ಚಿತ್ರರಂಗಕ್ಕೆ ಎಲೆಕ್ಷನ್​, ಐಪಿಎಲ್​ ಭಯ; ಎರಡು ತಿಂಗಳು ಇದೆ ಚಾಲೆಂಜ್

|

Updated on: Apr 11, 2023 | 11:10 AM

ಚಿತ್ರಮಂದಿರಕ್ಕೆ ತೆರಳುವ ಬದಲು ಮನೆಯಲ್ಲೇ ಕುಳಿತು ಒಟಿಟಿಯಲ್ಲಿ ಸಿನಿಮಾ ನೋಡುವ ಆಯ್ಕೆಯನ್ನು ಅನೇಕರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಥಿಯೇಟರ್​ಗಳಿಗೆ ಸಮಸ್ಯೆ ಆಗುತ್ತಿದೆ. ಈ ಮಧ್ಯೆ ಐಪಿಎಲ್ ಹಾಗೂ ಎಲೆಕ್ಷನ್ ಕೂಡ ಬಂದಿರುವುದರಿಂದ ಸವಾಲು ಮತ್ತಷ್ಟು ದೊಡ್ಡದಾಗಿದೆ.

ಚಿತ್ರರಂಗಕ್ಕೆ ಎಲೆಕ್ಷನ್​, ಐಪಿಎಲ್​ ಭಯ; ಎರಡು ತಿಂಗಳು ಇದೆ ಚಾಲೆಂಜ್
ಸಾಂದರ್ಭಿಕ ಚಿತ್ರ
Follow us on

ಚಿತ್ರರಂಗ ಎವರ್​ಗ್ರೀನ್ ಇಂಡಸ್ಟ್ರಿ. ಇದು ಮನರಂಜನೆಯ ಕ್ಷೇತ್ರ ಆದ್ದರಿಂದ ಜನರು ಇದನ್ನು ಸಂಪೂರ್ಣವಾಗಿ ಬಿಟ್ಟು ಬದುಕಲು ಸಾಧ್ಯವಿಲ್ಲ. ಆದರೆ, ಕೊವಿಡ್ (Covid Virus) ಬಳಿಕ ಚಿತ್ರರಂಗದಲ್ಲಿ ಒಂದಷ್ಟು ಬದಲಾವಣೆ ಆಯಿತು. ಆಗತಾನೇ ಅಂಬೆಗಾಲು ಇಡುತ್ತಿದ್ದ ಒಟಿಟಿ ಹೆಮ್ಮರವಾಗಿ ಬೆಳೆಯಿತು. ಚಿತ್ರಮಂದಿರಗಳು ಮುಚ್ಚಿದ್ದರಿಂದ ಜನರು ಒಟಿಟಿಯ ಮೊರೆ ಹೋದರು. ಈಗ ಒಟಿಟಿ ವ್ಯಾಪ್ತಿ ಹಿರಿದಾಗಿದೆ. ಜನರು ಹೆಚ್ಚೆಚ್ಚು ಒಟಿಟಿಯತ್ತ ವಾಲುತ್ತಿದ್ದಾರೆ. ಚಿತ್ರಮಂದಿರಕ್ಕೆ (Film Industry) ತೆರಳುವ ಬದಲು ಮನೆಯಲ್ಲೇ ಕುಳಿತು ಒಟಿಟಿಯಲ್ಲಿ ಸಿನಿಮಾ ನೋಡುವ ಆಯ್ಕೆಯನ್ನು ಅನೇಕರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಥಿಯೇಟರ್​ಗಳಿಗೆ ಸಮಸ್ಯೆ ಆಗುತ್ತಿದೆ. ಈ ಸಂಕಷ್ಟದ ಮಧ್ಯೆ ಐಪಿಎಲ್ ಹಾಗೂ ಎಲೆಕ್ಷನ್ ಕೂಡ ಬಂದಿರುವುದರಿಂದ ಸವಾಲು ಮತ್ತಷ್ಟು ದೊಡ್ಡದಾಗಿದೆ.

ಬೇಸಿಗೆ ಹಾಟ್ ಫೇವರಿಟ್

ಬೇಸಿಗೆ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಅನೇಕ ನಿರ್ಮಾಪಕರು ಮುಂದೆ ಬರುತ್ತಾರೆ. ಇದಕ್ಕೆ ಕಾರಣ ಶಾಲಾ-ಕಾಲೇಜುಗಳಿಗೆ ಈ ಸಂದರ್ಭದಲ್ಲಿ ರಜೆ ಇರುತ್ತದೆ. ಮಕ್ಕಳ ಜೊತೆ ಪಾಲಕರು ಥಿಯೇಟರ್​ಗೆ ಬಂದು ಸಿನಿಮಾ ನೋಡುತ್ತಾರೆ. ಈ ಬಾರಿ ಐಪಿಎಲ್ ಜ್ವರ ಹಾಗೂ ಎಲೆಕ್ಷನ್ ಕಾವು ಜೋರಾಗಿರುವುದರಿಂದ ಚಿತ್ರಮಂದಿರಕ್ಕೆ ದೊಡ್ಡ ಹೊಡೆತ ಉಂಟಾಗಲಿದೆ ಎಂಬುದು ಕೆಲವರ ಅಭಿಪ್ರಾಯ.

