ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದು ಕಣ್ಣೀರ ವಿದಾಯ ಹೇಳಿದ ಗಣ್ಯರು, ಹಣೆಗೆ ಮುತ್ತಿಟ್ಟು ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು

| Updated By: ಆಯೇಷಾ ಬಾನು

Updated on: Jun 15, 2021 | 12:12 PM

Sanchari Vijay Last Sight ಸ್ನೇಹಜೀವಿ.. ಕಷ್ಟಗಳನ್ನೇ ಮೆಟ್ಟಿನಿಂತ ಕಲಾವಿದ.. ಬಣ್ಣದ ಲೋಕದಲ್ಲಿ ಅಂಬೆಗಾಲಿಡುತ್ತಲೇ ಬೆಳೆದ ನಟ.. ಹಂತ ಹಂತವಾಗಿ ತಮ್ಮದೇ ಆದ ಚಾಪು ಮೂಡಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಛಲಗಾರ. ಆದ್ರೆ, ಇಂತಹ ಪ್ರತಿಭಾವಂತ ನಟ ಸಂಚಾರಿ ವಿಜಯ್, ಬದುಕಿನ ಪಯಣ ಮುಗಿಸಿದ್ದಾರೆ.

ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದು ಕಣ್ಣೀರ ವಿದಾಯ ಹೇಳಿದ ಗಣ್ಯರು, ಹಣೆಗೆ ಮುತ್ತಿಟ್ಟು ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು
Follow us on

ಬೆಂಗಳೂರು: ಬೆಟ್ಟದಂತಹ ಕನಸು ಕಂಡಿದ್ರು.. ಬಹುದೊಡ್ಡ ಗುರಿ ಕಣ್ಮುಂದೆ ಇತ್ತು. ಕಷ್ಟಗಳು ಎದುರಾದ್ರೂ ಅವಕಾಶಗಳು ಕಡಿಮೆ ಸಿಕ್ಕರೂ ಹಿಂದೆ ಸರಿದಿರಲಿಲ್ಲ. ಸಹನೆ ಕಳೆದುಕೊಳ್ಳಲಿರಲಿಲ್ಲ. ಚಿಕ್ಕ ಚಿಕ್ಕ ಅವಕಾಶಗಳಲ್ಲೇ ತಮ್ಮನ್ನ ತಾವು ಗುರುತಿಸಿಕೊಂಡಿದ್ರು. ಹೀಗೆ ಸಿನಿಮಾ ಕ್ಷೇತ್ರದಲ್ಲೂ ಚಾಪು ಮೂಡಿಸಿದ್ದ ನಟ ಸಂಚಾರಿ ವಿಜಯ್ ಸಂಚಾರ ಮುಗಿಸಿದ್ದಾರೆ. ರಂಗಭೂಮಿ, ಧಾರವಾಹಿ, ಸಿನಿಮಾ ನಟನಾಗಿ ಮಿಂಚಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ಗೆ ಇಂದು ಅಂತಿಮ ನಮನ ಸಲ್ಲಿಸಲಾಗುತ್ತಿದೆ. ಈ ವೇಳೆ ಕುಟುಂಬಸ್ಥರು, ಗಣ್ಯರು, ಸ್ನೇಹಿತರು ಕಂಬನಿಯ ವಿದಾಯ ಹೇಳಿದ್ದಾರೆ.

