ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ದರ್ಶನ್. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೆಲ್ಲ ಸಂತಸದಿಂದ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. 1977 ಫೆ.16ರಂದು ದರ್ಶನ್ ಜನಿಸಿದರು. ಕನ್ನಡದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ತೂಗುದೀಪ ದಂಪತಿಗಳ ಹಿರಿಯ ಮಗ. ಲೈಟ್ ಬಾಯ್ ಜೀವನದಿಂದ ರಾಬರ್ಟ್ ಚಿತ್ರದವರೆಗೆ ನಟ ದರ್ಶನ್ ನಡೆದು ಬಂದ ದಾರಿಯ ಚಿತ್ರಣ ಇಲ್ಲಿದೆ.
ಬಾಲ್ಯದಿಂದಲೂ ದರ್ಶನ್ಗೆ ಪ್ರಾಣಿಗಳೆಂದರೆ ಇಷ್ಟ. ಬಹುತೇಕ ಮಂದಿ ತಮ್ಮ ಬಾಲ್ಯದಲ್ಲಿ ತಿಂಡಿ ಖರೀದಿಸಲು ಹಣ ಕದಿಯುತ್ತಿದ್ದರೆ, ಇವರು ಪ್ರಾಣಿಗಳನ್ನು ಸಾಕಲು ಅಮ್ಮನ ದುಡ್ಡು ಕದ್ದು ವೆಚ್ಚ ಮಾಡುತ್ತಿದ್ದರು. ರಸ್ತೆಯಲ್ಲಿ ಅನಾಥವಾಗಿ ಮಲಗಿದ್ದ ನಾಯಿಗಳಿಗೆ ರಟ್ಟಿನ ಮನೆ ಮಾಡಿ ಆಶ್ರಯಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿದ್ದಾಗ ಅಲ್ಲೆಲ್ಲೋ ಕುದುರೆ ನೊಡಬೇಕೆಂದು ಶಾಲೆಗೆ ಚಕ್ಕರ್ ಹಾಕಿ ಹೋಗಿದ್ದರು.
ದರ್ಶನ್ಗೆ ಮೃಗಾಲಯವೆಂದರೆ ಬಲು ಹೆಚ್ಚು ಇಷ್ಟ. ಬಾಲ್ಯದಿಂದಲೂ ಕೂಡಾ ಮೃಗಾಲಯಗಳಿಗೆ ಭೇಟಿ ನೀಡಿ ಪ್ರಾಣಿಗಳನ್ನು ವೀಕ್ಷಿಸುತ್ತ ಅವುಗಳೊಡನೆ ಮಾತನಾಡುತ್ತಿದ್ದರು. ಹಾಗೂ ಪ್ರಾಣಿಗಳ ಕುರಿತು, ಅವುಗಳ ಇಚ್ಛೆಯ ಕುರಿತು ಬಹಳ ಜ್ಞಾನ ಹೊಂದಿದ್ದಾರೆ. ಈಗಲೂ ಕೂಡಾ ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆದು ಅವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ತಾವು ಸಾಕಿದ ಕುದುರೆಯನ್ನು ಸಾರಥಿ ಹಾಗೂ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಬಳಸಿಕೊಂಡಿರುವುದು ವಿಶೇಷ. ಹಾಗೂ 2018ರಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಚಿತ್ರರಂಗಕ್ಕೆ ಪ್ರವೇಶ:
1990ರಲ್ಲಿ ನಟ ದರ್ಶನ್ ಮೊದಲಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆಯಲ್ಲಿ ನಟಿಸಿದ್ದರು. ನಂತರ 2001ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕ ಅಭಿನಯಿಸಿರುವುದು ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಹೆಜ್ಜೆ. ಸ್ಯಾಂಡಲ್ವುಡ್ನ ಡಿಬಾಸ್ ಆಗಿ ಹೆಸರು ಪಡೆದಿದ್ದಾರೆ.
ಇದನ್ನೂ ಓದಿ: DBossBirthdayCDP: ಡಿ ಬಾಸ್ ದರ್ಶನ್ ಜನ್ಮದಿನಕ್ಕೆ ಕಾಮನ್ ಡಿಪಿ ಅಭಿಯಾನ ಆರಂಭಿಸಿದ ಅಭಿಮಾನಿಗಳು…
ದರ್ಶನ್ ಅಭಿನಯಿಸಿದ ಚಿತ್ರಗಳು:
ನಟ ದರ್ಶನ್ 54 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯ ಚಲನಚಿತ್ರಗಳಾದ ಕರಿಯಾ (2003), ನನ್ನ ಪ್ರೀತಿಯ ರಾಮು (2003), ಕಲಾಸಿಪಾಳ್ಯ (2005), ಗಜ(2008), ಸಾರಥಿ(2011), ಸಂಗೊಳ್ಳಿ ರಾಯಣ್ಣ(2012), ಬುಲ್ ಬುಲ್(2013) ಹೀಗೆ ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ ಯಶಸ್ಸಿನಿಂದ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳೆಲ್ಲ ರಾಬರ್ಟ್ ಚಿತ್ರದ ರಿಲೀಸ್ಗೆ ಕಾಯುತ್ತಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲೂ ತೊಡಗಿಕೊಂಡವರು. 2006ರಲ್ಲಿ ತೂಗುದೀಪ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ದರ್ಶನ್ರನ್ನು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಚಿತ್ರಗಳಲ್ಲಿ ಪೋಷಕ ಪಾತ್ರ, ಖಳನಾಯಕ, ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತೂಗುದೀಪ ಪ್ರೊಡಕ್ಷನ್:
2006ರಲ್ಲಿ ದರ್ಶನ್ ಮತ್ತು ಸಹೋದರ ದಿನಕರ್ ಸೇರಿ ತೂಗುದೀಪ ಪ್ರೊಡಕ್ಷನ್ ಆರಂಭಿಸಿದರು. ಮತ್ತು ಚಲನ ಚಿತ್ರ ನಿರ್ಮಾಣ ಸಂಸ್ಥೆಯಿಂದ ಜೊತೆ ಜೊತೆಯಲಿ ಎಂಬ ಚಿತ್ರ ನಿರ್ಮಾಣ ಮಾಡಲಾಯಿತು. ನಂತರ ದರ್ಶನ್ ಅಭಿನಯದ ಬುಲ್ಬುಲ್, ನವಗ್ರಹ ಚಿತ್ರಗಳು ಕೂಡಾ ಅವರ ಪ್ರೊಡಕ್ಷನ್ನಲ್ಲೇ ನಿರ್ಮಾಣಗೊಂಡ ಚಿತ್ರಗಳಾಗಿವೆ. ಹಾಗೂ ಮದುವೆಯ ಮಮತೆಯ ಕರೆಯೋಲೆ, ಬೃಂದಾವನ, ಒಗ್ಗರಣೆ, ಜೈಲಲಿತಾ, ಉಗ್ರಂ ಹೀಗೆ ಇನ್ನೂ ಅನೇಕ ಚಿತ್ರಗಳನ್ನು ಸಂಸ್ಥೆ ವಿತರಿಸಿದೆ. ನಂತರದ ದಿನಗಳಲ್ಲಿ ತೂಗುದೀಪ ಪ್ರೊಡಕ್ಷನ್ಅನ್ನು ದಿನಕರ್ ಮುಂದುವರೆಸಿಕೊಂಡು ಬರುತ್ತಿದ್ದಾರೆ.
Published On - 11:39 am, Tue, 16 February 21