ಇದು ಹೇಮಂತ್​ ಹೆಗಡೆ ‘ನೆಟ್​ವರ್ಕ್​’; ಹಳೇ ಸ್ನೇಹಿತರ ಹೊಸ ಪ್ರಯತ್ನ ಹೀಗಿದೆ..

|

Updated on: Mar 30, 2023 | 7:30 AM

ಈ ತಲೆಮಾರಿನವರಿಗೆ ಮೊಬೈಲ್​ ಅಡಿಕ್ಷನ್​ ಜಾಸ್ತಿ ಆಗಿದೆ. ಅದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಪರಿಹಾರ ಏನು ಎಂಬುದು ಕೂಡ ‘ನೆಟ್​ವರ್ಕ್​’ನಲ್ಲಿ ಇರಲಿದೆ.

ಇದು ಹೇಮಂತ್​ ಹೆಗಡೆ ‘ನೆಟ್​ವರ್ಕ್​’; ಹಳೇ ಸ್ನೇಹಿತರ ಹೊಸ ಪ್ರಯತ್ನ ಹೀಗಿದೆ..
Follow us on

ಹೇಮಂತ್ ಹೆಗಡೆ (Hemanth Hegde) ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಅನೇಕ ಹಿರಿಯ ಸ್ನೇಹಿತರಿದ್ದಾರೆ. ಅವರೆಲ್ಲರೂ ಸೇರಿ ಒಂದು ‘ನೆಟ್​ವರ್ಕ್​’ ಶುರು ಮಾಡಿದ್ದಾರೆ. ‘ನೆಟ್​ವರ್ಕ್​’ ಎಂಬುದು ಹೇಮಂತ್​ ಹೆಗಡೆ ಅವರ ನಿರ್ದೇಶನದ ಹೊಸ ಸಿನಿಮಾ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಮೊಬೈಲ್​ ವ್ಯಸನದ (Mobile Addiction) ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮೇ 15ರಂದು ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ರಾಜೇಶ್​ ನಟರಂಗ, ಸುಚೇಂದ್ರ ಪ್ರಸಾದ್​, ಕೆಎಂ ಚೈತನ್ಯ, ಸಾಕ್ಷಿ ಮೇಘನಾ ಮುಂತಾದವರು ‘ನೆಟ್​ವರ್ಕ್​’ (Network Movie) ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ವಿಶೇಷತೆ ಏನು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

30 ವರ್ಷಗಳ ಹಿಂದೆ ಹೇಮಂತ್​ ಹೆಗಡೆ ಮತ್ತು ಅವರ ಗೆಳೆಯರೆಲ್ಲ ಸೇರಿ ‘ದೃಷ್ಟಿ’ ಎಂಬ ರಂಗತಂಡವನ್ನು ಕಟ್ಟಿಕೊಂಡಿದ್ದರು. ಕಾರಣಾಂತರಗಳಿಂದ ಆ ತಂಡದಲ್ಲಿ ಹೆಚ್ಚಿನ ಚಟುವಟಿಕೆಗಳು ಆಗಿರಲಿಲ್ಲ. ಆದರೆ ಈಗ ಅದೇ ಹಳೇ ತಂಡದ ಗೆಳೆಯರೆಲ್ಲ ಸೇರಿಕೊಂಡು ಹೊಸ ಕಾನ್ಸೆಪ್ಟ್​ ಇರುವ ‘ನೆಟ್​ವರ್ಕ್​’ ಸಿನಿಮಾವನ್ನು ಆರಂಭಿಸುತ್ತಿದ್ದಾರೆ. ಪ್ರಭಂಜನ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ‘ಫ್ಲೆಮಿಂಗೋ’ 10 ವರ್ಷಗಳ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ಪ್ರದಾನ

‘ನೆಟ್​ವರ್ಕ್​’ ಚಿತ್ರದ ಬಗ್ಗೆ ಹೇಮಂತ್​ ಹೆಗಡೆ ಮಾತನಾಡಿದ್ದಾರೆ. ‘ಹಲವು ಕಾರಣದಿಂದ ನನಗೆ ಈ ಸಿನಿಮಾ ತುಂಬ ಸ್ಪೆಷಲ್​. ನಾವು ಎಲ್ಲರೂ ಮೊಬೈಲ್​ನಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ತಂತ್ರಜ್ಞಾನಕ್ಕೆ ನಾವು ಬಹಳ ಅಡಿಕ್ಟ್​ ಆಗಿದ್ದೇವೆ. ಸೋಶಿಯಲ್ ಮೀಡಿಯಾದಿಂದ ಆದ ಅನಾಹುತಗಳ ಬಗ್ಗೆ ಪ್ರತಿ ದಿನ ಸುದ್ದಿ ಕೇಳುತ್ತೇವೆ. ಮೊಬೈಲ್​ ಕೊಡಿಸಿಲ್ಲ ಅಂತ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆ. ಮೊಬೈಲ್​​ ಗೇಮ್​ನಲ್ಲಿ ಮಕ್ಕಳು ಮುಳುಗಿರುತ್ತಾರೆ. ಆ ವಿಚಾರಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಸೋಶಿಯಲ್​ ಮೀಡಿಯಾ ವ್ಯಸನಕ್ಕೆ ಪರಿಹಾರ ಏನು ಎಂಬುದನ್ನೂ ಈ ಚಿತ್ರದಲ್ಲಿ ತೋರಿಸುತ್ತೇವೆ’ ಎಂದು ಹೇಮಂತ್​ ಹೆಗಡೆ ಹೇಳಿದ್ದಾರೆ.

ಇದನ್ನೂ ಓದಿ: ‘ಒಂದು ಸರಳ ಪ್ರೇಮ ಕಥೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ವಾತಿಷ್ಠ; ಪಾತ್ರದ ಬಗ್ಗೆ ನಟಿ ಹೇಳಿದ್ದಿಷ್ಟು

‘ಇಂಥ ಸಿನಿಮಾವನ್ನು ನಿರ್ಮಾಣ ಮಾಡಲು ಒಳ್ಳೆಯ ಅಭಿರುಚಿ ಇರುವ ನಿರ್ಮಾಪಕರು ಬೇಕು. ಪ್ರಭಂಜನ್​ ಅವರು ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಇರುವಂಥವರು. ಕಮರ್ಷಿಯಲ್​ ಅಂಶಗಳು ಇಲ್ಲದ ಈ ರೀತಿಯ ಚಿತ್ರವನ್ನು ನಿರ್ಮಿಸಲು ಪ್ರಭಂಜನ್​ ಮುಂದೆಬಂದಿದ್ದಾರೆ’ ಎಂದು ಹೇಮಂತ್​ ಹೆಗಡೆ ಹೇಳಿದ್ದಾರೆ.

‘ಸೋಶಿಯಲ್​ ಮೀಡಿಯಾದ ದುಷ್ಪರಿಣಾಮದ ಬಗ್ಗೆ ನೋಡಲು ಜನರು ಇಷ್ಟಪಡುವುದಿಲ್ಲ. ಆದರೆ ಸಿನಿಮಾ ಮಾಧ್ಯಮದ ಮೂಲಕ ಹೇಳಿದರೆ ಪರಿಣಾಮಕಾರಿಯಾಗಿರುತ್ತದೆ ಎಂಬ ನಂಬಿಕೆ ನಮಗಿದೆ’ ಎಂದಿದ್ದಾರೆ ನಿರ್ಮಾಪಕರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.