ದೊಡ್ಡ ಬಜೆಟ್ ಚಿತ್ರಗಳಿಲ್ಲ..

ಈ ವರ್ಷ ರಿಲೀಸ್ ಆದ ‘ಕಬ್ಜ’ ಸಿನಿಮಾ ಆರಂಭದಲ್ಲಿ ಅನೇಕ ಕಡೆಗಳಲ್ಲಿ ಹೌಸ್​ಫುಲ್ ಆಯಿತು. ‘ಹೊಯ್ಸಳ’ ಸಿನಿಮಾ ಕೂಡ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಇದನ್ನು ಹೊರತುಪಡಿಸಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾತ್ರ ವಿಮರ್ಶೆಯಲ್ಲಿ ಗೆದ್ದಿದೆ. ಮುಂದಿನ ಕೆಲ ತಿಂಗಳು ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಸಿನಿಪ್ರಿಯರಿಗೆ ಈ ವಿಚಾರದಲ್ಲಿ ಬೇಸರ ಇದೆ.

ಇದನ್ನೂ ಓದಿ: ಹಣದ ಆಸೆಗೆ ಮಲ್ಟಿಫ್ಲೆಕ್ಸ್​ಗಳು ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿವೆ: ಆರ್.ಚಂದ್ರು

ಈ ವಾರ ‘ಶಿವಾಜಿ ಸುರತ್ಕಲ್ 2’ ರಿಲೀಸ್​

ಎಲೆಕ್ಷನ್ ಅಬ್ಬರದ ನಡುವೆಯೂ ಕೆಲ ಸಿನಿಮಾಗಳು ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳಲು ಮುಂದೆ ಬಂದಿವೆ. ಆ ಪೈಕಿ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಕೂಡ ಹೌದು. ಏಪ್ರಿಲ್ 14ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾಗೆ ಒಳ್ಳೆಯ ಪ್ರಚಾರ ನೀಡಲಾಗುತ್ತಿದೆ. ಈ ಮೊದಲು ತೆರೆಗೆ ಬಂದ ‘ಶಿವಾಜಿ ಸುರತ್ಕಲ್​’ ಯಶಸ್ಸು ಕಂಡಿರುವುದರಿಂದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇದೆ.

ಚಿತ್ರರಂಗ ಏನನ್ನುತ್ತೆ?

ಚಿತ್ರರಂಗಕ್ಕೆ ಐಪಿಎಲ್​ ಹಾಗೂ ಚುನಾವಣೆಯ ಕಾವು ತಟ್ಟದೇ ಇರದು ಅನ್ನೋದು ಕೆಲವರ ಅಭಿಪ್ರಾಯ. ‘ದೊಡ್ಡ ಬಜೆಟ್​ನ ಚಿತ್ರಗಳನ್ನು ಈ ಸಂದರ್ಭದಲ್ಲಿ ರಿಲೀಸ್ ಮಾಡೋಕೆ ನಿರ್ಮಾಪಕರು ಮುಂದೆ ಬರುವುದಿಲ್ಲ. ಸಣ್ಣ ಬಜೆಟ್ ಸಿನಿಮಾಗಳು ರಿಲೀಸ್ ಆದರೆ ಅವುಗಳಿಗೆ ಕಷ್ಟವೇ. ಈಗಿನ ಪರಿಸ್ಥಿತಿಯಲ್ಲಿ ಮತ್ತಷ್ಟು ಸಂಕಷ್ಟ ಆಗಬಹುದು. ಇದರ ಜೊತೆ ದೊಡ್ಡ ಸಿನಿಮಾಗಳು ಅದ್ದೂರಿ ಪ್ರಚಾರದೊಂದಿಗೆ ಬಂದರೆ ಯಶಸ್ಸು ಕಾಣಬಹುದು. ಇದರ ಜೊತೆಗೆ ಒಂದಷ್ಟು ಎಫೆಕ್ಟ್ ಅಂತೂ ಇದ್ದೇ ಇರುತ್ತದೆ’ ಎಂದಿದ್ದಾರೆ ನಿರ್ದೇಶಕ ಆದರ್ಶ್ ಈಶ್ವರಪ್ಪ. ‘ಶುದ್ಧಿ’, ‘ಭಿನ್ನ’ ಸಿನಿಮಾಗಳ ಮೂಲಕ ಆದರ್ಶ್​ ಈಶ್ವರಪ್ಪ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