ್ಗೆ ಬರುವುದಿಲ್ಲ ಎಂದು ಅಜಯ್ ರಾವ್ ಸೋಮವಾರ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ:
Fighter Vivek Death: ಶೂಟಿಂಗ್ ವೇಳೆ ಫೈಟರ್ ಸಾವು; ಗಂಟೆಗಳೇ ಕಳೆದ್ರೂ ಆಸ್ಪತ್ರೆ ಬಳಿ ಬಾರದ ಚಿತ್ರತಂಡ
ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್ಗೆ ನ್ಯಾಯ ಸಿಗುವವರೆಗೆ ಶೂಟಿಂಗ್ಗೆ ಬರಲ್ಲ’; ಅಜಯ್ ರಾವ್
(Fighter Vivek Death: Love You Racchu producer Guru Deshpande abscond after the incident)