25 ವರ್ಷಗಳ ನೆನಪಿನ ಪುಟ ತೆರೆದ ಹರೀಶ್ ರಾಜ್; ಚಿತ್ರರಂಗದಲ್ಲಿ ‘ಕಲಾಕಾರ್’ ಮೈಲಿಗಲ್ಲು
Harish Raj | Sandalwood: ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ಹರೀಶ್ ರಾಜ್ ನಟಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿಯೂ ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಖುಷಿಯಲ್ಲಿ ಅವರಿದ್ದಾರೆ.
ಖ್ಯಾತ ನಟ ಹರೀಶ್ ರಾಜ್ (Harish Raj) ಅವರು ಕನ್ನಡ ಚಿತ್ರರಂಗದದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದಲ್ಲಿ ಅವರು ಪಡೆದ ಅನುಭವ ಅಪಾರ. 25 ವರ್ಷದ ಮೈಲಿಗಲ್ಲು ತಲುಪಿರುವ ಅವರು ತಮ್ಮ ಇಡೀ ಸಿನಿಜರ್ನಿಯನ್ನು ಮೆಲುಕು ಹಾಕಿದ್ದಾರೆ. ಆ ಸಲುವಾಗಿ ಹರೀಶ್ ರಾಜ್ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ (Sandalwood) ಗಣ್ಯರು ಆಗಮಿಸಿದ್ದರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ (Girish Kasaravalli), ನಟ-ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಅವರು ಸುದ್ದಿಗೋಷ್ಠಿಗೆ ಹಾಜರಿ ಹಾಕಿದ್ದರು. ಎಲ್ಲರೂ ಹರೀಶ್ ರಾಜ್ ಸಾಧನೆಯನ್ನು ಶ್ಲಾಘಿಸಿದ್ದಾರೆ. 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾದಲ್ಲಿ ಹರೀಶ್ ರಾಜ್ ನಟಿಸಿದ್ದಾರೆ. ಪ್ರತಿಭಾವಂತ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿದ ಹೆಮ್ಮೆ ಅವರಿಗೆ ಇದೆ.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ ‘ದೋಣಿ ಸಾಗಲಿ’ ಚಿತ್ರದ ಮೂಲಕ 1997ರಲ್ಲಿ ಹರೀಶ್ ರಾಜ್ ಅವರ ಸಿನಿಮಾ ಜರ್ನಿ ಶುರುವಾಯಿತು. ಅದೇ ವರ್ಷ ‘ತಾಯಿ ಸಾಹೇಬ’ ಚಿತ್ರದಲ್ಲಿ ನಟಿಸಿದರು. ‘ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಪುಣ್ಯ. ಅದರಲ್ಲಿ ನಾನು ಜಯಮಾಲ ಅವರ ಮಗನ ಪಾತ್ರ ನಿರ್ವಹಣೆ ಮಾಡಿದ್ದೆ’ ಎಂದು ಆ ದಿನಗಳ ನೆನಪಿನ ಪುಟವನ್ನು ಹರೀಶ್ ರಾಜ್ ತೆರೆದಿದ್ದಾರೆ. ‘25 ವರ್ಷ ಪೂರೈಸಿದ ಖುಷಿಯ ಸಮಾರಂಭಕ್ಕೆ ನನ್ನ ಮೊದಲ ಚಿತ್ರದ ನಿರ್ಮಾಪಕ ಮಧುಸೂದನ್ ಗೌಡ, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸುನೀಲ್ ಪುರಾಣಿಕ್ ಹಾಗೂ ಭಾ.ಮ. ಹರೀಶ್ ಅವರು ಬಂದಿರುವುದು ತುಂಬ ಖುಷಿ ನೀಡಿದೆ. ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ ಅನಿಸುತ್ತದೆ’ ಎಂದಿದ್ದಾರೆ ಹರೀಶ್ ರಾಜ್.
‘ನನ್ನ ನಿರ್ದೇಶನದ ‘ತಾಯಿ ಸಾಹೇಬ’ ಚಿತ್ರದಲ್ಲಿ ಹರೀಶ್ ರಾಜ್ ತುಂಬ ಲವಲವಿಕೆಯಿಂದ ನಟಿಸಿ ಎಲ್ಲರ ಮೆಚ್ಚುಗೆ ಪಡೆದರು. ನಂತರ ನನ್ನ ‘ದ್ವೀಪ’ ಚಿತ್ರದಲ್ಲೂ ಅಭಿನಯಿಸಿದ್ದರು. ಆ ಚಿತ್ರದ ಅಭಿನಯಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿ ರೇಸ್ನಲ್ಲಿ ಇದ್ದರು ಎಂದು ನನಗೆ ನಿಧಾನವಾಗಿ ತಿಳಿಯಿತು. ಒಟ್ಟಿನಲ್ಲಿ ಹರೀಶ್ ರಾಜ್ ಉತ್ತಮ ನಟ. ಮುಂದೆ ಸಹ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ’ ಎಂದು ಗಿರೀಶ್ ಕಾಸರವಳ್ಳಿ ಹಾರೈಸಿದ್ದಾರೆ.
‘ಕಲಾಕಾರ್’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹರೀಶ್ ರಾಜ್ ಗಮನ ಸೆಳೆದರು. ಅನೇಕ ಸೀರಿಯಲ್ಗಳಲ್ಲಿ ನಟಿಸಿದ ಅನುಭವವೂ ಅವರಿಗೆ ಇದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಅವರು ಇನ್ನಷ್ಟು ಜನಪ್ರಿಯತೆ ಪಡೆದರು.