KJ Yesudas Birthday: ಯೇಸುದಾಸ್​ 82ನೇ ಜನ್ಮದಿನ; ಲೆಜೆಂಡರಿ ಗಾಯಕನ ಟಾಪ್​ 10 ಕನ್ನಡ ಗೀತೆಗಳು

| Updated By: ಮದನ್​ ಕುಮಾರ್​

Updated on: Jan 10, 2022 | 1:42 PM

KJ Yesudas Top 10 Kannada Songs: ಕನ್ನಡದ ಹಲವಾರು ಹಾಡುಗಳಿಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ ಕೆ.ಜೆ. ಯೇಸುದಾಸ್​ ಅವರು ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಹಾಡುಗಳನ್ನು ಅವರು ನೀಡಿದ್ದಾರೆ.

KJ Yesudas Birthday: ಯೇಸುದಾಸ್​ 82ನೇ ಜನ್ಮದಿನ; ಲೆಜೆಂಡರಿ ಗಾಯಕನ ಟಾಪ್​ 10 ಕನ್ನಡ ಗೀತೆಗಳು
ಕೆ.ಜೆ. ಯೇಸುದಾಸ್
Follow us on

ಭಾರತೀಯ ಚಿತ್ರರಂಗದ ಖ್ಯಾತ ಗಾಯಕರಲ್ಲಿ ಒಬ್ಬರಾದ ಕೆ.ಜೆ. ಯೇಸುದಾಸ್​ ಅವರು ಇಂದು (ಜ.10) 82ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿ ಮುಂತಾದ ಭಾಷೆಗಳನ್ನು ಸೇರಿ ಸಾವಿರಾರು ಗೀತೆಗಳಿಗೆ ಧ್ವನಿಯಾದ ಈ ಮಹಾನ್​ ಕಲಾವಿದನಿಗೆ ಕೋಟ್ಯಂತರ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸಿನಿಮಾ ಸಂಗೀತ ಲೋಕಕ್ಕೆ ಯೇಸುದಾಸ್​ ಅವರ ಕೊಡುಗೆ ದೊಡ್ಡದು. ಕನ್ನಡ ಚಿತ್ರರಂಗಕ್ಕೆ ಅವರು ಮರೆಯಲಾಗದ ಹಾಡುಗಳನ್ನು ನೀಡಿದ್ದಾರೆ. ಹಂಸಲೇಖ ಅವರ ಜೊತೆಗೂಡಿ ಯೇಸುದಾಸ್​ ಅವರು ಹಲವು ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಅನೇಕ ಭಕ್ತಿಗೀತೆಗಳಿಗೂ ಅವರು ಧ್ವನಿಯಾಗಿದ್ದಾರೆ. ಯೇಸುದಾಸ್​ ಕಂಠದಲ್ಲಿ ಮೂಡಿಬಂದ ಟಾಪ್​ 10 ಕನ್ನಡ ಸಿನಿಮಾ ಹಾಡುಗಳ ಬಗ್ಗೆ ಮಾಹಿತಿ ಇಲ್ಲಿದೆ..

  1. ಅನಾಥ ಮಗುವಾದೆ.. (ಹೊಸ ಜೀವನ -1990)

ಶಂಕರ್​ ನಾಗ್​ ಅಭಿನಯದ ‘ಹೊಸ ಜೀವನ’ ಸಿನಿಮಾದ ‘ಅನಾಥ ಮಗುವಾದೆ..’ ಹಾಡು ಕನ್ನಡಿಗರಿಗೆ ಆಲ್​ಟೈಮ್​ ಫೇವರೀಟ್​ ಗೀತೆ. ಹಂಸಲೇಖ ಸಂಗೀತ ನೀಡಿದ ಈ ಗೀತೆಗೆ ಯೇಸುದಾಸ್​ ಅವರು ಧ್ವನಿ ನೀಡಿದ್ದಾರೆ. ಅವರ ಅದ್ಭುತ ಕಂಠದಲ್ಲಿ ಮೂಡಿಬಂದ ಈ ಹಾಡು ಎವರ್​ಗ್ರೀನ್​ ಎನಿಸಿಕೊಂಡಿದೆ.

  1. ಅಂದವೋ ಅಂದವೋ ಕನ್ನಡ ನಾಡು.. (ಮಲ್ಲಿಗೆ ಹೂವೇ – 1992)

ಈ ಗೀತೆ ಮೂಡಿಬಂದಿದ್ದು ಕೂಡ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ. ಯೇಸುದಾಸ್​ ಅವರ ಟಾಪ್​ ಗೀತೆಗಳಲ್ಲಿ ‘ಅಂದವೋ ಅಂದವೋ ಕನ್ನಡ ನಾಡು..’ ಸಾಂಗ್​ ಕೂಡ ಸ್ಥಾನ ಪಡೆದುಕೊಂಡಿದೆ. ಈ ಹಾಡಿನಲ್ಲಿ ಅಂಬರೀಷ್​ ಅಭಿಯಿಸಿದ್ದರು. ಕನ್ನಡ ನಾಡನ್ನು ವರ್ಣಿಸುವ ಈ ಸಾಂಗ್​ ಇಂದಿಗೂ ಕೇಳುಗರ ಫೇವರಿಸ್ಟ್​ ಲಿಸ್ಟ್​ನಲ್ಲಿದೆ.

