ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿಗೆ ವಂಚನೆ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ರಾಹುಲ್ ಥೋನ್ಸೆ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂಜನಾ ಈ ಕುರಿತು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ಅದರಲ್ಲಿ ಅವರು ‘ತಾವು ಕೊಟ್ಟ ಹಣ ಬಳಸಿಕೊಂಡು ಲಾಭ ಗಳಿಸಿದ್ದಾರೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ತನ್ನ ಘನತೆಗೆ ಧಕ್ಕೆ ಬರುವಂತಾಗಿದೆ. ಇದಲ್ಲದೇ ರಾಹುಲ್ ಥೋನ್ಸೆ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದ ರಾಹುಲ್ ವಿರುದ್ಧ ದೂರು ದಾಖಲಿಸಬೇಕು’ ಎಂದು ಸಂಜನಾ ಮನವಿ ಮಾಡಿದ್ದರು.
ಸಂಜನಾ ದಾಖಲಿಸಿದ್ದ ಪಿಸಿಆರ್ ಅನ್ನು ವಿಚಾರಣೆ ನಡೆಸಿದ್ದ 4ನೇ ಎಸಿಎಂಎಂ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಸ್ತುತ ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂಜನಾ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ, ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಐಪಿಸಿ ಸೆಕ್ಷನ್ 120ಬಿ, 107, 354, 406, 420, 506, ಕಲಂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂಜನಾ ಆರೋಪವೇನು?
ಗೋವಾ ಮತ್ತು ಕೊಲಂಬೊದಲ್ಲಿ ತಾನು ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್. ಅವುಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ರಾಹುಲ್ ಥೋನ್ಸೆ ಸಂಜನಾಗೆ ಆಮಿಷ ಒಡ್ಡಿದ್ದರಂತೆ. ಇದರಂತೆ ಕಳೆದ ಮೂರು ವರ್ಷಗಳಿಂದ ಥೋನ್ಸೆ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ ನಟಿ ಸಂಜನಾ ಹಣ ಹಾಕಿದ್ದರು. ಬಳಿಕ ಯಾವುದೇ ಲಾಭಾಂಶ ನೀಡದೆ, ಹಣ ವಾಪಸ್ ಕೇಳಿದರೂ ಹಿಂದಿರುಗಿಸಿಲ್ಲ. ಜೊತೆಗೆ ತಾವು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಗಳಿಸಿರುವುದಲ್ಲದೇ, ತಮ್ಮ ಘನತೆಗೆ ಧಕ್ಕೆ ತರುವಂತೆ ಸುಳ್ಳು ಆರೋಪಗಳನ್ನ ಮಾಡಿದ್ದಾರೆ ಎಂದು ಸಂಜನಾ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು.
ಇದನ್ನೂ ಓದಿ:
‘ಟಿಕ್ಟಾಕ್ ಬ್ಯಾನ್ ಆದಾಗ ಇದ್ದ ಒಂದು ಕೆಲಸವೂ ಹೋಯ್ತು’- ಕಷ್ಟದ ಕತೆ ತೆರೆದಿಟ್ಟ ಖ್ಯಾತ ನಟ; ಮುಂದೇನಾಯ್ತು?
ದುರ್ಗಾ ಮಾತೆ ವೇಷದಲ್ಲಿ ಸಂಜನಾ ಗಲ್ರಾನಿ; ನವರಾತ್ರಿ ಪ್ರಯುಕ್ತ ವಿಶೇಷ ಫೋಟೋಶೂಟ್
Published On - 8:58 am, Wed, 20 October 21