ಕಿಚ್ಚ ಸುದೀಪ್ (Sudeep) ಅವರಿಂದ ಮೋಸ ಆಗಿದೆ ಎಂದು ಎಂಎನ್ ಕುಮಾರ್ ಅವರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದರು. ಸುದ್ದಿಗೋಷ್ಠಿ ಕರೆದು ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದರು. ಈ ವಿಚಾರವಾಗಿ ಸುದೀಪ್ ಅವರು ಕುಮಾರ್ ವಿರುದ್ಧ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಹಿರಿಯ ನಟರಾದ ರವಿಚಂದ್ರನ್ (Ravchandran) ಹಾಗೂ ಶಿವರಾಜ್ಕುಮಾರ್ ಮುಂದಾಗಿದ್ದಾರೆ. ಇದರ ಭಾಗವಾಗಿ ಕುಮಾರ್ ಅವರನ್ನು ರವಿಚಂದ್ರನ್ ಅವರು ಭೇಟಿ ಮಾಡಿದ್ದಾರೆ. ಬೆಂಗಳೂರಿನ ರವಿಚಂದ್ರನ್ ನಿವಾಸದಲ್ಲಿ ಈ ಭೇಟಿ ನಡೆದಿದೆ.
ಭೇಟಿ ಬಳಿಕ ರವಿಚಂದ್ರನ್ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ‘ಕುಮಾರ್ ಅವರು ಎಲ್ಲವನ್ನೂ ಹೇಳಿದ್ದಾರೆ. ಪರಿಸ್ಥಿತಿ ತಣ್ಣಗಾಗಬೇಕು. ಸುದೀಪ್ ಹತ್ತಿರ ನಾನು ಮಾತಾಡಬೇಕಿದೆ. ಎರಡೂ ಕಥೆಯನ್ನು ಕೇಳುತ್ತೇನೆ. ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. ಇದು 20 ವರ್ಷಗಳ ಕಥೆಯಂತೆ ಕಾಣುತ್ತಿದೆ’ ಎಂದು ರವಿಚಂದ್ರನ್ ಹೇಳಿದ್ದಾರೆ.
‘ಸುದೀಪ್ ಆದಷ್ಟು ಬೇಗ ಸಿಕ್ತಾರೆ. ಅವರ ಜೊತೆಗೂ ಮಾತನಾಡುತ್ತೇನೆ. ಈಗಾಗಲೇ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಈ ಸಮಸ್ಯೆಯನ್ನು ಬಗೆಹರಿಸೋಕೆ ನಾನು ಪ್ರಯತ್ನ ಮಾಡುತ್ತೇನೆ. ಪರಿಹಾರ ಹುಡುಕಲೂ ಪ್ರಯತ್ನಿಸುತ್ತೇನೆ. ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದನ್ನು ಮೊದಲು ಬಿಡಬೇಕು’ ಎಂದು ರವಿಚಂದ್ರನ್ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ರವಿಚಂದ್ರನ್ಗೆ ದಾಖಲೆಗಳನ್ನು ನೀಡಿದ್ರಾ ನಿರ್ಮಾಪಕ ಎಂಎನ್ ಕುಮಾರ್?
2014ರಲ್ಲಿ ರಿಲೀಸ್ ಆದ ‘ಮಾಣಿಕ್ಯ’ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಸುದೀಪ್ ಒಟ್ಟಾಗಿ ನಟಿಸಿದ್ದರು. ‘ಹೆಬ್ಬುಲಿ’ ಚಿತ್ರದಲ್ಲೂ ಇವರ ಕೆಮಿಸ್ಟ್ರಿ ಕೆಲಸ ಮಾಡಿತ್ತು. ಹೀಗಾಗಿ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ‘ಸುದೀಪ್ ನನಗೆ ಮಾಣಿಕ್ಯ ಚಿತ್ರದಿಂದ ತುಂಬಾ ಕ್ಲೋಸ್ ಆದರು. ಕುಮಾರ್ ಮುಂಚೆಯಿಂದ ಗೊತ್ತು. ದಾಖಲೆಗಳನ್ನು ನಾನು ಮೊದಲು ನೋಡ್ತೀನಿ. ಆಮೇಲೆ ಸುದೀಪ್ ಹತ್ರ ಮಾತಾಡ್ತೀನಿ’ ಎಂದಿದ್ದಾರೆ ರವಿಚಂದ್ರನ್.
ಕುಮಾರ್ ಅವರು ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸುತ್ತಿದ್ದರು. ರವಿಚಂದ್ರನ್ ಭೇಟಿ ಬಳಿಕ ಈ ಧರಣಿ ಹಿಂಪಡೆದಿದ್ದಾರೆ. ‘ನಾನು ಬಹಿರಂಗವಾಗಿ ದಾಖಲೆಗಳನ್ನು ಕೊಡುವುದಿಲ್ಲ. ಹಿರಿಯರ ಮಾತಿಗೆ ಬೆಲೆ ಕೊಡಬೇಕು. ಹೀಗಾಗಿ ಧರಣಿ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುತ್ತೇನೆ’ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Wed, 19 July 23