ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಇನ್ನಿಲ್ಲ; ಅನಾರೋಗ್ಯದಿಂದ ನಿಧನ
ಕನ್ನಡದ ಖ್ಯಾತ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರು ಎಳೆದಿದ್ದಾರೆ. ಕಿಡ್ನಿ ವೈಫಲ್ಯದಿಂದ ದೀಪಕ್ ಅರಸ್ ಅವರು ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ದೀಪಕ್ ಅರಸ್ ಗುರುತಿಸಿಕೊಂಡಿದ್ದರು.
‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ದೀಪಕ್ ಅಸರ್ ಅವರು ನಿಧನರಾಗಿದ್ದಾರೆ. ನಟಿ ಅಮೂಲ್ಯ ಅವರ ಸಹೋದರರಾದ ದೀಪಕ್ ಅವರು ಅನಾರೋಗ್ಯದಿಂದ ಮೃತರಾಗಿದ್ದಾರೆ. ಇಂದು (ಅ.18) ಬೆಳಿಗ್ಗೆ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ ಅವರ ಸಾವಿನಿಂದಾಗಿ ಅಮೂಲ್ಯ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.
ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ. ಬೆಂಗಳೂರಿನ ಆರ್ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಅವರು ಸಾವನ್ನಪಿದ್ದಾರೆ. ಬಳಿಕ ವಯ್ಯಾಲಿಕಾವಲ್ನ ನಿವಾಸಕ್ಕೆ ಮೃತ ದೇಹವನ್ನು ತರಲಾಗಿದೆ. ಶುಕ್ರವಾರ (ಅಕ್ಟೋಬರ್ 18) ಅವರ ಸ್ವಗ್ರಾಮ ನಾಗಮಂಗಲಕ್ಕೆ ಮೃತ ದೇಹ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕನ್ನಡದ ಹಿರಿಯ ನಿರ್ದೇಶಕ, ಉದಯಶಂಕರ್ ಸಹೋದರ ದತ್ತರಾಜ್ ನಿಧನ
ಅಮೂಲ್ಯ, ರಾಕೇಶ್ ಅಡಿಗ, ಸಾಧು ಕೋಕಿಲ ಮುಂತಾದವರು ನಟಿಸಿದ್ದ ‘ಮನಸಾಲಜಿ’ ಸಿನಿಮಾಗೆ ದೀಪಕ್ ಅರಸ್ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ 2011ರಲ್ಲಿ ಬಿಡುಗಡೆ ಆಗಿತ್ತು. ಬಳಿಕ ದೀಪಕ್ ಅವರು ಆ್ಯಕ್ಷನ್-ಕಟ್ ಹೇಳಿದ್ದು ‘ಶುಗರ್ ಫ್ಯಾಕ್ಟರಿ’ ಸಿನಿಮಾಗೆ. 2023ರ ನವೆಂಬರ್ನಲ್ಲಿ ‘ಶುಗರ್ ಫ್ಯಾಕ್ಟರಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸೋನಲ್ ಮಾಂತೆರೋ, ಅದ್ವಿತಿ ಶೆಟ್ಟಿ ಮುಂತಾದವರು ಅಭಿನಯಿಸಿದ್ದರು.
ಇದನ್ನೂ ಓದಿ: ಹೋಟೆಲ್ ಮಹಡಿಯಿಂದ ಬಿದ್ದು ಗಾಯಕ ಸಾವು, ಹಲವು ಅನುಮಾನ
ದೀಪಕ್ ಅರಸ್ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ. ಮದುವೆ ಬಳಿಕ ಅಮೂಲ್ಯ ಅವರು ನಟನೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಕುಟುಂಬಕ್ಕೆ ಅವರು ಹೆಚ್ಚಿನ ಸಮಯ ಮೀಡಲಿಟ್ಟಿದ್ದಾರೆ. ಮಕ್ಕಳ ಪಾಲನೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಸದ್ಯದಲ್ಲೇ ಅವರು ಕಮ್ಬ್ಯಾಕ್ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಆ ಬಗ್ಗೆ ಸುದ್ದಿ ಕೇಳಬೇಕು ಎಂಬುದು ಅಭಿಮಾನಿಗಳ ಬಯಕೆ. ಆದರೆ ಈಗ ಅವರ ಸಹೋದರನ ನಿಧನದ ಸುದ್ದಿ ಬಂದಿರುವುದು ಎಲ್ಲರಿಗೂ ದುಃಖ ಉಂಟು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:48 pm, Thu, 17 October 24