ಸಂಜಿತ್ ಹೆಗ್ಡೆ ಕಂಠದಲ್ಲಿ ಮೂಡಿಬಂದ ‘ಐ ಆ್ಯಮ್ ಗಾಡ್’ ಸಿನಿಮಾದ ಹಾಡು ರಿಲೀಸ್
ಶೀರ್ಷಿಕೆ ಮೂಲಕ ಗಮನ ಸೆಳೆದ ‘ಐ ಆ್ಯಮ್ ಗಾಡ್’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಿದೆ. ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ ಈ ಗೀತೆಯನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಹಾಡಿನ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕ ರವಿ ಗೌಡ ಮಾತನಾಡಿದ್ದಾರೆ.

ಗಾಯಕ ಸಂಜಿತ್ ಹೆಗ್ಡೆ (Sanjith Hegde) ಧ್ವನಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಕಂಠದಲ್ಲಿ ಬಂದ ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ಈಗ ಅವರು ‘ಐ ಆ್ಯಮ್ ಗಾಡ್’ (I’m God) ಸಿನಿಮಾದ ಹೊಸ ಹಾಡಿಗೆ ಧ್ವನಿ ಆಗಿದ್ದಾರೆ. ಇತ್ತೀಚೆಗೆ ಆ ಹಾಡು ಬಿಡುಗಡೆ ಆಗಿದೆ. ‘ಐ ಆ್ಯಮ್ ಗಾಡ್’ ಸಿನಿಮಾದ ಮೂಲಕ ತೆರೆಮೇಲೆ ಹೀರೋ ಆಗಿ ಮಿಂಚಲು ನಟ ರವಿ ಗೌಡ (Ravi Gowda) ಸಜ್ಜಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದರು. ಈಗ ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಪ್ರಯತ್ನಿಸಿದೆ.
‘ಐ ಆ್ಯಮ್ ಗಾಡ್’ ಸಿನಿಮಾದಲ್ಲಿ ರವಿ ಗೌಡ ಅವರು ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜಬಾವ್ದಾರಿಯನ್ನೂ ನಿಭಾಯಿಸಿದ್ದಾರೆ. ರವಿ ಅವರಿಗೆ ಇದು ಮೊದಲ ಸಿನಿಮಾವೇನೂ ಅಲ್ಲ. ಈ ಮುಂಚೆ ‘ಧ್ವಜ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ ಈಗ ‘ಐ ಆ್ಯಮ್ ಗಾಡ್’ ಸಿನಿಮಾದ ಮೂಲಕ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರೀಕರಣ ಮುಗಿಸಿಕೊಂಡಿರುವ ‘ಐ ಆ್ಯಮ್ ಗಾಡ್’ ಚಿತ್ರತಂಡ ಪ್ರಮೋಷನ್ ಕೆಲಸಕ್ಕೆ ಚಾಲನೆ ನೀಡಿದೆ. ಅದರ ಭಾಗವಾಗಿ ಹಾಡು ಬಿಡುಗಡೆ ಮಾಡಲಾಗಿದೆ. ಈಗ ಬಿಡುಗಡೆ ಆಗಿರುವ ಹಾಡಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗಾರ್ಜುನ್ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
‘ನನ್ನ ಪುಟ್ಟ ಲೋಕ’ ಹಾಡು:
ಇದು ರೊಮ್ಯಾಂಟಿಕ್ ಥ್ರಿಲ್ಲರ್ ಕಹಾನಿ ಹೊಂದಿರುವ ಚಿತ್ರ. ಬೆಂಗಳೂರು ಮತ್ತು ಕೇರಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಅಭಿನಯಿಸಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಮುಂತಾದವರು ‘ಐ ಆ್ಯಮ್ ಗಾಡ್’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಪ್ರಿಯಾ ವಾರಿಯರ್ಗೆ ಕನ್ನಡ ಹಾಡು ಕಲಿಸಿದ ಸಂಜಿತ್ ಹೆಗಡೆ
ಹಾಡಿನ ಬಗ್ಗೆ ರವಿ ಗೌಡ ಮಾತನಾಡಿದ್ದಾರೆ. ‘ಈ ಗೀತೆಯಲ್ಲಿ ಹುಡುಗಿ ಮೇಲೆ ಲವ್ ಆದ ಬಳಿಕ ಏನೆಲ್ಲ ಅನುಭವಗಳು ಆಗುತ್ತವೆ ಎನ್ನುವುದನ್ನು ತೋರಿಸಲಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಜೊತೆಗೆ ಸಂಜಿತ್ ಹೆಗ್ಡೆ ಧ್ವನಿ ಈ ಹಾಡಿಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ’ ಎಂದು ಅವರು ಹೇಳಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ ಅವರು ಈಗ ಸಿನಿಮಾದ ಬಿಡುಗಡೆ ಕಡೆಗೆ ಗಮನ ಹರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