  1. ನಮ್ಮೂರ ಯುವರಾಣಿ ಕಲ್ಯಾಣವಂತೆ.. (ರಾಮಾಚಾರಿ – 1991)

ರವಿಚಂದ್ರನ್​ ನಟನೆಯ ‘ರಾಮಾಚಾರಿ’ ಸಿನಿಮಾ ಸೂಪರ್​ ಹಿಟ್​ ಆಗುವಲ್ಲಿ ಆ ಚಿತ್ರದ ಗೀತೆಗಳು ಕೂಡ ಮಹತ್ವದ ಪಾತ್ರ ವಹಿಸಿವೆ ಎಂದರೆ ತಪ್ಪಿಲ್ಲ. ‘ನಮ್ಮೂರ ಯುವರಾಣಿ ಕಲ್ಯಾಣವಂತೆ..’ ಹಾಡಿಗೆ ಯೇಸುದಾಸ್​ ಅವರು ತಮ್ಮ ಧ್ವನಿಯಿಂದ ಜೀವ ತುಂಬಿದ್ದಾರೆ. ರೆಟ್ರೋ ಪ್ರಿಯರಿಗೆ ಈ ಹಾಡು ಈಗಲೂ ಅಚ್ಚುಮೆಚ್ಚು.

  1. ರಾಮಾಚಾರಿ ಹಾಡುವ.. (ರಾಮಚಾರಿ – 1991)

‘ರಾಮಾಚಾರಿ’ ಸಿನಿಮಾದ ಸೂಪರ್​ ಹಿಟ್​ ಗೀತೆಗಳಲ್ಲಿ ‘ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ..’ ಸಾಂಗ್​ ಕೂಡ ಯೇಸುದಾಸ್​ ಅವರ ಕಂಠದಲ್ಲಿ ಮೂಡಿಬಂದು ಮೋಡಿ ಮಾಡಿತು. ಈ ಗೀತೆಗೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯ ಬರೆದಿದ್ದು ಕೂಡ ಹಂಸಲೇಖ. ರವಿಚಂದ್ರನ್​-ಮಾಲಾಶ್ರೀ ಕಾಂಬಿನೇಷನ್​ನ ಈ ಚಿತ್ರದ ಈ ಗೀತೆಯನ್ನು ಫ್ಯಾನ್ಸ್​ ಎಂದಿಗೂ ಮರೆಯಲು ಸಾಧ್ಯವಿಲ್ಲ.

  1. ಹಾಡೊಂದು ನಾ ಹಾಡುವೆನು.. (ಶ್ರುತಿ – 1990)

ಶ್ರುತಿ ಮತ್ತು ಸುನಿಲ್​ ಜೋಡಿಯ ‘ಶ್ರುತಿ’ ಸಿನಿಮಾದಲ್ಲಿ ಸಂಗೀತವೇ ಪ್ರಧಾನವಾಗಿತ್ತು. ಎಸ್​.ಎ. ರಾಜ್​ಕುಮಾರ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ‘ಹಾಡೊಂದು ನಾ ಹಾಡುವೆನು..’ ಗೀತೆಗೆ ಯೇಸುದಾಸ್​ ಧ್ವನಿ ನೀಡಿದರು. ಸರ್ವಕಾಲಕ್ಕೂ ಗುನುಗಿಸಿಕೊಳ್ಳುವಂತಹ ಶಕ್ತಿ ಈ ಹಾಡಿಗೆ ಇದೆ.

  1. ಎಲ್ಲೆಲ್ಲೂ ಸಂಗೀತವೇ.. (ಮಲಯ ಮಾರುತ- 1986)

ವಿಷ್ಣುವರ್ಧನ್​ ಅಭಿನಯದ ಸಂಗೀತ ಪ್ರಧಾನ ಸಿನಿಮಾ ‘ಮಲಯ ಮಾರುತ’. ಆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು ವಿಜಯ ಭಾಸ್ಕರ್​. ಈ ಸಿನಿಮಾದ 11 ಹಾಡಿಗೆ ಯೇಸುದಾಸ್​ ಧ್ವನಿ ನೀಡಿದ್ದಾರೆ! ಆ ಪೈಕಿ ‘ಎಲ್ಲೆಲ್ಲೂ ಸಂಗೀತವೇ..’ ಹಾಡು ಹೆಚ್ಚು ಗಮನ ಸೆಳೆಯಿತು.

