ಟೋಬಿ ಪ್ಯಾನ್ ಇಂಡಿಯಾ ಸಿನಿಮಾನಾ? ಏನಂದರು ರಾಜ್ ಬಿ ಶೆಟ್ಟಿ?

|

Updated on: Jun 29, 2023 | 10:34 PM

Toby: ರಾಜ್ ಬಿ ಶೆಟ್ಟಿಯ ಟೋಬಿ ಪ್ಯಾನ್ ಇಂಡಿಯಾ ಸಿನಿಮಾನಾ? ಸ್ವತಃ ರಾಜ್ ಬಿ ಶೆಟ್ಟಿ ಉತ್ತರಿಸಿದ್ದು ಹೀಗೆ...

ಟೋಬಿ ಪ್ಯಾನ್ ಇಂಡಿಯಾ ಸಿನಿಮಾನಾ? ಏನಂದರು ರಾಜ್ ಬಿ ಶೆಟ್ಟಿ?
ರಾಜ್ ಬಿ ಶೆಟ್ಟಿ
Follow us on

ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಹಲವು ಸಿನಿಮಾಗಳು ಪ್ಯಾನ್ ಇಂಡಿಯಾ (Pan Idnia) ಗುರಿಯಾಗಿಸಿಕೊಂಡು ಒಮ್ಮೆಲೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ ಕೆಜಿಎಫ್ ಹುಟ್ಟುಹಾಕಿದ ಈ ಹವಾ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲದೆ. ಹಲವು ನಿರ್ಮಾಪಕರಿಗೆ ಇದರಿಂದ ದೊಡ್ಡ ಲಾಭಗಳಾಗಿವೆ. ರಾಜ್ ಬಿ ಶೆಟ್ಟಿ (Raj B Shetty), ತಮ್ಮ ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಹಲವು ಚಿತ್ರರಂಗದ ಗಮನ ಸೆಳೆದಿದ್ದಾರೆ. ಹಾಗಾಗಿ ಅವರ ಹೊಸ ಸಿನಿಮಾ ಟೋಬಿ (Toby) ಸಹ ಪ್ಯಾನ್ ಇಂಡಿಯಾ ಆಗಿರಬಹುದು ಎಂಬ ನಿರೀಕ್ಷೆ ಇತ್ತು ಆದರೆ ಈ ಬಗ್ಗೆ ಶೆಟ್ಟರು ಬೇರೆಯದ್ದೇ ಉತ್ತರ ನೀಡಿದ್ದಾರೆ.

ಇಂದು (ಜೂನ್ 29) ಬೆಂಗಳೂರಿನ ಲುಲು ಮಾಲ್​ನಲ್ಲಿ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಯ್ತು. ಕಾರ್ಯಕ್ರಮದ ತರುವಾಯ ಆಯೋಜಿತವಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಸಿನಿಮಾ ಪ್ಯಾನ್ ಇಂಡಿಯಾ ಹೌದೊ ಅಲ್ಲವೋ ಎಂಬ ಪ್ರಶ್ನೆಗೆ ಕೆಜಿಎಫ್, ಕಾಂತಾರ ಸಿನಿಮಾಗಳ ಉದಾಹರಣೆ ಮೂಲಕ ಉತ್ತರಿಸಿದರು ರಾಜ್ ಬಿ ಶೆಟ್ಟಿ.

