ಮಗನನ್ನು ತಂದು ಕೊಡೋಕಾಗಲ್ಲ ಆದರೆ, ಅವರ ಕಣ್ಣೀರು ಒರೆಸುತ್ತೇವೆ; ಗುರು ದೇಶಪಾಂಡೆ ಪತ್ನಿ ಪ್ರತೀಕ್ಷಾ

| Updated By: ರಾಜೇಶ್ ದುಗ್ಗುಮನೆ

Updated on: Aug 11, 2021 | 7:33 PM

ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ.

ಮಗನನ್ನು ತಂದು ಕೊಡೋಕಾಗಲ್ಲ ಆದರೆ, ಅವರ ಕಣ್ಣೀರು ಒರೆಸುತ್ತೇವೆ; ಗುರು ದೇಶಪಾಂಡೆ ಪತ್ನಿ ಪ್ರತೀಕ್ಷಾ
ನಿರ್ಮಾಪಕ ಗುರು ದೇಶಪಾಂಡೆ, ಮೃತ ಫೈಟರ್​ ವಿವೇಕ್​
Follow us on

ಅಜಯ್​ ರಾವ್ ಮತ್ತು ರಚಿತಾ ರಾಮ್  ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಫೈಟರ್​ ವಿವೇಕ್​ ಮೃತಪಟ್ಟ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ. ಈ ಬೆನ್ನಲ್ಲೇ ಅವರ ಪತ್ನಿ ಪ್ರತೀಕ್ಷಾ ಅವರು ಸುದ್ದಿಗೋಷ್ಠಿ ನಡೆಸಿದ್ದು, ಮೃತರ ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

‘ನಮ್ಮ ಪ್ರೊಡಕ್ಷನ್ ಹೌಸ್​​ನಲ್ಲಿ ಒಂದು ಅವಘಡ ಸಂಭವಿಸಿದೆ. ಅವರಿಗೆ ಮಗನನ್ನು ತಂದು ಕೊಡೋಕೆ ಸಾಧ್ಯವಿಲ್ಲ. ಆದರೆ, ಅವರ ಕಣ್ಣೀರು ಒರೆಸುವ ಕೆಲಸವನ್ನು ನಾವು ಮಾಡುತ್ತೇವೆ. ಮೃತ ವಿವೇಕ್​ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡೋದಾಗಿ ತೀರ್ಮಾನಿಸಿದ್ದೇವೆ. ವಿವೇಕ್ ಕುಟುಂಬಕ್ಕೆ ಈಗ 5 ಲಕ್ಷ ಪರಿಹಾರ ಚೆಕ್​ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತೆ 5 ಲಕ್ಷ ರೂ. ಪರಿಹಾರ ಕೊಡುತ್ತೇವೆ’ ಎಂದಿದ್ದಾರೆ ಪ್ರತೀಕ್ಷಾ.

ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಗುರು ದೇಶಪಾಂಡೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಮಧ್ಯೆ ಅವರ ಪತ್ನಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಘಟನೆ ನಡೆದು ಒಂದು ದಿನ ಕಳೆದ ಬಳಿಕ ರಚಿತಾ ರಾಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವೇಕ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ‘ವಿದ್ಯುತ್​ ಅವಘಡದಿಂದ ಸಾವನ್ನಪಿದ ಫೈಟರ್​ ವಿವೇಕ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ರಚಿತಾ ಪೋಸ್ಟ್​ ಮಾಡಿದ್ದರು. ಆದರೆ ಇಷ್ಟು ಮಾತ್ರದಿಂದ ಜನರು ಸಮಾಧಾನ ಆಗಿಲ್ಲ. ಮೃತ ವಿವೇಕ್​ ಕುಟುಂಬಕ್ಕೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್​ ಅವರಿಗೆ ಹಣದ ಸಹಾಯ ಮಾಡಿ ಎಂದು ಜನರು ಒತ್ತಾಯಿಸಿದ್ದರು.

ಇದನ್ನೂ ಓದಿ: ಫೈಟರ್​ ವಿವೇಕ್​ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು