ಸ್ಯಾಂಡಲ್ವುಡ್ನಲ್ಲಿ (Sandalwood) ಮಹಿಳಾ ನಿರ್ದೇಶಕಿಯರು ತಮ್ಮದೇ ಗುರುತನ್ನು ಮೂಡಿಸಿದ್ದಾರೆ. ಈ ಪಟ್ಟಿಯಲ್ಲಿ ಹಲವು ಖ್ಯಾತರನ್ನು ಹೆಸರಿಸಬಹುದು. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಪೂಜಾ ಭಾರ್ಗವಿ. 22ನೇ ವರ್ಷಕ್ಕೆ ಡೈರೆಕ್ಷನ್ ಕ್ಯಾಪ್ ತೊಡಲಿರುವ ಪೂಜಾ, ‘ಹೇ ಕೃಷ್ಣ’ (Hey Krishna) ಚಿತ್ರದ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಕಿರುತೆರೆ ನಿರ್ದೇಶಕ ಬುಕ್ಕಾಪಟ್ಟಣ ವಾಸು ಅವರ ಪುತ್ರಿಯಾಗಿರುವ ಪೂಜಾ ಭಾರ್ಗವಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಕತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರತಂಡದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ವಿಶೇಷ. ‘ಹೇ ಕೃಷ್ಣ’ವನ್ನು ನಿರ್ಮಿಸುತ್ತಿರುವವರು, ಕಥೆ ಬರೆದವರು ಮತ್ತು ಸಂಭಾಷಣೆ ಬರೆದವರು ಕೂಡ ಮಹಿಳೆಯರೇ ಆಗಿದ್ದು ನಾಲ್ವರು ಮಹಿಳೆಯರು ಚಿತ್ರದ ಚುಕ್ಕಾಣಿ ಹಿಡಿದಿದ್ದಾರೆ. ‘ಹೇ ಕೃಷ್ಣ’ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ಹಂಚಿಕೊಂಡಿದೆ. ಶ್ರೀವಿಷ್ಣು ಫಿಲಂಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಗಾಯತ್ರಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಪುತ್ರಿ ಯುಕ್ತ ಕಥೆ ಬರೆದಿದ್ದು, ಶ್ರೀಮತಿ ರಾಜೇಶ್ವರಿ ವಾಸು ಸಂಭಾಷಣೆಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ತೆರಳಲಿದೆ ಚಿತ್ರತಂಡ.
ನಿರ್ಮಾಪಕಿ ಗಾಯತ್ರಿ ಮಾತನಾಡಿ, ಚಿತ್ರಕ್ಕಾಗಿ ಮಹಿಳಾ ಪ್ರತಿಭೆಗಳನ್ನು ಪರಿಚಯಿಸಬೇಕು ಎಂದು ಹುಡುಕಾಟದಲ್ಲಿದ್ದಾಗ ಕಂಡಿದ್ದು ಪೂಜಾಭಾರ್ಗವಿ. ಅವರು ಪ್ರತಿಭಾವಂತೆ. ನಿರ್ದೇಶನದ ತರಬೇತಿ ಕೂಡ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಪೂಜಾ ಭಾರ್ಗವಿ ಅತ್ಯಂತ ಕಿರಿಯ ನಿರ್ದೇಶಕಿ:
ಈಗಾಗಲೇ ಮಾಸ್ಟರ್ ಕಿಶನ್ ಚಿಕ್ಕ ವಯಸಿನಲ್ಲೇ ನಿರ್ದೇಶನ ಮಾಡಿ ಹೆಸರು ಮಾಡಿದ್ದಾರೆ. ಆದರೆ ಮಹಿಳೆಯರಲ್ಲಿ ಚಿಕ್ಕ ವಯಸ್ಸಿಗೆ ನಿರ್ದೇಶನ ಮಾಡಿದ ದಾಖಲೆ 26 ವರ್ಷದ ಯುವತಿಯ ಹೆಸರಿನಲ್ಲಿತ್ತು. ಈಗ 22 ವಯಸಿನ ಪೂಜಾ ಅತ್ಯಂತ ಚಿಕ್ಕವಯಸಿನ ಮಹಿಳಾ ನಿರ್ದೇಶಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಈ ಕಥೆಯನ್ನು ಯುಕ್ತಾ ಬರೆದಿದ್ದು, ಅವರೂ ಕೂಡಾ ಸಣ್ಣ ವಯಸ್ಸಿನವರು. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಕೂಡ ಇದೆ ಎಂದಿದೆ ಚಿತ್ರತಂಡ.
ನಿರ್ದೇಶನದ ಜವಾಬ್ದಾರಿ ಹೊರಲಿರುವ ಪೂಜಾ ಭಾರ್ಗವಿ ಮಾತನಾಡಿ ತಮ್ಮ ಹಿನ್ನೆಲೆಯನ್ನು ಪರಿಚಯಿಸಿಕೊಂಡರು. ಸೆಂಚುರಿ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿರುವ ಅವರು, ಸಾಕ್ಷ್ಯಚಿತ್ರಗಳನ್ನು, ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಹೊಂದಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಕೊಲೆಯನ್ನು ಭೇದಿಸುವ ಕತೆ ಮತ್ತು ಕಾಮಿಡಿ.. ಹೀಗೆ ಎರಡು ಟ್ರಾಕ್‌ನಲ್ಲಿ ‘ಹೇ ಕೃಷ್ಣ’ ಚಿತ್ರದ ಕಥೆ ಸಾಗಲಿದೆ. ಇಬ್ಬರು ನಾಯಕರು, ಇಬ್ಬರು ನಾಯಕಿಯರು ಚಿತ್ರದಲ್ಲಿರುತ್ತಾರೆ. ಕುಂದಾಪುರ, ಮೈಸೂರು, ತೀರ್ಥಳ್ಳಿ ಸುತ್ತಮುತ್ತ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ.
ಚಿತ್ರದ ನಾಯಕನಾಗಿ ಮಯೂರ್ ನಟಿಸುತ್ತಿದ್ದು, ರಾಜಶೇಖರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರತಂಡ ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.
KGF Chapter 2: ಬಾಕ್ಸಾಫೀಸ್ ಆಯ್ತು.. ಈಗ ಐಎಂಡಿಬಿ ರೇಟಿಂಗ್ನಲ್ಲೂ ‘ಕೆಜಿಎಫ್ ಚಾಪ್ಟರ್ 2’ ದಾಖಲೆ