ಚಿಕ್ಕಪ್ಪನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಣ್ಣನ ಮಗಳು
ಇಂದು ಮುಂಜಾನೆ 3.30ರ ಸಮಯಕ್ಕೆ ವಿಜಯ್ ತಮ್ಮ ಕೊನೆ ಉಸಿರು ನಿಲ್ಲಿಸಿದ್ರು. ಸುಮಾರು 7 ಗಂಟೆಯ ಬಳಿಕ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕಪ್ಪನ ಪಾರ್ಥಿವ ಶರೀರ ನೋಡಿ ಸಂಚಾರಿ ವಿಜಯ್ ಅಣ್ಣನ ಮಗಳು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಕಣ್ಣೀರು ತರಿಸುವಂತಿತ್ತು. ಬಾಕ್ಸ್ ಓಪನ್ ಮಾಡಿ ಪಾರ್ಥಿವ ಶರೀರಕ್ಕೆ ಹೂವಿನ ಹಾರ ಹಾಕಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಾರ್ಥಿವ ಶರೀರಕ್ಕೆ ಹಣೆಗೆ ವಿಭೂತಿ ಸಮರ್ಪಣೆ ಮಾಡಿ ಮುತ್ತಿಟ್ಟು ಕಣ್ಣೀರು ಹಾಕಿದ್ದಾರೆ.

ಡ್ರೈವರ್ ದೇವು ಕಣ್ಣೀರು
ಸಂಚಾರಿ ವಿಜಯ್ ಕಳೆದುಕೊಂಡು ಡ್ರೈವರ್ ದೇವು ಕಣ್ಣೀರು ಹಾಕಿದ್ದಾರೆ. ಐದು ವರ್ಷದಿಂದ ಡ್ರೈವರ್ ಆಗಿದ್ದೆ. ನಾನು ಇಲ್ಲ ಅಂದ್ರೆ ಗಾಡಿ ಹತ್ತುತ್ತಾ ಇರ್ಲಿಲ್ಲ. ಮಗನ ರೀತಿ ನೋಡಿಕೊಳ್ಳುತ್ತಿದ್ದರು. ಪ್ರೀತಿ, ವಿಶ್ವಾಸದಿಂದ ಕಷ್ಟ-ಸುಖ ವಿಚಾರಿಸುತ್ತಿದ್ದರು ಎಂದು ಕಣ್ಣೀರು ಹಾಕಿದ್ದಾರೆ.

ವಿಜಯ್ ಬದುಕಲಿ ಎಂದು ಮೃತ್ಯುಂಜಯ ಜಪ ಮಾಡಿದ್ದೆ
ನಟ ಸಂಚಾರಿ ವಿಜಯ್ ಕಳೆದುಕೊಂಡು ವಿಜಯ್ ಸಾಕುತಾಯಿ ಇಂದಿರಮ್ಮ ಕಣ್ಣೀರು ಹಾಕಿದ್ದಾರೆ. ವಿಜಯ್ ಬದುಕಲಿ ಎಂದು ಮೃತ್ಯುಂಜಯ ಜಪ ಮಾಡಿದ್ದೆ. ವಿಜಯ್ ಬದುಕಿ ಬರುತ್ತಾನೆ ಅಂದುಕೊಂಡಿದ್ದೆ. ಮೃತ್ಯುಂಜಯ ಜಪ ಸೇರಿದಂತೆ ಯಾವುದೂ ಕೂಡ ಫಲಿಸಲಿಲ್ಲ ಎಂದು ಟಿವಿ9ಗೆ ವಿಜಯ್ ಸಾಕುತಾಯಿ ಇಂದಿರಮ್ಮ ವಿಜಯ್ ನೆನೆದು ಕಣ್ಣೀರು ಹಾಕಿದ್ದಾರೆ. ವಿಜಯ್ ಅಂಗಾಂಗ ದಾನದಿಂದ ಆರೇಳು ಜನರಿಗೆ ನೆರವು ಸಿಕ್ಕಿದೆ. ನನ್ನ ಮಗ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ಹೇಳಿದ್ರು.

ವಿಜಯ್ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿ
ಹಾಸನದ ವಿದ್ಯಾನಗರದ ಶಿವಶಂಕರ್ ಎಂಬ ಅಭಿಮಾನಿ ಪೆನ್ಸಿಲ್ ನಿಂದ ಸಂಚಾರಿ ವಿಜಯ್ ಆಕರ್ಷಕ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನೆಚ್ಚಿನ ನಟನಿಗೆ ಪ್ರೀತಿಯಿಂದ‌ ಚಿತ್ರ ಬರೆದು ಕಣ್ಣೀರ ವಿದಾಯ ಹೇಳಿದ್ದಾರೆ.

