ದಿವಂಗತ ಗುರುಪ್ರಸಾದ್ ನಟಿಸಿದ್ದ ‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿದೆ. ಗುರುಪ್ರಸಾದ್ ಅವರ ಎರಡನೇ ಪತ್ನಿ ನ್ಯಾಯಾಲಯದ ಮೊರೆ ಹೋಗಿ, ಸಿನಿಮಾ ಬಿಡುಗಡೆಗೆ ತಡೆ ತಂದಿದ್ದಾರೆ. ಸಿನಿಮಾದ ಹೆಸರಿನ ವರ್ಗಾವಣೆ ಪ್ರಕ್ರಿಯೆ ಕುರಿತಂತು ಗುರುಪ್ರಸಾದ್ ಎರಡನೇ ಪತ್ನಿ ಸುಮಿತ್ರಾ ಅವರು ನ್ಯಾಯಾಲಯದ ಮೊರೆ ಹೋದ ಕಾರಣ ಸಿಟಿ ಸಿವಿಲ್ ನ್ಯಾಯಾಲಯವು ‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಿದೆ. ಆದರೆ ಇದರಿಂದ ಸಿನಿಮಾದ ನಿರ್ಮಾಪಕರು ಸುಮಿತ್ರಾ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.
ಸುಮಿತ್ರಾ ಅವರು ನಮ್ಮಿಂದ ಹಣ ವಸೂಲಿ ಮಾಡಲೆಂದು ಹೀಗೆ ಮಾಡುತ್ತಿದ್ದಾರೆ. ಗುರುಪ್ರಸಾದ್ ನಮ್ಮಿಂದ 40 ಲಕ್ಷ ರೂಪಾಯಿ ಹಣ ಪಡೆದಿದ್ದರು. ಸಾಯುವ ಮುನ್ನ ಸಿನಿಮಾದ ಫುಟೇಜ್ ಅನ್ನು ಡಿಲೀಟ್ ಮಾಡಿದ್ದರು. ನಾವು ಹೇಗೋ ಎಲ್ಲವನ್ನೂ ರಿಕವರಿ ಮಾಡಿದೆವು, ಆ ನಂತರ ಫಿಲಂ ಚೇಂಬರ್ನಲ್ಲಿ ಮೀಟಿಂಗ್ ಮಾಡಿ ಸಿನಿಮಾ ಬಿಡುಗಡೆ ಆದ ಬಳಿಕ ಬರುವ ಲಾಭದಲ್ಲಿ 51% ಅನ್ನು ಗುರುಪ್ರಸಾದ್ ಪತ್ನಿಯವರಿಗೆ ನೀಡಬೇಕು ಎನ್ನಲಾಯಿತು. ಅದಕ್ಕೆ ನಾವು ಒಪ್ಪಿಕೊಂಡಿದ್ದೆವು. ಆದರೆ ಈಗ ಸುಮಿತ್ರ ನ್ಯಾಯಾಲಯಕ್ಕೆ ಹೋಗಿ ಸಿನಿಮಾದ ವಿರುದ್ಧ ತಡೆ ತಂದಿದ್ದಾರೆ ಎಂದಿದ್ದಾರೆ ನಿರ್ಮಾಪಕ ರಮೇಶ್.
ಗುರುಪ್ರಸಾದ್ ಅವರ ಕೊನೆಯ ಸಿನಿಮಾ ಮೂಲಕ ಅವರಿಗೆ ಗೌರವ ಸಲ್ಲಿಸುವ ನಮ್ಮ ಅಭಿಲಾಶೆಯನ್ನು ಹಾಳು ಮಾಡಲಾಗುತ್ತಿದೆ. ಗುರುಪ್ರಸಾದ್ ಅವರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಿತ್ತು, ಆದರೆ ಅದಕ್ಕೆ ಅವರ ಪತ್ನಿಯೇ ಅಡ್ಡ ಬರುತ್ತಿದ್ದಾರೆ. ಕೆಲ ವಾರಗಳ ಹಿಂದೆ ಸುಮಿತ್ರಾ ಅವರು ನಾಲ್ಕು ಲಕ್ಷ ಹಣ ನೀಡುವಂತೆ ಕೇಳಿದ್ದರು. ನಾನು ಕೊಟ್ಟಿರಲಿಲ್ಲ. ಹಾಗಾಗಿ ಈಗ ನ್ಯಾಯಾಲಯಕ್ಕೆ ಹೋಗಿ ಸ್ಟೇ ತಂದಿದ್ದಾರೆ ಎಂದಿದ್ದಾರೆ ರಮೇಶ್.
ಇದನ್ನೂ ಓದಿ:‘ಪುಷ್ಪ 2’ ತಂಡಕ್ಕೆ ‘ಎದ್ದೇಳು ಮಂಜುನಾಥ..’ ಸಾಂಗ್ ಕೇಳಿಸಿದ ಅಲ್ಲು ಅರ್ಜುನ್ ಅಭಿಮಾನಿಗಳು
ಸುಮಿತ್ರಾ ಅವರು ಸಿನಿಮಾದ ಹೆಸರು ಬದಲಾವಣೆಗೆ ಅವಕಾಶ ಕೊಟ್ಟು ಬರೆದುಕೊಟ್ಟಿರುವ ಪತ್ರ ಹಾಗೂ ಸುಮಿತ್ರಾ ಅವರು ಹಣಕ್ಕಾಗಿ ಬೇಡಿಕೆ ಇಟ್ಟು ತಮಗೆ ಮಾಡಿರುವ ವಾಟ್ಸ್ ಆಪ್ ಸಂದೇಶಗಳನ್ನು ರಮೇಶ್ ಅವರು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ‘ಎದ್ದೇಳು ಮಂಜುನಾಥ 2’ ಸಿನಿಮಾ ಗುರುಪ್ರಸಾದ್ ನಟಿಸಿದ್ದ ಕೊನೆಯ ಸಿನಿಮಾ ಆಗಿದೆ. ಗುರುಪ್ರಸಾದ್ ಅವರು ಕೆಲ ತಿಂಗಳ ಹಿಂದೆ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದರು. ಅವರು ಸಾಲ ಬಾಧೆಯಲ್ಲಿದ್ದರು ಎನ್ನಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