
ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿರುವ ಡಿ. ತ್ರಿಲೋಕ್ ಚಂದರ್ ಅವರು ಹೊಸ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಿದ್ದಾರೆ. ‘ತರು ಫಿಲ್ಮ್ ಅಕಾಡೆಮಿ’ ಸಂಸ್ಥೆಯ ಮೂಲಕ ‘ಅನಂತರ ಇ ಕಿಸಾನ್ ಟಿವಿ2’ ಎಂಬ ಈ ಸಿನಿಮಾವನ್ನು ತಾವೇ ನಿರ್ಮಾಣ ಕೂಡ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ನಾಯಕ ನಟ ಯೋಗೇಶ್ ಗೌಡ ಮಾತನಾಡಿ ‘ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ನನಗೆ ನಿರ್ದೇಶಕರು ಹೀರೋ ಆಗುವ ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ನಾನು ಹಳ್ಳಿಯ ಯುವಕನ ಪಾತ್ರ ಮಾಡಿದ್ದೇನೆ’ ಎಂದರು.
ಯೋಗೇಶ್ ಗೌಡ, ನಾಯಕಿ ಯಶಸ್ವಿನಿ, ರಮ್ಯಾ, ವಿಜಯಾ, ಸುಧಾ, ಪವನ್ ಚಾರಿ, ವಾತ್ಸಲ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸೃಜನ್, ಸುಹಾಸ್ ಅವರ ಛಾಯಾಗ್ರಹಣ, ಜೆವಿನ್ಸನ್ ಲೆವಿಸ್ ಅವರ ಸಂಗೀತ ಸಂಯೋಜನೆ ಹಾಗೂ ಸಂಕಲನ ಈ ಸಿನಿಮಾಗಿದೆ.
ಚಿತ್ರದ ಕಥೆ ಏನು ಎಂಬುದನ್ನು ಚಿತ್ರತಂಡದವರು ವಿವರಿಸಿದರು. ‘ಗ್ರಾಮೀಣ ಪರಿಸರದಲ್ಲಿ ಮುಗ್ಧ ಯುವಕನ ಸುತ್ತ ನಡೆಯುವ ಕಥೆಯಿದು. ಸ್ನೇಹಿತರ ಸಹವಾಸದಿಂದ ಕೊಲೆ ಪ್ರಕರಣದಲ್ಲಿ ಸಿಲುಕಿ, ಜೈಲಿಗೆ ಹೋಗಿ ಹೊರಬಂದ ಮೇಲೆ ಆ ಯುವಕನ ಮುಂದಿನ ಜೀವನ ಹೇಗಿರುತ್ತದೆ? ಸಂಬಂಧಕ್ಕಿಂತ ಹಣಕ್ಕೇ ಹೆಚ್ಚು ಬೆಲೆ ಕೊಡುವ ಜನರು ಹಾಗೂ ಸಂಬಂಧಿಕರ ಮಧ್ಯೆ ಆತನೊಬ್ಬನೇ ಏಕಾಂಗಿಯಾಗಿ ಹೇಗೆ ಹೋರಾಡುತ್ತಾನೆ ಎಂಬುದು ಚಿತ್ರದ ಕಥೆ’ ಎಂದು ಚಿತ್ರತಂಡ ಹೇಳಿದೆ.
ನಿರ್ದೇಶಕ ತ್ರಿಲೋಕ್ ಚಂದರ್ ಮಾತನಾಡಿ, ‘ನಾನು ಕೂಲಿಂಗ್ ಸೊಲ್ಯುಶನ್ಸ್ ಇಂಡಸ್ಟ್ರಿ ಮಾಡುತ್ತಿದ್ದೇನೆ. ಜತೆಗೆ ಕನ್ನಡ ಬ್ಯುಸಿನೆಸ್ ಟಿವಿ ಚಾನಲ್ ಕೂಡ ಆರಂಭಿಸುತ್ತಿದ್ದೇನೆ. ಈ ಹಿಂದೆ ಒಂದು ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಕಳೆದುಕೊಂಡಿದ್ದೆ. ಆದರೂ ಸ್ಟಾರ್ಟಪ್ ಬ್ಯುಸಿನೆಸ್ ಮಾಡುವವರಿಗೆ ನಮ್ಮ ಚಿತ್ರದ ಮೂಲಕ ಒಂದು ಮೆಸೇಜ್ ಕೊಡಬೇಕೆಂಬ ಉದ್ದೇಶದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇನೆ. ಜತೆಗೆ ನಮ್ಮ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆಯೂ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದೇವೆ’ ಎಂದು ವಿವರಿಸಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಕಲರ್‌ನಲ್ಲಿ ಬಿಡುಗಡೆ ಆಗಲಿದೆ ‘ಜಗ ಮೆಚ್ಚಿದ ಮಗ’ ಸಿನಿಮಾ
ಈ ಸಿನಿಮಾದಲ್ಲಿ ನಟ ಮುರಳಿ ಕೃಷ್ಣ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ಎಟಿ ರವೀಶ್, ಶ್ರೀಶಾಸ್ತ ಅವರ ಬಳಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಜೆವಿನ್ಸನ್ ಲೆವಿಸ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಸಂಕಲನವನ್ನು ಕೂಡ ಜೆವಿನ್ಸನ್ ಲೆವಿಸ್ ಅವರೇ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.