Gandhada Gudi: ಊರ್ವಶಿ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಶೋ ಕ್ಯಾನ್ಸಲ್​; ಟಿಕೆಟ್​ ಬೆಲೆ ಇಳಿಕೆ ವಿಚಾರದಲ್ಲಿ ಗೊಂದಲ

| Updated By: ಮದನ್​ ಕುಮಾರ್​

Updated on: Nov 07, 2022 | 12:46 PM

Gandhada Gudi Ticket Price: ಊರ್ವಶಿ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಟಿಕೆಟ್​ ಬೆಲೆ ಕಡಿಮೆ ಆಗಿರಲಿಲ್ಲ. ಅದನ್ನು ಪ್ರಶ್ನಿಸಿದಾಗ ಪ್ರೇಕ್ಷಕರು ಮತ್ತು ಥಿಯೇಟರ್​ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

Gandhada Gudi: ಊರ್ವಶಿ ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಶೋ ಕ್ಯಾನ್ಸಲ್​; ಟಿಕೆಟ್​ ಬೆಲೆ ಇಳಿಕೆ ವಿಚಾರದಲ್ಲಿ ಗೊಂದಲ
ಪ್ರೇಕ್ಷಕರು ಮತ್ತು ಥಿಯೇಟರ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ
Follow us on

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಬೆಳ್ಳಿಪರದೆ ಮೇಲೆ ಕೊನೇ ಬಾರಿ ಕಾಣಿಸಿಕೊಂಡಿರುವ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಎಲ್ಲ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಇನ್ನಷ್ಟು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ಪಿಆರ್​ಕೆ ಪ್ರೊಡಕ್ಷನ್ಸ್​ ವತಿಯಿಂದ ಟಿಕೆಟ್​ ಬೆಲೆ ತಗ್ಗಿಸಲಾಗಿದೆ. 4 ದಿನಗಳ ಕಾಲ ಬೆಲೆ ಇಳಿಕೆ ಮಾಡಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಊರ್ವಶಿ (Urvashi Theatre) ಚಿತ್ರಮಂದಿರದಲ್ಲಿ ಗೊಂದಲ ಉಂಟಾಗಿದೆ. ಹಾಗಾಗಿ ಕೆಲವು ನಿಮಿಷಗಳ ಕಾಲ ಥಿಯೇಟರ್ ಸಿಬ್ಬಂದಿ ಮತ್ತು ಪ್ರೇಕ್ಷಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ತಾಂತ್ರಿಕ ಕಾರಣ ನೀಡಿ ‘ಗಂಧದ ಗುಡಿ’ (Gandhada Gudi) ಶೋ ಕ್ಯಾನ್ಸಲ್​ ಮಾಡಲಾಗಿದೆ. ಇದರಿಂದ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ (ನ.7) ನಾಲ್ಕು ದಿನಗಳ ಕಾಲ, ಅಂದರೆ ನ.10ರವರೆಗೆ ಎಲ್ಲ ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳಲ್ಲಿ 56 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿ ದರ ನಿಗದಿ ಮಾಡಿರುವ ಬಗ್ಗೆ ಭಾನುವಾರ (ನ.6) ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಮಾಹಿತಿ ನೀಡಿದರು. ಆದರೆ ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್​ ಬೆಲೆ ಕಡಿಮೆ ಆಗಿರಲಿಲ್ಲ. ಅದನ್ನು ಪ್ರಶ್ನಿಸಿದಾಗ ಪ್ರೇಕ್ಷಕರು ಮತ್ತು ಥಿಯೇಟರ್​ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ಆದ ‘ಗಂಧದ ಗುಡಿ’ ಸಾಕ್ಷ್ಯಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಅಕ್ಟೋಬರ್​ 28ರಂದು ರಿಲೀಸ್​ ಆದ ಈ ಡಾಕ್ಯುಮೆಂಟರಿ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಎಲ್ಲ ವಯೋಮಾನದ ಪ್ರೇಕ್ಷಕರು ಕೂಡ ಇದಕ್ಕೆ ಮನ ಸೋತಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತು, ಜೀವವೈವಿದ್ಯದ ಬಗ್ಗೆ ಇದರಲ್ಲಿ ವಿವರಿಸಲಾಗಿದೆ. ಮಕ್ಕಳಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಟಿಕೆಟ್​ ದರ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ
Gandhada Gudi: ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ; ‘ಗಂಧದ ಗುಡಿ’ಯಲ್ಲಿ ಅಪ್ಪು​ ನೋಡಿದ ಬಳಿಕ ನಿರೂಪಕಿ ಭಾವುಕ ಮಾತು
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ

‘ಗಂಧದ ಗುಡಿ’ ಟಿಕೆಟ್​ ದರ ಇಳಿಕೆ ಬಗ್ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್​:

‘ಗಂಧದಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು. ಅದರಲ್ಲೂ ಮಕ್ಕಳು ನೋಡಬೇಕೆಂಬುದು. ಈ ಸಲುವಾಗಿ ನಮ್ಮ ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ಗಂಧದ ಗುಡಿಯನ್ನು 07-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ’ ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ನ.6ರಂದು ಸಂಜೆ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.