AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಬಳಿಕ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ ವಸಿಷ್ಠ-ಹರಿಪ್ರಿಯಾ: ಸಿನಿಮಾ ಯಾವುದು?

Yada Yada Hi: ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ವಿವಾಹದ ಬಳಿಕ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದಿಗಂತ್ ಸಹ ಜೊತೆಗಿದ್ದು, ಯದಾ ಯದಾ ಹಿ ಹೆಸರಿನ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಮದುವೆ ಬಳಿಕ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ ವಸಿಷ್ಠ-ಹರಿಪ್ರಿಯಾ: ಸಿನಿಮಾ ಯಾವುದು?
ವಸಿಷ್ಠ ಸಿಂಹ-ಹರಿಪ್ರಿಯಾ- ದಿಗಂತ್
ಮಂಜುನಾಥ ಸಿ.
|

Updated on: May 22, 2023 | 7:37 PM

Share

ಮದುವೆಯಾದ ನಂತರ ಇದೇ ಮೊದಲಬಾರಿಗೆ ವಸಿಷ್ಠಸಿಂಹ (Vasishta Simha) ಹಾಗೂ ಹರಿಪ್ರಿಯ (Haripriya) ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಹೆಸರು ‘ಯದಾ ಯದಾ ಹಿ’ ನಟ ದಿಗಂತ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜೂನ್ 2ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಶಾಲಿನಿ ಎಂಟರ್‌ ಪ್ರೈಸಸ್ ಮೂಲಕ ಜಾಕ್‌ ಮಂಜು ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಭಾನುವಾರ ಸಂಜೆ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು, ಇತ್ತೀಚೆಗಷ್ಟೇ ಈ ಚಿತ್ರದ ಟೈಟಲ್ ಸಾಂಗನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು, ವಿಶೇಷವಾಗಿ ಈ ಗೀತೆಗೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. ತೆಲುಗು ವರ್ಷನ್‌ನಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು, ಇಲ್ಲಿ ಹರಿಪ್ರಿಯಾ ಅವರು ಮಾಡಿದ್ದಾರೆ. ಹಿರಿಯನಟ ಅವಿನಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ತೆಲುಗಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರೂ, ಕನ್ನಡದಲ್ಲಿದು ಅವರಿಗೆ ಮೊದಲ ಸಿನಿಮಾ. ಇನ್ನು ಈ ಚಿತ್ರಕ್ಕೆ ಗೈಸ್ ಅಂಡ್ ಡಾಲ್ಸ್‌ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ಮೂಲದ ರಾಜೇಶ್ ಅಗರವಾಲ್ ಅವರು ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸಿನಿಮಾವನ್ನು ಕೇರಳದ ಮೂನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 55 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ದಿಗಂತ್, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು, ನಿರ್ದೇಶಕರು ತೆಲುಗಿನಿಂದ ಬಂದು ಈ ಸಿನಿಮಾ ಮಾಡಿದ್ದಾರೆ. ಜನರಿಗೆ ಇಷ್ಟವಾಗುವಂಥ ಕಥೆ ಇದರಲ್ಲಿದ್ದು, ನಾನು ಒಬ್ಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಮತ್ತೊಂದು ಶೇಡ್ ಇದೆ. ತೆಲುಗಿನ ಪ್ರಸಿದ್ದ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ ಎಂದರು.

