50ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಕುರಿತು ಅನೇಕ ಮಾಧ್ಯಮಗಳಲ್ಲಿ ವರದಿ ಆಗಿದೆ. ವಿವಾಹದ ಬಗ್ಗೆ ಅವರು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ ಸುದ್ದಿ ಜೋರಾಗಿ ಹಬ್ಬಿದೆ. ಮೂಲಗಳ ಪ್ರಕಾರ, ಡಿಸೆಂಬರ್ನಲ್ಲಿ ಹನ್ಸಿಕಾ ಮೋಟ್ವಾನಿ ಮದುವೆ (Hansika Motwani Marriage) ನಡೆಯಲಿದೆ. ಜೈಪುರದಲ್ಲಿ ಇರುವ 450 ವರ್ಷ ಹಳೆಯ ಕೋಟೆಯಲ್ಲಿ ಹನ್ಸಿಕಾ ಅವರು ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಕನ್ನಡದ ಸಿನಿಪ್ರಿಯರಿಗೆ ಹನ್ಸಿಕಾ ಪರಿಚಿತರು. ಪುನೀತ್ ರಾಜ್ಕುಮಾರ್ ಜೊತೆ ‘ಬಿಂದಾಸ್’ (Bindaas Kannada Movie) ಚಿತ್ರದಲ್ಲಿ ನಟಿಸುವ ಮೂಲಕ ಅವರು ಕರ್ನಾಟಕದಲ್ಲಿ ಫೇಮಸ್ ಆದರು. ಹನ್ಸಿಕಾ ಮೋಟ್ವಾನಿ ಮದುವೆ ಸುದ್ದಿ ಕೇಳಿ ಫ್ಯಾನ್ಸ್ ಖುಷಿ ಆಗಿದ್ದಾರೆ.
ಡಿಸೆಂಬರ್ನಲ್ಲಿ ಹನ್ಸಿಕಾ ಮೋಟ್ವಾನಿ ಅವರ ಮದುವೆ ನಡೆಯಲಿದೆ. ಆದರೆ ಡೇಟ್ ಇನ್ನೂ ಖಚಿತ ಆಗಿಲ್ಲ. ಜೈಪುರದ ಪುರಾತನ ಕೋಟೆಯೊಂದರಲ್ಲಿ ಈಗಾಗಲೇ ತಯಾರಿ ಆರಂಭ ಆಗಿದೆ. ತುಂಬ ವೈಭವದಿಂದ ಈ ವಿವಾಹ ನೆರವೇರಲಿದೆ. ಆಪ್ತರು ಮತ್ತು ಕುಟುಂಬದವರನ್ನು ಮಾತ್ರ ಆಹ್ವಾನಿಸಲಾಗುವುದು. ಈಗಾಗಲೇ ಅನೇಕ ರೂಮ್ಗಳನ್ನು ಅತಿಥಿಗಳಿಗಾಗಿ ಬುಕ್ ಮಾಡಲಾಗಿದೆ.
ಹನ್ಸಿಕಾ ಮೋಟ್ವಾನಿ ಅವರಿಗೆ ಈಗ 31 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಾಲನಟಿಯಾಗಿಯೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಹೃತಿಕ್ ರೋಷನ್ ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ಅವರು ನಟಿಸಿ, ಗಮನ ಸೆಳೆದಿದ್ದರು. ಬಳಿಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಅಭಿನಯಿಸಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು.
ದೆಹಲಿ ಮೂಲದ ಉದ್ಯಮಿಯೊಬ್ಬರ ಜೊತೆ ಹನ್ಸಿಕಾ ಮೋಟ್ವಾನಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಆ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಈಗ ಏಕಾಏಕಿ ಅವರ ಮದುವೆ ಸುದ್ದಿ ಹರಡಿದೆ. ಈ ಅದ್ದೂರಿ ವಿವಾಹ ಒಟ್ಟು 10 ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಿದೆ.
ಮದುವೆ ಕುರಿತು ಕೇಳಿಬಂದ ಸುದ್ದಿಗೆ ಹನ್ಸಿಕಾ ಕಡೆಯಿಂದಲೇ ಪ್ರತಿಕ್ರಿಯೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಹನ್ಸಿಕಾ ಕೈಯಲ್ಲಿ ಈಗಲೂ ಅನೇಕ ಸಿನಿಮಾಗಳಿವೆ. ಚಿತ್ರರಂಗದಲ್ಲಿ ಬ್ಯುಸಿ ಆಗಿರುವಾಗಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರಕ್ಕೆ ಬಂದಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಹನ್ಸಿಕಾ ನಟಿಸಿದ 50ನೇ ಸಿನಿಮಾ ‘ಮಹಾ’ ಈ ವರ್ಷ ಜುಲೈನಲ್ಲಿ ರಿಲೀಸ್ ಆಯಿತು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.