ಬಣ್ಣದ ಲೋಕಕ್ಕೆ ಟಗರು ಎಂಟ್ರಿ: ಮತ್ತೆ ‘ಮುಖ್ಯಮಂತ್ರಿ’ ಆಗಲಿದ್ದಾರೆ ಸಿದ್ದರಾಮಯ್ಯ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ಳಿತೆರೆಯಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಿದ್ದರಾಮಯ್ಯ, ಇದೀಗ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು....ಕನ್ನಡ ಸಿನಿಮಾವೊಂದರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಹಾಗಾದ್ರೆ, ಯಾವುದು ಆ ಸಿನಿಮಾ? ಸಿನಿಮಾವನ್ನು ಯಾರು ನಿರ್ದೇಶನ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬಣ್ಣದ ಲೋಕಕ್ಕೆ ಟಗರು ಎಂಟ್ರಿ: ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!
Siddaramaiah

Updated on: Sep 24, 2026 | 10:55 PM

ಬೆಂಗಳೂರು, (ಸೆಪ್ಟೆಂಬರ್ 24): ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಅದರಲ್ಲೂ, ರಿಯಲ್ ಲೈಫ್‌ನಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, ಈಗ ರೀಲ್ ಲೈಫ್‌ನಲ್ಲೂ ಮುಖ್ಯಮಂತ್ರಿಯ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಹಾಗೂ ನಿರ್ಮಾಪಕ ರಾಜೇಶ್ ಗೌಡ ಅವರ ಆರ್.ಎ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ ಹೊಸ ಸಿನಿಮಾಗೆ ‘ಮುಖ್ಯಮಂತ್ರಿ’ ಎಂಬ ಟೈಟಲ್ ಇಡುವ ಸಾಧ್ಯತೆಯಿದ್ದು, ಈಗಾಗಲೇ ನಿರ್ದೇಶಕರು ಹೇಳಿದ ಕಥೆಯನ್ನು ಕೇಳಿ ಮೆಚ್ಚಿಕೊಂಡಿರುವ ಸಿದ್ದರಾಮಯ್ಯ ಅವರು, ಸಿನಿಮಾದಲ್ಲಿ ಪ್ರಮುಖವಾಗಿ ಬರುವ ಮುಖ್ಯಮಂತ್ರಿಯ ಪಾತ್ರದಲ್ಲಿಯೇ ನಟಿಸಲು ಒಪ್ಪಿಕೊಂಡಿದ್ದಾರೆ.

ಕೇವಲ 48 ಗಂಟೆಗಳಲ್ಲಿ ‘ಸ್ಕ್ರಿಪ್ಟ್ ಟು ಸ್ಕ್ರೀನ್’ ಸಿನಿಮಾ ನಿರ್ಮಾಣ

ಈ ಸಿನಿಮಾದ ಚಿತ್ರಕಥೆ ಬರೆಯುವುದರಿಂದ ಹಿಡಿದು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವವರೆಗಿನ ಎಲ್ಲಾ ಹಂತಗಳನ್ನು ಕೇವಲ 48 ಗಂಟೆಗಳಲ್ಲಿ ಮುಗಿಸಿ ವಿಶ್ವ ದಾಖಲೆ ಬರೆಯುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚಿತ್ರತಂಡ ಹೊಂದಿದ್ದು, ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಮಾಜಿ ಸಿಎಂ ಸಿದ್ದರಾಮಯ್ಯ.

ಇದನ್ನೂ ನೋಡಿ: ‘ಆಗಲ್ಲ ಹೋಗ್ರಯ್ಯ’: ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?

ಈ ಹಿಂದೆಯೂ ಸಣ್ಣ ಪಾತ್ರ ಮಾಡಿದ್ದ ಸಿದ್ದರಾಮಯ್ಯ

ಇದು ಕನ್ನಡ ಚಿತ್ರರಂಗಕ್ಕೆ ಸಿದ್ದರಾಮಯ್ಯ ಅವರ ಮೊದಲ ಎಂಟ್ರಿಯಾದರೂ, ಅವರಿಗೆ ನಟನೆ ಹೊಸದೇನಲ್ಲ. ಯಾಕಂದ್ರೆ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, 2017 ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ಸಮ್ಮರ್ ಹಾಲಿಡೇಸ್ ಎಂಬ ಮಕ್ಕಳ ಚಿತ್ರದಲ್ಲೂ ಸಣ್ಣದೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ, ಸಿದ್ದರಾಮಯ್ಯ ಅವರ ಜೀವನಗಾಥೆಯನ್ನಾಧರಿಸಿದ ಲೀಡರ್ ರಾಮಯ್ಯ ಎಂಬ ಬಯೋಪಿಕ್ ಚಿತ್ರದ ಕೆಲಸಗಳೂ ಪ್ರತ್ಯೇಕವಾಗಿ ನಡೆಯುತ್ತಿದ್ದು, ಅದರಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ ಸೇತುಪತಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಡಿಕೆಶಿ, ಉಮಾಶ್ರೀ ನಟಿಸುವ ಸುಳಿವು ಕೊಟ್ಟ ರೇವಣ್ಣ

ಇನ್ನು ಈ ಬಗ್ಗೆ ಸಿದ್ದರಾಮಯ್ಯನವರ ಆಪ್ತ ಹೆಚ್​​ಎಂ ರೇವಣ್ಣ ಮಾತನಾಡಿದ್ದು, ಹಿಂದೆ ಅದ್ಯಾವುದೋ ಸಿನಿಮಾದಲ್ಲಿ ನಟಿಸಿದ್ರು. ಮೊದ ಮೊದಲು ಹೇ ಬೇಡ ಇದೆಲ್ಲ ಆಗಲ್ಲ ಅಂತ ಹೇಳಿದ್ರು. ಆಮೆಲೇ ಹೇಳಿ ಒಪ್ಪಿಸಿದ್ದೇವೆ. 48 ಗಂಟೆಗಳಲ್ಲಿ ಸಿನಿಮಾವನ್ನು ಶೂಟ್ ಮಾಡಲು ತಂಡ ಪ್ಲಾನ್ ಮಾಡಿದ್ದು, ಇದರಲ್ಲಿ ಡಿಕೆ ಶಿವಕುಮಾರ್ಮ ಉಮಾಶ್ರಿ ಅವರು ನಟಿಸೋ ಸಾಧ್ಯತೆ ಇದೆ ಎಂದಿದ್ದಾರೆ.

ಕೇವಲ ಸಿದ್ದರಾಮಯ್ಯ ಜೊತೆ ರಾಜ್ಯದ ಪ್ರಮುಖ ರಾಜಕೀಯ ದಿಗ್ಗಜರನ್ನೇ ಒಂದೇ ಸಿನಿಮಾದಲ್ಲಿ ತರಲು ರಾಜೇಶ್ ಗೌಡ ಭರ್ಜರಿ ಯೋಜನೆ ರೂಪಿಸಿದ್ದು, ಸಿನಿಮಾ ಯಾವ ಮಟ್ಟಕ್ಕೆ ಹಿಟ್ ಆಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us