Year Ender 2022: ಕನ್ನಡ ಚಿತ್ರರಂಗದ ಸುವರ್ಣಯುಗ 2022; ಜಾಗತಿಕ ಮಟ್ಟದಲ್ಲಿ ರಾರಾಜಿಸಿದ ಕರುನಾಡಿನ ಸ್ವಂತಿಕೆ

2022 Kannada Movies: ಕನ್ನಡ ಸಿನಿಮಾ ಎಂದರೆ ಇಡೀ ದೇಶದ ಜನರಿಗೆ ಭರವಸೆ ಮೂಡಿದೆ. ಅಂತಹ ಬದಲಾವಣೆಗೆ 2022ರ ವರ್ಷ ಸಾಕ್ಷಿಯಾಗಿದೆ.

Year Ender 2022: ಕನ್ನಡ ಚಿತ್ರರಂಗದ ಸುವರ್ಣಯುಗ 2022; ಜಾಗತಿಕ ಮಟ್ಟದಲ್ಲಿ ರಾರಾಜಿಸಿದ ಕರುನಾಡಿನ ಸ್ವಂತಿಕೆ
‘ಕೆಜಿಎಫ್​ 2’, ‘ಕಾಂತಾರ’, ‘777 ಚಾರ್ಲಿ’
Follow us
| Updated By: ಮದನ್​ ಕುಮಾರ್​

Updated on: Dec 27, 2022 | 9:03 PM

ಮಾರುಕಟ್ಟೆಯ ದೃಷ್ಟಿಯಿಂದ ಕನ್ನಡ ಚಿತ್ರರಂಗಕ್ಕೆ (Kannada Film Industry) 2022ರ ವರ್ಷ ತುಂಬ ಮಹತ್ವವಾದದ್ದು. ಪ್ರತಿ ವರ್ಷದಂತೆ ಈ ಬಾರಿ ಕೂಡ ನೂರಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗಿವೆ. ಕೆಲವು ಸಿನಿಮಾಗಳು (Kannada Cinema) ಅಭೂತಪೂರ್ವ ಸಾಧನೆ ಮಾಡಿವೆ. ಪರಭಾಷಿಕರನ್ನು ಬೆರಗಾಗಿಸುವಂತಹ ಪ್ರಯತ್ನಗಳು ಚಂದನವನದಲ್ಲಿ ಆಗಿವೆ. ಚಂದನವನದ ಸಿನಿಮಾಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಭರವಸೆ ಮೂಡುವಂತಾಗಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ (Kantara Movie), ‘777 ಚಾರ್ಲಿ’ ಮುಂತಾದ ಚಿತ್ರಗಳು ಮಾಡಿದ ಮೋಡಿಯನ್ನು ಮರೆಯಲು ಸಾಧ್ಯವಿಲ್ಲ. ಈ ಎಲ್ಲ ಸಾಧನೆಯ ಹಿಂದಿರುವ ಸೂತ್ರವೆಂದರೆ ಸ್ವಂತಿಕೆ ಮತ್ತು ಪರಿಶ್ರಮ. ಆ ಕಾರಣದಿಂದಲೇ ಕನ್ನಡ ಚಿತ್ರರಂಗಕ್ಕೆ ಇಂದು ಹೊಸ ಚಾರ್ಮ್​ ಬಂದಿದೆ.