ಶಿವಶಂಕರ್ ಎಂಬ ಅಭಿಮಾನಿ ಪೆನ್ಸಿಲ್ ನಿಂದ ಸಂಚಾರಿ ವಿಜಯ್ ಆಕರ್ಷಕ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

ಅಂತಿಮ ದರ್ಶನ ಪಡೆದ ಗಣ್ಯರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಪರೂಪದ, ಸ್ನೇಹ ಜೀವಿ ಸಂಜಾರಿ ವಿಜಯ್ನನ್ನು ಇಷ್ಟವಿಲ್ಲದಿದ್ದರೂ ಅಂತಿಮವಾಗಿ ಬೀಳ್ಕೊಡಲು ಸಿನಿ ನಾಯಕರು, ರಾಜಕಾರಣಿಗಳು, ಅಭಿಮಾನಿಗಳು ಬರುತ್ತಿದ್ದಾರೆ. ಮಾಜಿ ಶಾಸಕ ವೈ ಎಸ್ ವಿ ದತ್ತ, ನಟ ರಂಗಾಯಣ ರಘು, ಡಾಲಿ ಧನಂಜಯ್, ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಪಾರುಲ್ ಯಾದವ್, ನಟ ನೀನಾಸಂ ಸತೀಶ್, ಹಿರಿಯ ರಂಗಭೂಮಿ ಕಲಾವಿದೆ ಬಿ ಜಯಶ್ರೀ, ಮಂಗಳಮುಖಿಯರು, ಅಕ್ಕೈಪದ್ಮಸಾಲಿ, ಮಂಗಳಮುಖಿ ಸುಮಿತ್ರಾ ಅಂತಿಮ ದರ್ಶನ ಪಡೆದಿದ್ದಾರೆ.

ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಅಕ್ಕೈ ಪದ್ಮಸಾಲಿ
ನಾನು ಅವನಲ್ಲ ಅವಳು ಚಿತ್ರದಲ್ಲಿ ನಟ ಸಂಚಾರಿ ವಿಜಯ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ತುಳಿತಕ್ಕೊಳಗಾದ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದರು. ಸಂಚಾರಿ ವಿಜಯ್‌ರನ್ನು ತುಂಬಾ ಹತ್ತಿರದಿಂದ ಕಂಡಿದ್ದೇವೆ. ಶೋಷಿತ ವರ್ಗಕ್ಕೆ ಏನಾದರೂ ಮಾಡಬೇಕೆಂದು ಬಯಸ್ತಿದ್ರು. ಸ್ನೇಹ ಜೀವಿಯಾಗಿದ್ದರು. ‘ನಾನು ಅವನಲ್ಲ ಅವಳು’ ಚಿತ್ರೀಕರಣ ವೇಳೆ ನಮ್ಮ ಜತೆಗಿದ್ದರು. ನಮ್ಮ ಜೀವನದ ಬಗ್ಗೆ ಅವರು ಸಿನಿಮಾದಲ್ಲಿ ತೋರಿಸಿದ್ದರು. ಲೈಂಗಿಕ ಅಲ್ಪಸಂಖ್ಯಾತರು ಅವರ ಋಣ ತೀರಿಸಲು ಆಗಲ್ಲ ಎಂದು ಅಕ್ಕೈ ಪದ್ಮಸಾಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಟ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರ ನೆರವೇರಲಿದೆ. ಒಂದು ಗಂಟೆ ಸಾರ್ವಜನಿಕ ದರ್ಶನದ ಬಳಿಕ ಸಂಚಾರಿ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

Published On - 10:24 am, Tue, 15 June 21