
ದೇಹದಾರ್ಢ್ಯ ಪಟು, ನಟ ಎ.ವಿ.ರವಿ (ಜಿಮ್ ರವಿ) ಅವರು ಇತ್ತೀಚೆಗೆ ಒಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದರು. 101 ಜನರಿಗೆ ಕಾಶಿಯಾತ್ರೆ ಮಾಡಿಸುವುದಾಗಿ ಅವರು ಘೋಷಿಸಿದ್ದರು. ಅದನ್ನು ಈಗ ಅವರು ಮಾಡಿ ತೋರಿಸಿದ್ದಾರೆ. ರವಿ (Gym Ravi) ಅವರ ತಂದೆಗೆ ಕಾಶಿಯಾತ್ರೆ ಮಾಡುವ ಆಸೆ ಇತ್ತು. ಆದರೆ ಕಾರಾಣಾಂತರದಿಂದ ಅದು ಸಾಧ್ಯವಾಗಿರಲಿಲ್ಲ. ಆ ಕೊರಗು ರವಿ ಅವರನ್ನು ಸದಾ ಕಾಡುತ್ತಿತ್ತು. ಆ ಕಾರಣದಿಂದ ರವಿ ಅವರು ಈಗ 101 ಜನರಿಗೆ ಸ್ವಂತ ಖರ್ಚಿನಲ್ಲಿ ಕಾಶಿಯಾತ್ರೆ (Kashi Yatra) ಮಾಡಿಸಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನಿಂದ 101 ಜನರನ್ನು ಆಯ್ಕೆ ಮಾಡಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕಾಶಿಯಾತ್ರೆ ಮಾಡಿಸಿರುವುದಾಗಿ ಅವರು ಹೇಳಿದ್ದಾರೆ.
ಎಲ್ಲ ಯಾತ್ರಿಗಳ ಊರುಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದಲ್ಲಿ ಉಪಹಾರ ಮುಗಿಸಿ ನೇರವಾಗಿ ಅಯೋಧ್ಯೆಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಎಲ್ಲರಿಗೂ ಲಘು ಉಪಹಾರ ಮತ್ತು ನೀರಿನ ಬಾಟಲ್ ನೀಡಲಾಯಿತು. ದೇವರ ದರ್ಶನಕ್ಕಾಗಿ ಮಹಿಳೆಯರಿಗೆ ಎರಡು ಹೊಸ ಸೀರೆ, ಪುರುಷರಿಗೆ ಎರಡು ಹೊಸ ಪಂಚೆ ಉಡುಗೊರೆಯಾಗಿ ಕೊಡಲಾಯಿತು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡದ ಚೆನ್ನಪ್ಪ ಅವರು ಇಷ್ಟು ಜನರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸಿದರು. ಪೊಲೀಸ್ ಸಿಬ್ಬಂದಿಗಳು ಕೂಡ ಇವರೆಲ್ಲರಿಗೂ ಸುಲಭವಾಗಿ ದೇವರ ದರ್ಶನ ಮಾಡಲು ಸಹಕಾರ ನೀಡಿದರು. ಅಲ್ಲಿಂದ ವಿಶೇಷ ಬಸ್ ಮೂಲಕ ಕಾಶಿಗೆ ಬಂದ 101 ಜನರ ತಂಡಕ್ಕೆ ಪ್ರಸಿದ್ದ ಜಂಗಮವಾಡಿ ಮಠದಲ್ಲಿ ಎಸಿ ಕೊಠಡಿಗಳನ್ನು ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಉಪಹಾರ ಮತ್ತು ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ಕಾಶಿ ವಿಶ್ವನಾಥನ ಮಂದಿರದ ಹತ್ತಿರವಿರುವ ಕರ್ನಾಟಕದ ಈ ಮಠ, ಶಿಸ್ತು, ಸಂಯಮಕ್ಕೆ ಹೆಸರುವಾಸಿ. ಅಲ್ಲಿನ ಆತಿಥ್ಯ ಬಹು ಚೆಂದ. ಮಠದಲ್ಲಿ ಉಳಿದುಕೊಂಡ ಯಾತ್ರಾರ್ಥಿಗಳ ತಂಡವನ್ನು ಕಾಶಿಯಲ್ಲೂ ಸಹ ಚೆನ್ನಪ್ಪ ಅವರ ಸಹಕಾರದಿಂದ ವಿಶೇಷ ದರ್ಶನ ಮಾಡಿಸಲಾಯಿತು. ಸಂಜೆ ನಡೆಯುವ ಗಂಗಾರತಿಯಲ್ಲೂ ಭಾಗವಹಿಸಲಾಯಿತು. ಕಾಶಿಯಲ್ಲಿರುವ ಅನ್ನಪೂರ್ಣ ಮಂದಿರ ಸೇರಿದಂತೆ ವಿವಿಧ ಮಂದಿಗಳಿಗೆ ಭೇಟಿ ನೀಡಲಾಯಿತು. ಗಂಗೆಯ ತಟದಲ್ಲೇ ಯಾತ್ರಾರ್ಥಿಗಳಿಂದ ಪಿಂಡಪ್ರದಾನ ಸಹ ಮಾಡಿಸಲಾಯಿತು.
ಇದನ್ನೂ ಓದಿ: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್ ರವಿ
ಮರುದಿನ ವಿಶ್ರಾಂತಿ. ಅಂದು ಯಾತ್ರಾರ್ಥಿಗಳನ್ನು ಶಾಪಿಂಗ್ಗೆ ಕರೆದುಕೊಂಡು ಹೋಗಲಾಯಿತು. ಶಾಪಿಂಗ್ ಖರ್ಚಿಗೂ ಸ್ವಲ್ಪ ಹಣವನ್ನು ರವಿ ಅವರೇ ನೀಡಿದರು. ಇದನ್ನೆಲ್ಲ ಕಂಡು ಭಾವುಕರಾದ ಯಾತ್ರಾರ್ಥಿಗಳು ಆನಂದಭಾಷ್ಪ ಸುರಿಸಿದರು. ರವಿ ಹಾಗೂ ಕುಟುಂಬದವರಿಗೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ರವಿ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಯಾತ್ರಾರ್ಥಿಗಳಿಗೆ ಎಲ್ಲ ಕಡೆಯಲ್ಲೂ ಎಸಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಪುನಃ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮೇಲೂ ಅವರವರ ಊರುಗಳಿಗೆ ತೆರಳಲು ಅನುಕೂಲವಿರುವ ವಾಹನ ವ್ಯವಸ್ಥೆ ಮಾಡಲಾಗಿತ್ತು ಎಂದು ತಂಡದವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:48 pm, Fri, 18 July 25