”ಎರಡು ರೀತಿಯ ಸಿನಿಮಾಗಳಿರುತ್ತವೆ ಒಂದು ಜನರಿಕ್ ಹಾಗೂ ಮತ್ತೊಂದು ಸ್ಪೆಸಿಫಿಕ್. ಕೆಲವು ಸಿನಿಮಾಗಳಿರುತ್ತವೆ ಅವನ್ನು ಜಗತ್ತಿನ ಯಾವುದೇ ಭಾಗದಲ್ಲಿ ಬೇಕಾದರೂ ತೋರಿಸಬಹುದು, ಉದಾಹರಣೆಗೆ ಕೆಜಿಎಫ್, ಅದು ಎಲ್ಲ ಪ್ರದೇಶಗಳಿಗೂ ಸಲ್ಲಬಹುದಾದ ಸಿನಿಮಾ. ಹಾಗೆಯೇ ಕಾಂತಾರ ಒಂದು ಪ್ರದೇಶದ ಕತೆಯುಳ್ಳ ಸಿನಿಮಾ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಆಗಿವೆ. ಆದರೆ ಕಾಂತಾರ ಉದ್ದೇಶಪೂರ್ವಕವಾಗಿ ಪ್ಯಾನ್ ಇಂಡಿಯಾ ಆಗಿ ಮಾಡಿರಲಿಲ್ಲ. ಸಿನಿಮಾ ಪ್ಯಾನ್ ಇಂಡಿಯಾ ಆಗಿದ್ದು ಅದರ ಕಂಟೆಂಟ್ ಕಾರಣಕ್ಕೆ” ಎಂದು ವಿವರಿಸಿದ್ದಾರೆ ರಾಜ್ ಬಿ ಶೆಟ್ಟಿ.

ಇದನ್ನೂ ಓದಿ: ಟೋಬಿ ಸಿನಿಮಾ ಆ ವ್ಯಕ್ತಿಯ ಜೀವನ ಆಧರಿಸಿದ್ದು: ಗುಟ್ಟು ಬಿಟ್ಟುಕೊಟ್ಟ ಕತೆಗಾರ

”ಕಾಂತಾರ ರೀತಿಯಲ್ಲಿ ಕಂಟೆಂಟ್ ಕಾರಣಕ್ಕೆ ನಮ್ಮ ಸಿನಿಮಾ ಪ್ಯಾನ್ ಇಂಡಿಯಾ ಆದರೆ ನಮ್ಮ ನಿರ್ಮಾಪಕರು ಬದುಕಿಕೊಳ್ಳುತ್ತಾರೆ. ಒಳ್ಳೆ ಹಣ ಗಳಿಸುತ್ತಾರೆ. ನಾವೂ ಸಹ ಬದುಕಿಕೊಳ್ತೀವಿ. ನಮ್ಮ ಉದ್ದೇಶ ಇದ್ದಿದ್ದು ಮೊದಲಿಗೆ ಒಂದೊಳ್ಳೆ ಸಿನಿಮಾ ಮಾಡಬೇಕು ಎಂಬುದಷ್ಟೆ. ಒಂದೊಮ್ಮೆ ನಾವು ಅಂದುಕೊಂಡಂತೆ ಸಿನಿಮಾ ರೀಚ್ ಆದರೆ ಮುಂದಕ್ಕೆ ಪ್ಯಾನ್ ಇಂಡಿಯಾ ಮಾಡಬಹುದೇನೋ ಆದರೆ ಸದ್ಯಕ್ಕೆ ಇಲ್ಲ” ಎಂದಿದ್ದಾರೆ ಶೆಟ್ಟರು.

ರಾಜ್ ಬಿ ಶೆಟ್ಟಿಯವರೇ ನಿರ್ದೇಶಿಸಿದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ಒಟಿಟಿ ಮೂಲಕ ಉತ್ತರ ಭಾರತ, ಕೇರಳ, ತಮಿಳುನಾಡುಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿದೆ. ಬಾಲಿವುಡ್​ನ ಅನುರಾಗ್ ಕಶ್ಯಪ್ ಸೇರಿದಂತೆ ಇನ್ನು ಕೆಲವು ಸಿನಿಮಾ ಕರ್ಮಿಗಳು ಗರುಡ ಗಮನ ಸಿನಿಮಾವನ್ನು ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ಆ ಜನಪ್ರಿಯತೆ ಬಳಸಿಕೊಂಡು ಟೋಬಿಯನ್ನು ಪ್ಯಾನ್ ಇಂಡಿಯಾ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಚಿತ್ರತಂಡಕ್ಕೆ ಪ್ರಸ್ತುತ ಪ್ಯಾನ್ ಇಂಡಿಯಾ ಯೋಚನೆಯಿಲ್ಲ. ಮುಂದೆ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಬಹುದಾ ಕಾದು ನೋಡಬೇಕಿದೆ. ಟೋಬಿ ಸಿನಿಮಾ ಆಗಸ್ಟ್ 25ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:24 pm, Thu, 29 June 23