ನಂತರ ವಸಿಷ್ಠ ಸಿಂಹ ಮಾತನಾಡಿ ನಿರ್ದೇಶಕ ಅಶೋಕ್ ತೇಜ ಅವರು ಬಂದು ನನಗೆ ಈ ಕಥೆಯನ್ನು ಹೇಳಿದಾಗ ತುಂಬಾ ಇಂಟರೆಸ್ಟಿಂಗ್ ಅನಿಸಿತು, ತೆಲುಗಿನ ‘ಯವುಡು’ ಕಾದಂಬರಿ ಆಧಾರಿತ ಚಿತ್ರ. ಒಂದೊಳ್ಳೆಯ ಜರ್ನಿ ಕಥೆ ಇದರಲ್ಲಿದೆ. ಟೈಟಲ್ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿನ ಪಾತ್ರಗಳು, ಅವುಗಳ ತೊಳಲಾಟಗಳನ್ನು ಹೇಳುವ ಸಾಹಿತ್ಯವಿದು. ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಔಟ್‌ಪುಟ್ ನೋಡಿದಾಗ ಖುಷಿಯಾಯ್ತು. ಚಿತ್ರದಲ್ಲಿ ಒಳ್ಳೆಯ ಕಾನ್ಸೆಪ್ಟ್ ಇದೆ. ಈವರೆಗೆ ನೋಡಿದ್ದಕ್ಕಿಂತ ಬೇರೆ ದಿಗಂತರನ್ನು ನೋಡಬಹುದು. ಇದರಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದು ಹೇಳಿದರು.

ನಟಿ ಹರಿಪ್ರಿಯ ಮಾತನಾಡಿ ಈ ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾ ನೋಡಿ ಮತ್ತಷ್ಟು ಖುಷಿ ಆಯ್ತು. ನಾನು ವಸಿಷ್ಠ, ದಿಗಂತ್ ಮೂರೂ ಜನ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನ್ನದು ಇನ್‌ಟೆನ್ಸ್ ರೋಲ್, ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ. ತುಂಬಾ ಚಾಲೆಂಜಿಂಗ್ ಕೂಡ ಆಗಿತ್ತು. ಸಿನಿಮಾನೂ ಕ್ಲಾಸ್ ಆಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ವಿಕ್ಟಿಮ್ ಅಂದ್ರೆ ಹುಡುಗಿಯರು ಮಾತ್ರವಲ್ಲ, ಹುಡುಗರ ಪಾಲೂ ಇರುತ್ತೆ, ಮೂರು ಜನರ ಮೇಲೂ ಕಥೆ ಸಾಗುತ್ತದೆ, ಮೂವರೂ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು, ಇಡೀ ಸಿನಿಮಾ ಸೀಟಿನ ತುದಿಯಲ್ಲಿ ಕೂತು ನೋಡಿಸಿಕೊಂಡು ಹೋಗುತ್ತೆ, ಟೈಟಲ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸಿನಿಮಾವನ್ನು ಕೂಡ ಜನ ಇಷ್ಟಪಡುತ್ತಾರೆಂಬ ನಂಬಿಕೆಯಿದೆ, ನಿರ್ಮಾಪಕ, ನಿರ್ದೇಶಕರಿಬ್ಬರೂ ಅಲ್ಲಿಂದ ಬಂದು ಹಣಹಾಕಿ ಇಂಥ ಕ್ವಾಲಿಟಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ರಾಜೇಶ್ ಅಗರವಾಲ್ ಮಾತನಾಡುತ್ತ ನನ್ನ ನಿರ್ಮಾಣದ ಮೊದಲ ಕನ್ನಡ ಚಿತ್ರವಿದು, ಸಿನಿಮಾ ಮಾಡೋದು ನನ್ನ ಕನಸು. ಮೂಲ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ, ದೊಡ್ಡ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾ ನಿರ್ಮಿಸಿದ್ದೇವೆ ಎಂದರು. ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿಯಾಗಿದೆ. ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು, ಶ್ರೀಚರಣ್ ಪಾಕಾಲ ಅವರ ಸಂಗೀತ ನಿರ್ದೇಶನವಿದೆ. ಹರ್ಷವರ್ಧನ್‌ರಾಜ್ ಟೈಟಲ್ ಸಾಂಗ್ ಮಾಡಿದ್ದಾರೆ. ಯೋಗಿ ಅವರ ಕ್ಯಾಮೆರಾವರ್ಕ ಚಿತ್ರದಲ್ಲಿದ್ದು, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