ಸೂಪರ್ ಹಿಟ್ ‘ಹನುಮಾನ್’ ರೀತಿ ಮೂಡಿಬರಲಿದೆ ಕನ್ನಡದ ‘ಗದಾಧಾರಿ ಹನುಮಾನ್’
‘ಗದಾಧಾರಿ ಹನುಮಾನ್’ ಸಿನಿಮಾದಲ್ಲಿ ನಟ ರವಿ ಅವರು ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ 2 ಹಂತದ ಶೂಟಿಂಗ್ ಮುಗಿದಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣ ಶೀಘ್ರವೇ ಆರಂಭ ಆಗಲಿದೆ. ರೋಹಿತ್ ಕೊಲ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ ‘ಹನುಮಾನ್’ ರೀತಿ ಈ ಸಿನಿಮಾ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಅನೇಕ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಆ ಪೈಕಿ ‘ಗದಾಧಾರಿ ಹನುಮಾನ್’ ಸಿನಿಮಾ ವಿಶೇಷವಾಗಿ ಗಮನ ಸೆಳೆದಿದೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಜೊತೆಗೆ ಚಿತ್ರತಂಡದ ಬಗ್ಗೆ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ. ಬಹುಕಾಲದ ಬಳಿಕ ಕನ್ನಡ ಚಿತ್ರರಂಗದಲ್ಲಿ ಆಂಜನೇಯನ ಕುರಿತು ಸಿನಿಮಾ ಮೂಡಿಬರುತ್ತಿದೆ. ಹಾಗೆಂದ ಮಾತ್ರಕ್ಕೆ ಇದು ಭಕ್ತಿಪ್ರಧಾನ ಸಿನಿಮಾ ಅಲ್ಲ ಎಂದು ಕೂಡ ಚಿತ್ರತಂಡ ಹೇಳಿದೆ. ಹಾಗಾದರೆ ಈ ಸಿನಿಮಾ ಹೇಗಿರಲಿದೆ? ಆ ಬಗ್ಗೆಯೂ ಮಾಹಿತಿ ಸಿಕ್ಕಿದೆ.
2024ರ ಜನವರಿಗೆ ತೆಲುಗಿನ ‘ಹನುಮಾನ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿತು. ಆ ಸಿನಿಮಾದಲ್ಲಿ ಸೂಪರ್ ಹೀರೋ ಕಹಾನಿ ಇತ್ತು. ಈಗ ‘ಗದಾಧಾರಿ ಹನುಮಾನ್’ ಸಿನಿಮಾ ಕೂಡ ಅದೇ ರೀತಿ ಒಂದು ಡಿಫರೆಂಟ್ ಕಥೆಯನ್ನು ಹೊಂದಿರಲಿದೆ. ಶೀರ್ಷಿಕೆ ಜೊತೆಗೆ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಸಿನಿಮಾ ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಸಿದ್ಧವಾಗುತ್ತಿದೆ ಎಂಬುದು ವಿಶೇಷ.
ಬಸವರಾಜ್ ಹುರಕಡ್ಲಿ ಹಾಗೂ ರೇಣುಕಾ ಪ್ರಸಾದ್ ಕೆ.ಆರ್. ಅವರು ಜಂಟಿಯಾಗಿ ‘ವಿರಭ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ‘ಗದಾಧಾರಿ ಹನುಮಾನ್’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅವರಿಗೆ ಇದು ಹೊಸ ಅನುಭವ. ನಿರ್ಮಾಣದ ಜೊತೆಗೆ ಬಸವರಾಜ್ ಹುರಕಡ್ಲಿ ಅವರು ಒಂದು ಮಹತ್ವದ ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ. ರೋಹಿತ್ ಕೊಲ್ಲಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
‘ಗದಾಧಾರಿ ಹನುಮಾನ್’ ಸಿನಿಮಾಗೆ ‘ತಾರಕಾಸುರ’ ಖ್ಯಾತಿಯ ರವಿ ಅವರು ಹೀರೋ. ಇದು ಅವರ ನಾಲ್ಕನೇ ಸಿನಿಮಾ. ಹೊಸ ನಟಿ ಹರ್ಷಿತಾ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಕಲ್ಯಾಣ್ ಕೃಷ್ಣ, ಸುನಂದಾ ಕಲ್ಬುರ್ಗಿ, ನಾಗೇಶ್ ಮಯ್ಯ, ರಮೇಶ್ ಪಂಡಿತ್, ಶಿವಪ್ಪ, ಭೀಷ್ಮ, ಅರ್ಜುನ್ ಜೋಯಸ್, ಲೋಕೇಶ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: 45 ಕೋಟಿ ರೂ. ಬಜೆಟ್ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್
ಜ್ಯೂಡಾ ಸ್ಯಾಂಡಿ ಅವರು ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಅರುಣ್ ಗೌಡ ಹೊತ್ತಿದ್ದಾರೆ. ಸಿ.ಎನ್. ಕಿಶೋರ್ ಅವರು ಸಂಕಲನ ಮಾಡುತ್ತಿದ್ದಾರೆ. ಟೈಗರ್ ಶಿವ ಅವರ ಸಾಹಸ ನಿರ್ದೇಶನ ಈ ಸಿನಿಮಾಗೆ ಇದೆ. ಚೇತನ್.ಎ.ಸಿ. ಅವರು ಕಲರಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಹಂಪಿ, ಅಂಜನಾದ್ರಿಬೆಟ್ಟ, ಗಂಗಾವತಿ, ಕಿತ್ತೂರು, ಹೊನ್ನಾಪುರ, ದಾಂಡೇಲಿ ಮುಂತಾದ ಕಡೆಗಳಲ್ಲಿ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. 4 ಹಂತಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.