
ಪಿ.ವಿ. ಶಂಕರ್ ನಿರ್ದೇಶನ ಮಾಡಿರುವ ‘ಸೋಲ್ಮೇಟ್ಸ್’ ಸಿನಿಮಾಗೆ ನಾದಬ್ರಹ್ಮ ಹಂಸಲೇಖ (Hamsalekha) ಅವರು ಸಂಗೀತ ನೀಡಿದ್ದಾರೆ. ಅಲ್ಲದೇ ಅವರೇ ಸಾಹಿತ್ಯ ಕೂಡ ರಚಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ಕಿಲ ಕಿಲ..’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ಅನಿರುದ್ಧ್ ಶಾಸ್ತ್ರಿ ಮತ್ತು ಅಂಕಿತಾ ಕುಂದು ಅವರು ಧ್ವನಿಯಾಗಿದ್ದಾರೆ. ‘ಸೋಲ್ಮೇಟ್ಸ್’ (Soulmates) ಸಿನಿಮಾಗೆ ‘ಪರಿಸರ ಪ್ರೇಮಿ’ ಎಂಬ ಟ್ಯಾಗ್ ಲೈನ್ ಇದೆ. ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರು ಈ ಕಹಾನಿಯಲ್ಲಿ ಇದ್ದಾರೆ. ಜಿ.ಆರ್. ಅರ್ಚನಾ ಹಾಗೂ ಶಂಕರ್ ಪಿ.ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
‘ರಂಗ್ ಬಿ ರಂಗ್’ ಖ್ಯಾತಿಯ ಶ್ರೀಜಿತ್ ಸೂರ್ಯ, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಖ್ಯಾತಿಯ ಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ಅರಸು ಮಹಾರಾಜ್, ಗೌತಮ್, ತಾರಕ್, ನವೀನ್ ಡಿ. ಪಡೀಲ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
‘ಸೋಲ್ಮೇಟ್ಸ್’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, ಉಮೇಶ್ ಬಣಕಾರ್ ಮುಂತಾದವರು ಹಾಜರಿದ್ದರು. ಈ ವೇಳೆ ನಿರ್ದೇಶಕ ಶಂಕರ್ ಮಾತನಾಡಿದರು. ಈ ಸಿನಿಮಾಗೆ ಹಂಸಲೇಖ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಅವರು ತಿಳಿಸಿದರು.
‘ನಾನು ಮೊದಲಿಗೆ ನೋಡಿದ ಸಿನಿಮಾ ಪುಟ್ನಂಜ. ಅಲ್ಲಿಂದ ನಾನು ಹಂಸಲೇಖ ಅಭಿಮಾನಿ. ಹಾಗಾಗಿ ನನ್ನ ಮೊದಲ ಸಿನಿಮಾಗೆ ಅವರಿಂದ ಸಂಗೀತ ನಿರ್ದೇಶನ ಮಾಡಿಸಿದ್ದೇನೆ. ಐದು ಹಾಡುಗಳನ್ನು ಅವರು ಈ ಸಿನಿಮಾಗೆ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ. ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ’ ಎಂದಿದ್ದಾರೆ ಶಂಕರ್ ಪಿ.ವಿ.
ಇದನ್ನೂ ಓದಿ: ಹಂಸಲೇಖ ನಿರ್ದೇಶನದ ‘ಓಕೆ’ ಚಿತ್ರಕ್ಕೆ ರವಿಚಂದ್ರನ್ ಹಾರೈಕೆ; ಮನಸಾರೆ ಮಾತಾಡಿದ ಕ್ರೇಜಿ ಸ್ಟಾರ್
ಈ ಸಿನಿಮಾದಲ್ಲಿ ಶ್ರೀಜಿತ್ ಶೆಟ್ಟಿ ಅವರು ಸತ್ಯ ಎಂಬ ಪಾತ್ರ ಮಾಡಿದ್ದಾರೆ. ಭೂಮಿ ಎಂಬ ಪಾತ್ರಕ್ಕೆ ನಿಷ್ಕಲಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಪ್ರಸನ್ನ ಶೆಟ್ಟಿ ಅವರು ಗೋಪಿ ಎಂಬ ಮುಗ್ಧ ಹಳ್ಳಿ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ಅವರ ಎರಡನೇ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.