‘ಟೋಬಿ’ ಸಿನಿಮಾ ಆ ವ್ಯಕ್ತಿಯ ಜೀವನ ಆಧರಿಸಿದ್ದು: ಗುಟ್ಟು ಬಿಟ್ಟುಕೊಟ್ಟ ಕತೆಗಾರ
Toby: ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾ ನಿಜ ಘಟನೆ, ನಿಜ ವ್ಯಕ್ತಿಯನ್ನು ಆಧರಿಸಿದ್ದಾಗಿದೆ ಎಂದು ಕತೆಗಾರ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿಯ (Raj B Shetty) ಟೋಬಿ (Toby) ಸಿನಿಮಾದ ಫಸ್ಟ್ ಲುಕ್ ಟೀಸರ್ (Teaser) ಇಂದು ಬಿಡುಗಡೆ ಆಗಿದೆ. ರಾಜ್ ಬಿ ಶೆಟ್ಟಿ ರಕ್ತ ಸಿಕ್ತ ಮುಖ, ಮೂಗಿನಲ್ಲಿನ ಮೂಗುತಿ ಸಿನಿಮಾದ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಕುರಿಯೊಂದನ್ನು ಕೆಣಕಿ ಮಾರಿ ಮಾಡಲಾಗಿದೆ ಎಂದು ತಮ್ಮ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿ ಬರೆದುಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬನನ್ನು ವ್ಯವಸ್ಥೆ ಅಥವಾ ಅದರ ಪ್ರತಿನಿಧಿಗಳು ಕೆಣಕಿದ್ದಕ್ಕೆ ಆತ ಹಿಂಸೆಯ ಮೂಲಕ ‘ನ್ಯಾಯ’ ಪಡೆದುಕೊಳ್ಳುವ ರಿವೇಂಜ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನುವ ಮಾತುಗಳಿವೆ. ಆದರೆ ಮುಖ್ಯ ವಿಷಯವೆಂದರೆ ಇದು ಸಂಪೂರ್ಣ ಕಾಲ್ಪನಿಕ ಕತೆಯಲ್ಲ ಇದು ನಿಜ ವ್ಯಕ್ತಿಯೊಬ್ಬನ ಮೇಲೆ ಆಧರಿತವಾದ ಸಿನಿಮಾ.
ಟೋಬಿ ಸಿನಿಮಾದ ಮೂಲ ಕತೆಯನ್ನು ಬರೆದಿರುವುದು ಕನ್ನಡದ ಜನಪ್ರಿಯ ಕತೆಗಾರ ಟಿಕೆ ದಯಾನಂದ. ಇಂದು ಬೆಂಗಳೂರಿನ ಲುಲು ಮಾಲ್ನಲ್ಲಿ ನಡೆದ ಟೋಬಿ ಸಿನಿಮಾ ಫರ್ಸ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದ ಕತೆ ಹುಟ್ಟಿದ್ದು ಹೇಗೆ, ಎಲ್ಲಿ ಸಿಕ್ಕಿತು ಎಂಬ ಬಗ್ಗೆ ಕತೆಗಾರ ದಯಾನಂದ ಮಾತನಾಡಿದ್ದಾರೆ.
