Harish Raj: ಪ್ಯಾನ್ ಇಂಡಿಯಾ ಸಿನಿಮಾ ‘ಪ್ರೇತ’; ಸ್ವಂತ ಬ್ಯಾನರ್ನಲ್ಲಿ ಹರೀಶ್ ರಾಜ್ ಹೊಸ ಪ್ರಯತ್ನ
Kannada Horror Movie: ಅಭಿನಯದ ಜೊತೆಗೆ ಡೈರೆಕ್ಷನ್ನಲ್ಲಿಯೂ ಅನುಭವ ಹೊಂದಿರುವ ಹರೀಶ್ ರಾಜ್ ಅವರು ಸ್ವಂತ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ‘ಹರೀಶ್ ರಾಜ್ ಪ್ರೊಡಕ್ಷನ್’ ಮೂಲಕ ‘ಪ್ರೇತ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಟ ಹರೀಶ್ ರಾಜ್ (Harish Raj) ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತ್ತು. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿಯೂ ಅವರು ಮಿಂಚಿದರು. ಸ್ಯಾಂಡಲ್ವುಡ್ನಲ್ಲಿ (Sandalwood) ನಿರ್ದೇಶನ ಮಾಡಿದ ಅನುಭವವೂ ಹರೀಶ್ ರಾಜ್ ಅವರಿಗೆ ಇದೆ. ಒಟ್ಟಾರೆ ಬಣ್ಣದ ಲೋಕದಲ್ಲಿ ಅವರು 25 ವರ್ಷಗಳನ್ನು ಪೂರೈಸಿದ್ದಾರೆ. ಬೆಳ್ಳಿ ಹಬ್ಬದ ಖುಷಿಯಲ್ಲಿ ಇರುವ ಹರೀಶ್ ರಾಜ್ ಅವರು ಈಗ ಮತ್ತೆ ನಿರ್ದೇಶನದತ್ತ ಆಸಕ್ತಿ ತೋರಿಸಿದ್ದಾರೆ. ಅವರ ಹೊಸ ಸಿನಿಮಾಗೆ ‘ಪ್ರೇತ’ (Pretha) ಎಂದು ಹೆಸರು ಇಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿಬರುತ್ತಿದೆ. ವಿರಾಜಪೇಟೆ ಮತ್ತು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಅಭಿನಯದ ಜೊತೆಗೆ ಡೈರೆಕ್ಷನ್ನಲ್ಲಿಯೂ ಅನುಭವ ಹೊಂದಿರುವ ಹರೀಶ್ ರಾಜ್ ಅವರು ಸ್ವಂತ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ‘ಹರೀಶ್ ರಾಜ್ ಪ್ರೊಡಕ್ಷನ್’ ಮೂಲಕ ‘ಪ್ರೇತ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಅವರೇ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈಗ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಿನಿಪ್ರಿಯರ ವಲಯದಲ್ಲಿ ಕೌತುಕ ಮೂಡಿಸುವ ಕೆಲಸ ಮಾಡಲಾಗಿದೆ.
ಇದನ್ನೂ ಓದಿ: ‘ನಾನು ಮಾಡಿದ್ದು ಸಾರ್ಥಕ ಎನಿಸಿದೆ’; ‘ಜೊತೆ ಜೊತೆಯಲಿ’ ಧಾರಾವಾಹಿ ಬಗ್ಗೆ ಹರೀಶ್ ರಾಜ್ ಮಾತು
‘ಪ್ರೇತ’ ಸಿನಿಮಾದ ಪೋಸ್ಟರ್ನಲ್ಲಿ ಹರೀಶ್ ರಾಜ್ ಅವರು ಮೊಬೈಲ್ ಟಾರ್ಚ್ ಹಿಡಿದು ನಿಂತಿದ್ದಾರೆ. ಕತ್ತಲೆಯ ಕಾಡು ಭಯಂಕರವಾಗಿದೆ. ಹರೀಶ್ ರಾಜ್ ಅವರ ಹಿಂದೆ ದೆವ್ವದ ಆಕೃತಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಹಾರರ್ ಪ್ರಿಯರ ನಿರೀಕ್ಷೆ ಹೆಚ್ಚಿದೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಇದನ್ನೂ ಓದಿ: 25 ವರ್ಷಗಳ ನೆನಪಿನ ಪುಟ ತೆರೆದ ಹರೀಶ್ ರಾಜ್; ಚಿತ್ರರಂಗದಲ್ಲಿ ‘ಕಲಾಕಾರ್’ ಮೈಲಿಗಲ್ಲು
ಶೀರ್ಷಿಕೆಯೇ ಹೇಳುವಂತೆ ‘ಪ್ರೇತ’ ಒಂದು ಹಾರರ್ ಕಥೆಯುಳ್ಳ ಸಿನಿಮಾ. ಹರೀಶ್ ರಾಜ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಹರೀಶ್ ರಾಜ್ ಜೊತೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ, ಬಿ.ಎಂ. ವೆಂಕಟೇಶ್, ಅಮಿತ್ ಅವರು ಪಾತ್ರವರ್ಗದಲ್ಲಿ ಇದ್ದಾರೆ. ಕಿರಣ್ ಆರ್. ಹೆಮ್ಮಿಗೆ ಸಂಭಾಷಣೆ ಬರೆದಿದ್ದಾರೆ. ಶಿವಶಂಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ. ಜೀವನ್ ಪ್ರಕಾಶ್ ಅವರು ಸಂಕಲನ, ಮಂಜು ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಗೀತೆಗಳಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.