
ನಟಿ ರಮ್ಯಾಗೆ ದರ್ಶನ್ (Darshan) ಅಭಿಮಾನಿಗಳು ಅಶ್ಲೀಲವಾಗಿ ಕಮೆಂಟ್ ಮಾಡಿದ್ದನ್ನು ಮಹಿಳಾ ಆಯೋಗ ಖಂಡಿಸಿತ್ತು. ಅದೇ ರೀತಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರಿಗೂ ಕೆಲವು ಕಿಡಿಗೇಡಿಗಳು ಅಶ್ಲೀಲ ಕಮೆಂಟ್ ಮಾಡಿರುವುದು ಮಹಿಳಾ ಆಯೋಗದ ಗಮನಕ್ಕೆ ಬಂದಿದೆ. ಅಸಭ್ಯ, ಅಶ್ಲೀಲ ಕಮೆಂಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ ಬರೆದಿತ್ತು. ಅದರ ಬೆನ್ನಲ್ಲೇ ಪೊಲೀಸರು ಎಫ್ಐಆರ್ (FIR) ದಾಖಲು ಮಾಡಿದ್ದಾರೆ. ಅಸಭ್ಯ ಪದ ಬಳಸಿ ನಿಂದಿಸಿದ್ದ 4-5 ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಕೇಸ್ ಹಾಕಿ ತನಿಖೆ ಆರಂಭಿಸಲಾಗಿದೆ.
ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ನಿಂದ ಸ್ವಯಂಪ್ರೇರಿತ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಅಶ್ಲೀಲ ಕಮೆಂಟ್ ಮಾಡಿದ ಖಾತೆಗಳ ವಿರುದ್ಧ ಪಿಎಸ್ಐ ಲೋಕೇಶ್ ದೂರು ನೀಡಿದ್ದಾರೆ. BNS ಸೆಕ್ಷನ್ 75, 79, ಐಟಿ ಆ್ಯಕ್ಟ್ 67, 66ರ ಅಡಿ ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಿತಿ ಮೀರಿ ನಡೆದುಕೊಳ್ಳುತ್ತಾರೆ. ಮಹಿಳೆಯರಿಗೆ ಅಶ್ಲೀಲ ಮತ್ತು ಅಸಭ್ಯ ಸಂದೇಶ ಕಳಿಸಲಾಗುತ್ತದೆ. ಅಂಥವರಿಗೆ ಸೈಬರ್ ಪೊಲೀಸರು ಪಾಠ ಕಲಿಸಲಿದ್ದಾರೆ. ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುವ ಕಿಡಿಗೇಡಿಗಳಿಗೆ ಈಗ ಬಿಸಿ ಮುಟ್ಟುತ್ತಿದೆ. ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಹಲವರನ್ನು ಈಗಾಗಲೇ ಬಂಧಿಸಲಾಗಿದೆ.
ಅಸಭ್ಯವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಆ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹೇಳಿಕೆ ನೀಡಿದ್ದಾರೆ. ‘ಇದರ ಬಗ್ಗೆ ತನಿಖೆ ಮಾಡಿ 15 ದಿನದಲ್ಲಿ ವರದಿ ನೀಡಲು ಸೂಚಸಿದ್ದೇವೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಾಜಿ ಸಂಸದೆ ರಮ್ಯಾ ಅಂತೇನಿಲ್ಲ. ಯಾವುದೇ ಹೆಣ್ಣುಮಕ್ಕಳ ಘನತೆಗೆ ಧಕ್ಕೆ ಉಂಟು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ದರ್ಶನ್ ಬೇಗ ವಾಪಸ್ ಬರ್ತಾರೆ’: ದಿ ಡೆವಿಲ್ ಸಿನಿಮಾ ಪ್ರಚಾರ ಆರಂಭಿಸಿದ ವಿಜಯಲಕ್ಷ್ಮಿ
‘ಈಗಾಗಲೇ ರಮ್ಯಾ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದ 8 ಜನರು ಜೈಲಿನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳ ಚಾರಿತ್ರ್ಯ ವಧೆ ಮಾಡಲು ಬಳಸಬೇಡಿ. ಅವಹೇಳನ ಮಾಡಿದರೆ ಜೈಲು ಶಿಕ್ಷೆ ಜೊತೆಗೆ ದಂಡವೂ ಇರುತ್ತದೆ’ ಎಂದು ಬೆಂಗಳೂರಿನಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.