ಇದನ್ನೂ ಓದಿ:ಮಾರಿಗೆ ಬಿಡಿ ದಾರಿ ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ
”ನನಗೆ ಟೋಬಿ ಕತೆ ಸಿಕ್ಕಿದ್ದು ಕಾರವಾರದಲ್ಲಿ. ಅಲ್ಲಿ ಒಬ್ಬ ವಿಲಕ್ಷಣ ವ್ಯಕ್ತಿಯನ್ನು ನಾನು ಭೇಟಿಯಾದೆ. ಆ ವ್ಯಕ್ತಿಯ ಕತೆಗೆ ನಾನು ಪರಿಚಯಗೊಂಡ ಬಳಿಕ ಅದನ್ನು ಬರೆಯುವವರೆಗೆ ಟೋಬಿ ಕತೆ ನನ್ನನ್ನು ಕಾಡುತ್ತಿದ್ದ ಡಿಸ್ಟರ್ಬ್ ಮಾಡುತ್ತಿದ್ದ. ಅಸಲಿಗೆ ಇದನ್ನು ಸಿನಿಮಾಕ್ಕಾಗಿ ಬರೆದಿದ್ದಲ್ಲ. ಆದರೆ ರಾಜ್ ಬಿ ಶೆಟ್ಟಿ ಹಾಗೂ ಅಗಸ್ತ್ಯ ಅವರು ಕತೆಗಾಗಿ ಕೇಳಿದಾಗ ನಾನು ಎರಡು ಆಯ್ಕೆಗಳನ್ನು ಇಟ್ಟಿದ್ದೆ. ಒಂದು ಟೋಬಿ ಇನ್ನೊಂದು ನಾಯಿಯ ಕತೆ. ಟೋಬಿಯನ್ನು ರಾಜ್ ಬಿ ಶೆಟ್ಟಿ ಒಪ್ಪುತ್ತಾರೆ ಎಂದುಕೊಂಡಿರಲಿಲ್ಲ. ಆದರೆ ಅವರು ಅದನ್ನೇ ಒಪ್ಪಿ ಸಿನಿಮಾ ಮಾಡಲು ಮುಂದಾದರು” ಎಂದಿದ್ದಾರೆ.
”ಒಬ್ಬ ಮನುಷ್ಯನನ್ನು ನೋಡಿದರೆ ಈತ ಇಂಥಹಾ ವ್ಯಕ್ತಿತ್ವ ಇರುವವನು ಎಂದು ನಾವು ಹೇಳಿ ಅವನ್ನು ಬ್ರ್ಯಾಂಡ್ ಮಾಡಬಹುದು ಆದರೆ ಟೋಬಿ ಆ ಯಾವುದೇ ಬ್ರ್ಯಾಂಡ್ನ ಅಡಿಯಲ್ಲಿ ಬಾರದವನು. ಅವನು ನಗಿಸುತ್ತಾನೆ, ಅಳಿಸುತ್ತಾನೆ, ನಮಗೆ ಸಿಟ್ಟು ಬರಿಸುತ್ತಾನೆ ಎಲ್ಲವನ್ನೂ ಮಾಡುತ್ತಾನೆ. ನಾವು ಈ ವರೆಗೆ ಸಿನಿಮಾಗಳಲ್ಲಿ ನೋಡಿರುವ ನಾಯಕನ ಪಾತ್ರಕ್ಕೆ ಸಂಪೂರ್ಣ ಭಿನ್ನವಾದ ಪಾತ್ರ ಟೋಬಿ. ಮೂಲ ಘಟನೆ ಕಾರವಾಲ ಅಂಕೋಲಗಳಲ್ಲಿ ನಡೆದಿದ್ದು, ಅದೇ ಮಾದರಿಯಲ್ಲಿ ಸಿನಿಮಾದಲ್ಲೂ ಇದೆ” ಎಂದಿದ್ದಾರೆ ದಯಾನಂದ್.
ದಯಾನಂದ್, ಕನ್ನಡದ ಜನಪ್ರಿಯ ಯುವ ಕತೆಗಾರರಾಗಿದ್ದು ಬೆಲ್ ಬಾಟಮ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಜೊತೆಗೆ ಅನುಶ್ರೀ ನಟಸಿರುವ ಬೆಂಕಿ ಪೊಟ್ಟಣ ಸಿನಿಮಾ ನಿರ್ದೇಶವನ್ನೂ ಮಾಡಿದ್ದಾರೆ. ಇದೀಗ ದಯಾನಂದ್ ಬರೆದಿರುವ ಟೋಬಿ ಕತೆಗೆ ರಾಜ್ ಬಿ ಶೆಟ್ಟಿ ಚಿತ್ರಕತೆ ಬರೆದಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡಿರುವುದು ಬಾಸಿಲ್. ಸಿನಿಮಾಕ್ಕೆ ಸಂಗೀತ ನೀಡಿರುವುದು ಮಿಧುನ್ ಮುಕುಂದನ್. ಸಿನಿಮಾವನ್ನು ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ. ಟೋಬಿ ಸಿನಿಮಾವು ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