ಎಐ ತಂತ್ರಜ್ಞಾನದ ಕುರಿತ ಕನ್ನಡ ಸಿನಿಮಾ ‘ಗರುಡ’; ಇದರಲ್ಲಿವೆ 4 ಪ್ರತ್ಯೇಕ ಕಥೆ

ಇತ್ತೀಚಿನ ದಿನಗಳಲ್ಲಿ ಎಐ ಎಲ್ಲ ಕಡೆಗಳಲ್ಲೂ ರಾರಾಜಿಸುತ್ತಿದೆ. ಅದನ್ನೇ ಕಥಾವಸ್ತುವಾಗಿ ಇಟ್ಟುಕೊಂಡು ‘ಎಐ’ ಸಿನಿಮಾ ಮಾಡಲಾಗಿದೆ. ರಿತ್ವಾನ್ ಶ್ರೀನಿವಾಸ್, ಸೌರವ್ ಪ್ರಶಾಂತ್, ದಿವ್ಯಾ ಚಂದ್ರ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 4 ಬೇರೆ ಬೇರೆ ಕಥೆಗಳು ಈ ಸಿನಿಮಾದಲ್ಲಿ ಇರಲಿವೆ.

ಎಐ ತಂತ್ರಜ್ಞಾನದ ಕುರಿತ ಕನ್ನಡ ಸಿನಿಮಾ ‘ಗರುಡ’; ಇದರಲ್ಲಿವೆ 4 ಪ್ರತ್ಯೇಕ ಕಥೆ
Garuda Movie Team

Updated on: May 13, 2026 | 8:55 AM

ಎಲ್ಲ ಕ್ಷೇತ್ರಕ್ಕೂ ಈಗ ಎಐ (AI) ತಂತ್ರಜ್ಞಾನ ಕಾಲಿಡುತ್ತಿದೆ. ಈಗಾಗಲೇ ಅದು ಹಲವು ಕ್ಷೇತ್ರಗಳಲ್ಲಿ ಹೇರಳವಾಗಿ ಬಳಕೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಜನರ ಮೇಲೆ ಮತ್ತು ಮಕ್ಕಳ ಮೇಲೆ ಎಐ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಸಹಜ. ಎಐ ಎಂಬುದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯೋಗ ಆಗುತ್ತಾ ಎಂಬ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಗರುಡ’ (Garuda) ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಚಿತ್ರತಂಡದವರು ಮಾತನಾಡಿದರು.

‘ಶೈವಂ ಫಿಲ್ಮ್ಸ್’ ಮೂಲಕ ಕಿರಣ್ ಎಸ್. ಅವರು ‘ಗರುಡ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಅವರು ಮಾಹಿತಿ ನೀಡಿದರು. ‘ಇದೊಂದು ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. 2024ರಲ್ಲಿ ಪೈಲಟ್ ಸಿನಿಮಾ ಮಾಡಲು ಹೊರಟಿದ್ದೆವು. ಅದೇ ಈಗ ಗರುಡ ಆಗಿದೆ. ಇದೊಂದು ಫಿಕ್ಷನಲ್, ನಾನ್ ಲೀನಿಯರ್ ಪ್ರಕಾರದ ಸಿನಿಮಾ. 4 ಕಥೆಗಳು ಬೇರೆ ಬೇರೆಯಾಗಿ ಸಾಗುತ್ತ ಒಂದು ಹಂತದಲ್ಲಿ ಸೇರುತ್ತವೆ. ಶೇಕಡ 30ರಿಂದ 40ರಷ್ಟು ಕಥೆ ಎಐ ಕುರಿತು ಇದೆ’ ಎಂದು ಅವರು ಹೇಳಿದರು.

‘ಗರುಡ’ ಸಿನಿಮಾ ಟ್ರೇಲರ್:

ರಿತ್ವಾನ್ ಶ್ರೀನಿವಾಸ್ ಅವರು ‘ಗರುಡ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಇನ್ನೋರ್ವ ನಟ ಸೌರವ್ ಪ್ರಶಾಂತ್ ಅವರು ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಚಂದ್ರ ಅವರು ಅಭಿನಯಿಸಿದ್ದಾರೆ. ಈ ಮೊದಲು ಅವರು ‘ನಮೋ ಭೂತಾತ್ಮ’ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು

ವಿವೇಕ್, ಅಭಿಮಹೇಶ್, ಅಭಿಷೇಕ್, ಕಿರಣ್, ನಯ್ ಪ್ರಭಾಕರ್, ವಿಲ್ ಫ್ರೆಡ್ ವಿವೇಕ್, ಸೌಭಾಗ್ಯ ಹಂದ್ರಾಳ್, ದಿಲೀಪ್ ಕುಮಾರ್, ಬಾಹುಬಲಿ ಮಂಜು ಕೂಡ ‘ಗರುಡ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾವನ್ನು ತೆರೆಕಾಣಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಂತೋಷ್ ಜೋಶ್ವಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:54 am, Wed, 13 May 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us