ರಾಜ್ಕುಮಾರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅವರು ಮೊದಲ ಹಾಡಿದ್ದು ಎಂದರೆ ಅದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು. ರಾಜ್ಕುಮಾರ್ ಅವರು ಗಾಯಕ ಆಗಲು ಕಾರಣವಾಗಿದ್ದು ಇಳಯರಾಜ ಅವರು ಅನ್ನೋದು ವಿಶೇಷ. ಈ ಬಗ್ಗೆ ಇಳಯರಾಜ ಇತ್ತೀಚೆಗೆ ಹೇಳಿಕೊಂಡಿದ್ದರು. ಮೈಸೂರು ದಸರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು.
‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದರು. ನಾನು ಅವರಿಗೆ ಸಹಾಯಕನಾಗಿದ್ದೆ. ಆಗ ರಾಜ್ಕುಮಾರ್ ಸಿನಿಮಾಗಳು ಎಂದಾಗ ಪಿಬಿ ಶ್ರೀನಿವಾಸ್ ಹಾಡುತ್ತಿದ್ದರು. ಈ ಸಿನಿಮಾದ ಹಾಡನ್ನು ಹೊಸ ಧ್ವನಿ ಬೇಕು ಎಂದು ನಾನು ಜಿಕೆ ವೆಂಟಕೇಶ್ ಹತ್ತಿರ ಹೇಳಿದೆ’ ಎಂದು ಅಂದಿನ ಘಟನೆ ವಿವರಿಸಿದರು ಇಳಯರಾಜ.
‘ಜಿಕೆ ವೆಂಕಟೇಶ್ ಅವರು ಎಸ್ಪಿ ಬಾಲಸುಬ್ರಹ್ಮಣ್ಯ ಹೆಸರು ಹೇಳಿದರು. ಬೇಡ ಎಂದೆ. ಆ ಬಳಿಕ ರಾಜ್ಕುಮಾರ್ ಅವರ ಹತ್ತಿರವೇ ಹಾಡಿಸಿದರೆ ಹೇಗೆ ಎಂದು ಜಿಕೆವಿ ಕೇಳಿದರು. ರಾಜ್ಕುಮಾರ್ ಹಾಡ್ತಾರಾ ಎಂದು ಪ್ರಶ್ನೆ ಮಾಡಿದೆ. ಹೌದು, ಅವರ ಧ್ವನಿ ಉತ್ತಮವಾಗಿದೆ. ಅವರು ರಂಗಭೂಮಿಯಿಂದ ಬಂದವರು ಎಂದು ಜಿಕೆವಿ ಹೇಳಿದರು. ಅವರೇ ಹಾಡಿದರೆ ಉತ್ತಮ ಎಂದು ನಿರ್ಧರಿಸಲಾಯಿತು’ ಎಂದಿದ್ದಾರೆ ರಾಜ್ಕುಮಾರ್.
‘ಈ ವಿಚಾರವನ್ನು ರಾಜ್ಕುಮಾರ್ ಬಳಿ ಹೇಳಲಾಯಿತು. ಈ ಹಾಡನ್ನು ಪಿಬಿ ಶ್ರೀನಿವಾಸ್ ಅವರೇ ಹಾಡಲಿ ಬಿಟ್ಟುಬಿಡಲಿ, ಇದರಿಂದ ಅವರ ಜೀವನ ನಡೆಯುತ್ತಿದೆ ಎಂದು ರಾಜ್ಕುಮಾರ್ ಹೇಳಿದ್ದರು. ಅವರ ಒಳ್ಳೆಯತನ ಎಷ್ಟಿತ್ತು ನೋಡಿ’ ಎಂದಿದ್ದಾರೆ ಇಳಯರಾಜ. ತಾವು ಹಾಡಿದರೆ ಪಿಬಿಎಸ್ಗೆ ಆಫರ್ಗಳು ಇರುವುದಿಲ್ಲವಲ್ಲ ಎನ್ನುವ ಬೇಸರ ರಾಜ್ಕುಮಾರ್ಗೆ ಕಾಡಿತ್ತು.
ಇದನ್ನೂ ಓದಿ: ‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್ಕುಮಾರ್
‘ಜಿಕೆವಿ ಅವರ ಬಳಿ ಹಾಡಿ ತೋರಿಸಿ ಎಂದರು ರಾಜ್ಕುಮಾರ್. ಹಾಡಿ ತೋರಿಸಿದಾಗ ಅವರು ಖುಷಿಪಟ್ಟರು. ನಾನೇ ಹಾಡುತ್ತೇನೆ ಎಂದರು. ರಾಜ್ಕುಮಾರ್ ಅಣ್ಣ ಅವರ ಬಳಿ ಮೊದಲು ಹಾಡಿಸಿದ್ದು ನಾನೇ’ ಎಂದರು ಇಳಯರಾಜ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Thu, 17 October 24