ಸ್ವಮೇಕ್​ ಚಿತ್ರಗಳಿಗೆ ಪ್ರೇಕ್ಷಕರ ಜೈಕಾರ:

ರಿಮೇಕ್​ ಸಿನಿಮಾಗಳನ್ನು ನೆಚ್ಚಿಕೊಳ್ಳುವ ಟ್ರೆಂಡ್​ ತಗ್ಗಿದೆ. 2022ರಲ್ಲಿ ಸದ್ದು ಮಾಡಿದ ಎಲ್ಲ ಸಿನಿಮಾಗಳು ಸ್ವಮೇಕ್​ ಎಂಬುದು ಗಮನಾರ್ಹ. ಬೇರೆ ಯಾವುದೇ ಭಾಷೆಯ ಚಿತ್ರರಂಗದಲ್ಲಿ ಹಿಟ್​ ಆದ ಸಿನಿಮಾದ ಕಥೆಯನ್ನು ಕನ್ನಡಕ್ಕೆ ತಂದು ರಿಮೇಕ್​ ಮಾಡಿದರೆ ಈ ಒಟಿಟಿ ಯುಗದಲ್ಲಿ ಗೆಲುವು ಸಿಗುವುದು ಕಷ್ಟಕರ. ಅದರ ಬದಲು ಸ್ವಂತ ಕಥೆಗಳಿಗೆ ಮಣೆ ಹಾಕಿದರೆ ಪ್ರೇಕ್ಷಕರು ಖಂಡಿತಾ ಜೈಕಾರ ಹಾಕುತ್ತಾರೆ ಎಂಬುದು 2022ರಲ್ಲಿ ಸಾಬೀತಾಗಿದೆ.

ಸ್ವಂತಿಕೆಗೆ ಬೆಲೆ ನೀಡಿದ ಕನ್ನಡ ಚಿತ್ರಗಳು:

ಈ ವರ್ಷ ಸಿನಿಮಾ ಪ್ರೇಕ್ಷಕರು ಕನ್ನಡ ಚಿತ್ರಗಳಲ್ಲಿ ಸ್ವಂತಿಕೆಯನ್ನು ಇಷ್ಟಪಟ್ಟಿದ್ದಾರೆ. ಅದು ‘ಕೆಜಿಎಫ್​ 2’ ಸಿನಿಮಾದಿಂದ ‘ಕಾಂತಾರ’ ಚಿತ್ರದವರೆಗೆ ಅನೇಕ ಸಿನಿಮಾಗಳಲ್ಲಿ ಹೈಲೈಟ್​ ಆಗಿರುವ ಅಂಶ. ತುಂಬ ಫ್ರೆಶ್​ ಎನಿಸುವಂತಹ ವಿಷಯವನ್ನು ಆಯ್ದುಕೊಂಡ ನಿರ್ದೇಶಕರಿಗೆ ಪ್ರೇಕ್ಷಕರಿಂದ ಶಹಬಾಷ್​ಗಿರಿ ಸಿಕ್ಕಿದೆ. ‘777 ಚಾರ್ಲಿ’ ಚಿತ್ರದಲ್ಲೂ ಈ ವಿಷಯ ನಿಜವಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆಯನ್ನು ಹೇಳಿದರು ನಿರ್ದೇಶಕ ಕಿರಣ್​ ರಾಜ್​. ತುಳುನಾಡಿನ ಸ್ವಂತ ಕಥೆಯನ್ನು ಜಗತ್ತಿಗೆ ಪರಿಚಯಿಸಿದರು ರಿಷಬ್​ ಶೆಟ್ಟಿ. ಸ್ವಂತಿಕೆಯನ್ನು ನಂಬಿದರೆ ಗೆಲುವು ಕೈ ಹಿಡಿಯುತ್ತದೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಹೊರರಾಜ್ಯದಲ್ಲೂ ಕನ್ನಡ ಚಿತ್ರಕ್ಕೆ ರೆಡ್​ ಕಾರ್ಪೆಟ್​ ಸ್ವಾಗತ:

ಮೊದಲೆಲ್ಲ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆ ಮಂದಿಗೆ ಒಂದು ಬಗೆಯ ತಾತ್ಸಾರ ಇರುತ್ತಿತ್ತು. ಚೆನ್ನೈ, ಹೈದರಾಬಾದ್​, ಮುಂಬೈ ಮುಂತಾದ ಕಡೆಗಳಲ್ಲಿ ನಮ್ಮ ಸಿನಿಮಾಗಳನ್ನು ಕೇಳುವವರೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಭರವಸೆ ಮೂಡಿಸುವಂತಹ ಕನ್ನಡದ ಸಿನಿಮಾಗಳನ್ನು ಹೊರರಾಜ್ಯದಲ್ಲಿ ರಿಲೀಸ್​ ಮಾಡಲು ಅಲ್ಲಿನ ವಿತರಕರು ಮುಂದೆ ಬರುತ್ತಿದ್ದಾರೆ. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿರಿದಾಗಿದೆ.

ಇದನ್ನೂ ಓದಿ: Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್​

ಬಾಲಿವುಡ್​ಗೆ ಸೆಡ್ಡು ಹೊಡೆದ ಸ್ಯಾಂಡಲ್​ವುಡ್​:

ಹಲವು ದಶಕಗಳಿಂದಲೂ ಹಿಂದಿ ಚಿತ್ರರಂಗ ಶ್ರೀಮಂತವಾಗಿದೆ. ಬಾಲಿವುಡ್​ ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ ಆದಾಗ ಕರ್ನಾಟಕದಲ್ಲಿ ಕೂಡ ಕನ್ನಡದ ಚಿತ್ರಗಳು ಥಿಯೇಟರ್​ ಸಿಗದೇ ಕಷ್ಟಪಡಬೇಕಾದ ಕಾಲ ಇತ್ತು. ಆದರೆ ಈಗ ಮುಂಬೈನಲ್ಲಿಯೇ ಹಿಂದಿ ಸಿನಿಮಾಗಳನ್ನು ಬದಿಗೊತ್ತಿ ಕನ್ನಡದ ಚಿತ್ರಗಳು ಆಳ್ವಿಕೆ ನಡೆಸುವಂತಾಗಿದೆ. ಕನ್ನಡದ ಸಿನಿಮಾಗಳ ಎದುರು ಪೈಪೋಟಿ ನೀಡಲು ಹಿಂದಿಯ ಸ್ಟಾರ್​ ನಟರ ಚಿತ್ರಗಳು ಕೂಡ ಆಲೋಚನೆ ಮಾಡಬೇಕಾದ ವಾತಾವರಣ ನಿರ್ಮಾಣ ಆಗಿದೆ. ಈ ಬೆಳೆವಣಿಗೆ ಆಗಿರುವುದು 2022ರಲ್ಲಿ. ಹಾಗಾಗಿ ಈ ವರ್ಷವನ್ನು ಸುವರ್ಣ ಯುಗ ಎನ್ನಲೇಬೇಕು.

ಇದನ್ನೂ ಓದಿ: Kantara Movie: ‘ಕಾಂತಾರ’ ಎಫೆಕ್ಟ್​; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್​ ಕಪೂರ್​

ಮುಂದಿದೆ ಸವಾಲಿನ ಕಾಲ:

ಭರವಸೆ ಮೂಡಿಸುವುದು ಎಷ್ಟು ಕಷ್ಟವೋ ಆ ಭರವಸೆಯನ್ನು ಉಳಿಸಿಕೊಂಡು ಹೋಗುವುದು ಇನ್ನೂ ಕಷ್ಟ. ಕನ್ನಡ ಸಿನಿಮಾ ಎಂದರೆ ಇಡೀ ದೇಶದ ಜನರಿಗೆ ಭರವಸೆ ಮೂಡಿದೆ. ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುವ ಸಿನಿಮಾಗಳಿಗಾಗಿ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಕಾತುರ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯ ಮಟ್ಟವನ್ನು ತಲುಪುವ ರೀತಿಯಲ್ಲಿ ಸಿನಿಮಾಗಳನ್ನು ಕಟ್ಟಿಕೊಡುವ ಸವಾಲು ಕನ್ನಡ ಚಿತ್ರರಂಗದ ಮುಂದಿದೆ.

