ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಪ್ರವೇಶ

| Updated By: ರಾಜೇಶ್ ದುಗ್ಗುಮನೆ

Updated on: Jan 04, 2022 | 6:57 PM

ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಯಾವ ವಿಚಾರವೂ ಅಧಿಕೃತ ಆಗಿರಲಿಲ್ಲ.

ಬಣ್ಣದ ಲೋಕಕ್ಕೆ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಪ್ರವೇಶ
ಜನಾರ್ಧನ ರೆಡ್ಡಿ-ಕಿರೀಟಿ ರೆಡ್ಡಿ
Follow us on

ಚಿತ್ರರಂಗಕ್ಕೂ ರಾಜಕೀಯಕ್ಕೂ ಎಲ್ಲಿಲ್ಲದ ನಂಟು. ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಉದಾಹರಣೆ ಇದೆ. ಅದೇ ರೀತಿ, ಹಲವು ರಾಜಕಾರಣಿಗಳ ಮಕ್ಕಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ಮಾಜಿ ಸಚಿವ ಜನಾರ್ದನ ​ ರೆಡ್ಡಿ ಮಗ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಶೀಘ್ರವೇ ಅವರು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಯಾರು? ನಿರ್ಮಾಣ ಯಾರದ್ದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಯಾವ ವಿಚಾರವೂ ಅಧಿಕೃತ ಆಗಿರಲಿಲ್ಲ. ಆದರೆ, ಈಗ ಕಿರೀಟಿ ರೆಡ್ಡಿ ಲಾಂಚ್​ ಮಾಡೋಕೆ ವೇದಿಕೆ ರೆಡಿ ಆಗಿದೆ ಎನ್ನಲಾಗಿದೆ. ಎಲ್ಲವೂ ಅಂತಿಮ ಹಂತದಲ್ಲಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.

ಪುನೀತ್​ ರಾಜ್​ಕುಮಾರ್ ಒಡೆತನದ ಪಿಆರ್​ಕೆ ಪ್ರೊಡಕ್ಷನ್​ ಅಡಿಯಲ್ಲಿ ಸಿದ್ಧವಾದ ‘ಮಾಯಾ ಬಜಾರ್​ 2016’ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದರು. ಈ ಚಿತ್ರ ಎಂಟರ್​ಟೇನಿಂಗ್​ ಆಗಿತ್ತು. ಈಗ ಇದೇ ರಾಧಾಕೃಷ್ಣ ಅವರು ಕಿರೀಟಿ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಈಗ’ ಸಿನಿಮಾ ನಿರ್ಮಾಣ ಮಾಡಿದ್ದ ಸಾಯಿ ಕೋರ್ರಾಪಾಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಜನಾರ್ದನ ರೆಡ್ಡಿ ಅವರಿಗೆ ತೆಲುಗು ನಾಡಿನ ಜತೆಗೂ ಒಳ್ಳೆಯ ಒಡನಾಟ ಇದೆ. ಈ ಕಾರಣಕ್ಕೆ ಈ ಸಿನಿಮಾ ತೆಲುಗು ಹಾಗೂ ಕನ್ನಡ ಎರಡಲ್ಲೂ ಸಿದ್ಧಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕಾಗಿ ಕಿರೀಟಿ ನಟನಾ ತರಬೇತಿ ಕೂಡ ಪಡೆದು ಬಂದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ’ ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು.

ಇದನ್ನೂ ಓದಿ: ‘ನಾನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಇದ್ದೆ’; ಸಮಂತಾ ಹೀಗೆ ಮರುಗಿದ್ದೇಕೆ?

ಬೋಲ್ಡ್​ ದೃಶ್ಯಗಳಲ್ಲೇ ಮಿಂಚುತ್ತಿದ್ದಾರೆ ಕೃತಿ ಶೆಟ್ಟಿ; ವೈರಲ್​ ಆಗುತ್ತಿವೆ ಫೋಟೋಗಳು

Published On - 6:09 pm, Tue, 4 January 22