  1. ಯಾರೇ ನೀನು ಚೆಲುವೆ.. (ನಾನು ನನ್ನ ಹೆಂಡ್ತಿ-1985)

ರವಿಚಂದ್ರನ್​ ಮತ್ತು ಯೇಸುದಾಸ್​ ಅವರ ಕಾಂಬಿನೇಷನ್​ನಲ್ಲಿ ಅನೇಕ ಸುಮಧುರ ಗೀತೆಗಳು ಹೊರಬಂದಿವೆ. ಆ ಪೈಕಿ ‘ನಾನು ನನ್ನ ಹೆಂಡ್ತಿ’ ಚಿತ್ರದ ‘ಯಾರೇ ನೀನು ಚೆಲುವೆ.. ನಿನ್ನಷ್ಟಕ್ಕೆ ನೀನೇ ಏಕೆ ನಗುವೆ..’ ಹಾಡನ್ನು ಅಭಿಮಾನಿಗಳು ಇಂದಿಗೂ ಗುನುಗುತ್ತಿದ್ದಾರೆ. ಶಂಕರ್​-ಗಣೇಶ್​ ಈ ಚಿತ್ರಕ್ಕೆ ಸಂಗೀತ ನೀಡಿದ್ದರು.

  1. ನಾನು ಕನ್ನಡದ ಕಂದ.. (ಎ.ಕೆ. 47 – 1999)

ಶಿವರಾಜ್​ಕುಮಾರ್​ ಮತ್ತು ಚಾಂದಿನಿ ಅಭಿನಯದ ಸೂಪರ್​ ಹಿಟ್​ ಸಿನಿಮಾ ‘ಎ.ಕೆ.47’ನಲ್ಲಿ ಹಾಡುಗಳು ಸಖತ್​ ಗಮನ ಸೆಳೆದವು. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿನ ‘ನಾನು ಕನ್ನಡದ ಕಂದ..’ ಹಾಡಿಗೆ ಜೀವ ನೀಡಿದವರು ಯೇಸುದಾಸ್​.

  1. ಬಂಗಾರದಿಂದ ಬಣ್ಣಾನ ತಂದ.. (ಪ್ರೀತ್ಸೋದ್​ ತಪ್ಪಾ? 1998)

ಎಲ್ಲ ಬಗೆಯ ಹಾಡುಗಳಿಗೆ ಜೀವ ತುಂಬುವಂತಹ ಕಲಾವಿದ ಕೆ.ಜೆ. ಯೇಸುದಾಸ್​. ರವಿಚಂದ್ರನ್​ ನಟನೆಯ ‘ಪ್ರೀತ್ಸೋದ್​ ತಪ್ಪಾ’ ಸಿನಿಮಾದ ‘ಬಂಗಾರದಿಂದ ಬಣ್ಣಾನ ತಂದ..’ ಹಾಡು ಮೂಡಿಬಂದಿದ್ದು ಕೂಡ ಯೇಸುದಾಸ್​ ಅವರ ಕಂಠದಲ್ಲಿ. ಅದೇ ಸಿನಿಮಾದ ‘ಸೋನೆ ಸೋನೆ.. ಪ್ರೀತಿಯಾ ಸೋನೆ..’ ಹಾಡಿಗೂ ಸಹ ಅವರು ಧ್ವನಿ ನೀಡಿದರು.

  1. ಮೇರು ಗಿರಿಯಾಣೆ.. (ಎಸ್​.ಪಿ. ಸಾಂಗ್ಲಿಯಾನಾ ಪಾರ್ಟ್​ 2- 1990)

ಶಂಕರ್​ ನಾಗ್​ ಮತ್ತು ಭವ್ಯ ಜೋಡಿಯಾಗಿ ನಟಿಸಿದ ‘ಎಸ್​.ಪಿ. ಸಾಂಗ್ಲಿಯಾನಾ ಪಾರ್ಟ್​ 2’ ಚಿತ್ರದಲ್ಲಿ ‘ಮೇರು ಗಿರಿಯಾಣೆ..’ ಹಾಡು ರೊಮ್ಯಾಂಟಿಕ್​ ಆಗಿ ಮೂಡಿಬಂದಿತ್ತು. ಈ ಗೀತೆಯನ್ನು ಹಾಡಿದ್ದು ಕೂಡ ಯೇಸುದಾಸ್. ಹೀಗೆ ಹಲವಾರು ಹಾಡುಗಳಿಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ ಅವರು ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:

ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ

Lata Mangeshkar Birthday: ಲತಾ ಮಂಗೇಶ್ಕರ್ ಫೇಮಸ್​ ಆಗುವುದಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದರು ಪಾಕ್​ ಗಾಯಕಿ ನೂರ್​ ಜಹಾನ್