2022ರ ಮುಕ್ತಾಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳು ಬಿಡುಗಡೆಯಾಗಿ ಸದ್ದು ಮಾಡಿವೆ. ಈಗ ವರ್ಷದ ಕೊನೇ ಶುಕ್ರವಾರದ ಡಿಸೆಂಬರ್ 30ರಂದು ಕೂಡ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಭಿನ್ನ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣ ಆಗಿರುವ ಈ ಸಿನಿಮಾಗಳ ನಡುವೆ ಪೈಪೋಟಿ ಜೋರಾಗಿದೆ. ಡಾಲಿ ಧನಂಜಯ್ ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ (Once upon a Time in Jamaligudda), ಹೊಸ ಹುಡುಗರ ‘ಪದವಿ ಪೂರ್ವ’ (Padavi Poorva), ಸ್ಟಾರ್ಟಪ್ ಕನಸಿನ ಕಥೆ ಹೇಳುವ ‘ಮೇಡ್ ಇನ್ ಬೆಂಗಳೂರು’ (Made in Bengaluru) ಸೇರಿದಂತೆ ಹಲವು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ. ಪ್ರೇಕ್ಷಕರು ಯಾರಿಗೆ ವಿಜಯದ ಮಾಲೆ ಹಾಕಲಿದ್ದಾರೆ ಎಂಬುದು ಸದ್ಯದ ಕುತೂಹಲ.
ನಟ ಧನಂಜಯ್ ಅವರು ಒಂದೇ ರೀತಿಯ ಪಾತ್ರಗಳಿಗೆ ಜೋತುಬಿದ್ದಿಲ್ಲ. ಡಾಲಿ ಪಾತ್ರವನ್ನು ಅವರ ಅಭಿಮಾನಿಗಳು ಸಖತ್ ಇಷ್ಟಪಟ್ಟರೂ ಕೂಡ ಅದೇ ಇಮೇಜ್ನಲ್ಲಿ ಧನಂಜಯ್ ಮುಂದುವರಿಯಲಿಲ್ಲ. ಡಿಫರೆಂಟ್ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ. ಅಂಥ ಭಿನ್ನ ಪ್ರಯತ್ನವಾಗಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ ಅವರ ಜೊತೆ ಅದಿತಿ ಪ್ರಭುದೇವ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ.
ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಅವರು ನಿರ್ದೇಶನ ಮಾಡಿರುವ ‘ಪದವಿ ಪೂರ್ವ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಗಮನ ಸೆಳೆದಿವೆ. ಪೃಥ್ವಿ ಶ್ಯಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್ ಮುಂತಾದ ಹೊಸ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಹೊಸ ಆಲೋಚನೆಗಳಿಗೆ ಬೆಂಗಳೂರು ಹೆಸರುವಾಸಿ. ಅನೇಕ ಯಶಸ್ವಿ ಸ್ಟಾರ್ಟಪ್ಗಳು ಶುರುವಾಗಿದ್ದು ಇದೇ ನೆಲದಲ್ಲಿ. ಅಂಥ ಒಂದು ಕಥೆಯನ್ನು ಇಟ್ಟುಕೊಂಡು ‘ಮೇಡ್ ಇನ್ ಬೆಂಗಳೂರು’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್, ಮಧುಸೂದನ್ ಗೋವಿಂದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ.
ಇದನ್ನೂ ಓದಿ: Dhananjay: ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಡಾಲಿ ಧನಂಜಯ್
ಲೋಸ್ ಮಾದ ಯೋಗಿ, ಅಪೂರ್ವಾ ಭಾರದ್ವಜ್, ದತ್ತಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನಾನು ಅದು ಮತ್ತು ಸರೋಜ’ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಪ್ರೇಕ್ಷಕರ ವಲಯದಲ್ಲಿ ಈ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ‘ಅದು’ ಎಂದರೆ ಏನು ಅಂತ ತಿಳಿಯಲು ಸಿನಿಮಾ ನೋಡಬೇಕು ಎಂದು ಸಿನಿಪ್ರಿಯರು ಕಾದಿದಾರೆ.
ಇದನ್ನೂ ಓದಿ: ಡಿ.30ಕ್ಕೆ ಹೊಸ ಹುಡುಗರ ‘ಪದವಿ ಪೂರ್ವ’ ಸಿನಿಮಾ ರಿಲೀಸ್; ಇದು ಪಿಯುಸಿ ದಿನಗಳ ಕಹಾನಿ
ಮರ್ಡರ್ ಮಿಸ್ಟರಿ ಕಥಾಹಂದರ ಇರುವ ‘ದ್ವಿಪಾತ್ರ’ ಸಿನಿಮಾದ ಜೊತೆಗೆ ‘ಜೋರ್ಡನ್’, ‘ಆಲ್ಫಾ’, ‘ಲವ್ ಸ್ಟೋರಿ 1998’, ‘ರುಧೀರ ಕಣಿವೆ’ ಸಿನಿಮಾಗಳು ಕೂಡ ಈ ವಾರ ಬಿಡುಗಡೆ ಆಗಿತ್ತಿವೆ. ಪರಭಾಷೆಯ ಕೆಲವು ಚಿತ್ರಗಳು ಸಹ ಪೈಪೋಟಿಗೆ ಇಳಿಯುತ್ತಿವೆ. ಈಗಾಗಲೇ ಉತ್ತಮ ಪ್ರದರ್ಶನ ಕಾಣುತ್ತಿರುವ ‘ವೇದ’ ಚಿತ್ರವೂ ಜನರನ್ನು ಸೆಳೆದುಕೊಳ್ಳುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Thu, 29 December 22