ಗಿರೀಶ್ ಕಾರ್ನಾಡ್ ಯಾರಿಗೇ ಫೋನ್ ಮಾಡಿದರೂ ಈ ಮಾತನ್ನು ಹೇಳಿಯೇ ಮುಂದುವರಿಯುತ್ತಿದ್ದರು
Girish Karnad Birth Anniversary: ಕಾರ್ನಾಡ್ ಅವರ ಜೊತೆ ರವಿ ಬೆಳಗೆರೆಗೆ ಒಳ್ಳೆಯ ಒಡನಾಟ ಇತ್ತು. ರವಿ ಬೆಳಗೆರೆ ಅವರು ಒಮ್ಮೆ ವೇದಿಕೆ ಮೇಲೆ ಮಾತನಾಡುತ್ತಾ ಕಾರ್ನಾಡ್ ಅವರನ್ನು ನೆನಪಿಸಿಕೊಂಡಿದ್ದರು.
ಗಿರೀಶ್ ಕಾರ್ನಾಡ್ (Girish Karnad) ಅವರು ಭಾರತ ಕಂಡ ಅಪ್ರತಿಮ ಬರಹಗಾರ, ನಟ, ನಿರ್ದೇಶಕ. ಜ್ಞಾನಪೀಠ ಪ್ರಶಸ್ತಿ ಪಡೆದ ಅವರು, ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಇಂದು (ಮೇ 19) ಅವರ ಜನ್ಮದಿನ. ಗಿರೀಶ್ ಕಾರ್ನಾಡ್ ನಮ್ಮ ಜೊತೆ ಇಲ್ಲ. ಆದರೆ, ಅವರನ್ನು ನೆನಪಿಸಿಕೊಳ್ಳಲು ಸಾಕಷ್ಟು ವಿಚಾರಗಳನ್ನು ಬಿಟ್ಟುಹೋಗಿದ್ದಾರೆ. ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಅವರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು. ಅವರ ಬಗ್ಗೆ ಬರಹಗಾರ ರವಿ ಬೆಳಗೆರೆ ಅವರು ಮಾತನಾಡಿದ್ದರು. ಅವರು ಕೆಲವು ಅಪರೂಪದ ವಿಚಾರಗಳನ್ನು ಹೇಳಿಕೊಂಡಿದ್ದರು.
ಸಿನಿಮಾ ರಂಗಕ್ಕೆ ಕೊಡುಗೆ..
‘ಹಯವದನ’ ಸೇರಿದಂತೆ ಅನೇಕ ನಾಟಕಗಳನ್ನು ಗಿರೀಶ್ ಕಾರ್ನಾಡ್ ಅವರು ಬರೆದಿದ್ದಾರೆ. ಅವರು 70ರ ದಶಕದಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದರು. ‘ಸಂಸ್ಕಾರ’ ಅವರ ನಟನೆಯ ಮೊದಲ ಸಿನಿಮಾ. ಹಲವು ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ‘ವಿದುರ’ ಅವರ ಕೊನೆಯ ಚಿತ್ರ. ಇಷ್ಟೇ ಅಲ್ಲದೆ, ಟಿವಿ ಸೀರಿಸ್ಗಳಲ್ಲೂ ಕಾರ್ನಾಡ್ ನಟಿಸಿದ್ದರು. ‘ಮಾಲ್ಗುಡಿ ಡೇಸ್’ ಸರಣಿಯಲ್ಲಿ ಸ್ವಾಮಿ ತಂದೆಯಾಗಿ ಅವರು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಗಿರೀಶ್ ಕಾರ್ನಾಡ್ ಜನ್ಮದಿನ: ವಿಷ್ಣುವರ್ಧನ್, ಶಂಕರ್ನಾಗ್ಗೆ ಮೊದಲು ಆ್ಯಕ್ಷನ್-ಕಟ್ ಹೇಳಿದ್ದೇ ಗಿರೀಶ್ ಕಾರ್ನಾಡ್
ನಿರ್ದೇಶನವನ್ನೂ ಮಾಡಿದ್ದ ಕಾರ್ನಾಡ್
ಕಾರ್ನಾಡ್ ಅವರು ನಿರ್ದೇಶನದಲ್ಲೂ ತೊಡಗಿಕೊಂಡಿದ್ದರು. ಸಾಹಿತ್ಯ ಕೃತಿಗಳನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. 1971ರಲ್ಲಿ ರಿಲೀಸ್ ಆದ ‘ವಂಶ ವೃಕ್ಷ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಇದು ಅವರ ಚೊಚ್ಚಲ ನಿರ್ದೇನ. ‘ಕಾಡು’, ‘ಕಾನೂರು ಹೆಗ್ಗಡಿತಿ’ ಮೊದಲಾದ ಸಿನಿಮಾಗಳು ಕಾರ್ನಾಡ್ ನಿರ್ದೇಶನದಲ್ಲಿ ಮೂಡಿ ಬಂದಿವೆ.
ಗಿರೀಶ್ ಕಾರ್ನಾಡ್ ಬಗ್ಗೆ ರವಿ ಬೆಳಗೆರೆ ಮಾತು
ಕಾರ್ನಾಡ್ ಅವರ ಜೊತೆ ರವಿ ಬೆಳಗೆರೆಗೆ ಒಳ್ಳೆಯ ಒಡನಾಟ ಇತ್ತು. ರವಿ ಬೆಳಗೆರೆ ಅವರು ಒಮ್ಮೆ ವೇದಿಕೆ ಮೇಲೆ ಮಾತನಾಡುತ್ತಾ ಕಾರ್ನಾಡ್ ಅವರನ್ನು ನೆನಪಿಸಿಕೊಂಡಿದ್ದರು. ಅವರು ಯಾರಿಗೇ ಕರೆ ಮಾಡಿದರೂ ತಮ್ಮ ಹೆಸರನ್ನು ಹೇಳಿಯೇ ಮಾತು ಆರಂಭಿಸುತ್ತಿದ್ದರಂತೆ. ‘ನಾನು ಗಿರೀಶ್ ಕಾರ್ನಾಡ್ ಅಂತ ಮಾತಾಡ್ತೀನಿ ಎಂದು ಹೇಳಿಯೇ ಕಾರ್ನಾಡರು ಮಾತು ಆರಂಭಿಸುತ್ತಿದ್ದರು. ಇಡೀ ಜಗತ್ತಿಗೆ ನಾನು ಗೊತ್ತಿದೆ ಎಂದು ಯಾಕೆ ಅಂದುಕೊಳ್ಳಬೇಕು? ಕಾರ್ನಾಡ್ ಅವರ ಈ ವಿಚಾರ ನನಗೆ ತುಂಬಾನೇ ಇಷ್ಟ ಆಗುತ್ತಿತ್ತು. ಅವರು ಯಾವಾಗಲೂ ಉತ್ತರ ಕರ್ನಾಟಕದ ಭಾಷೆಯಲ್ಲೇ ಮಾತನಾಡುತ್ತಿದ್ದರು. ಚಂಪಾ ಹಾಗೂ ಕಾರ್ನಾಡ್ ಸದಾ ಕಿತ್ತಾಡುತ್ತಿದ್ದರು’ ಎಂದು ಒಮ್ಮೆ ರವಿ ಬೆಳಗೆರೆ ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:28 am, Fri, 19 May 23