ಬಜೆಟ್​ಗಿಂತ ಕಥಾವಸ್ತು ಮುಖ್ಯ:

ಬಿಗ್​ ಬಜೆಟ್​ನಲ್ಲಿ ಸಿನಿಮಾ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಕಲೆಕ್ಷನ್​ ಆಗುತ್ತದೆ ಎಂಬ ಭ್ರಮೆ ಚಿತ್ರರಂಗದಲ್ಲಿದೆ. ಆದರೆ ಆ ಭ್ರಮೆಯನ್ನು ‘ಕಾಂತಾರ’ ಚಿತ್ರ ತೊಡೆದುಹಾಕಿದೆ. ಕೆಲವೇ ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಸಿನಿಮಾ ಎಲ್ಲ ಭಾಷೆಗಳಿಂದ ಕಲೆಕ್ಷನ್​ ಮಾಡಿದ್ದು ಬರೋಬ್ಬರಿ 400 ಕೋಟಿ ರೂಪಾಯಿ. ಸಾಧಾರಣ ಬಜೆಟ್​ನಲ್ಲಿ ಉತ್ತಮ ಸಿನಿಮಾ ಮಾಡಿ ಜಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರ ಇದು.

ಇದನ್ನೂ ಓದಿ: Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ಐಎಂಡಿಬಿ ವೆಬ್​ವೈಟ್​ನಲ್ಲೂ ಕನ್ನಡ ಚಿತ್ರಗಳ ಸಾಧನೆ:

ಜಗತ್ತಿನಾದ್ಯಂತ ಐಎಂಡಿಬಿ ವೆಬ್​ವೈಟ್​ ಖ್ಯಾತಿ ಹೊಂದಿದೆ. 2022ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಭಾರತದ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಪ್ರಕಟ ಮಾಡಿದೆ. ಇದರಲ್ಲಿ ಕನ್ನಡದ ಮೂರು ಸಿನಿಮಾಗಳಿವೆ ಎಂಬುದು ಹೆಮ್ಮೆಯ ವಿಷಯ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ ಮತ್ತು ‘777 ಚಾರ್ಲಿ’ ಸಿನಿಮಾ ಈ ಸಾಧನೆ ಮಾಡಿವೆ. ರಾಷ್ಟ್ರಮಟ್ಟದಲ್ಲಿ ಕನ್ನಡದ ಸಿನಿಮಾಗಳನ್ನು ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೊಂದು ಪ್ರಮುಖ ಸಾಕ್ಷಿ.

2022ರಲ್ಲಿ ಮಿಂಚಿದ ಕನ್ನಡತಿಯರು:

ಸ್ಟಾರ್​ ನಟರ ಸಿನಿಮಾಗಳಿಗೆ ಪರಭಾಷೆಯಿಂದ ನಾಯಕಿಯರನ್ನು ಕರೆತರುವ ಟ್ರೆಂಡ್​ ಈಗ ಬದಲಾಗಿದೆ. ಅಪ್ಪಟ ಕನ್ನಡದ ಹುಡುಗಿಯರೇ ಈ ವರ್ಷ ಹೆಚ್ಚು ಗಮನ ಸೆಳೆದಿದ್ದಾರೆ. ‘ಕೆಜಿಎಫ್​ 2’ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ‘ಕಾಂತಾರ’ ಚಿತ್ರದಲ್ಲಿ ಸಪ್ತಮಿ ಗೌಡ, ‘777 ಚಾರ್ಲಿ’ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ‘ವೇದ’ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್​ ಹಾಗೂ ಅದಿತಿ ಸಾಗರ್​.. ಹೀಗೆ ಅನೇಕ ನಟಿಯರು ಜನಮೆಚ್ಚುಗೆ ಪಡೆದಿದ್ದಾರೆ. ಪರಭಾಷೆಯಿಂದಲೂ ಕನ್ನಡದ ನಟಿಯರಿಗೆ ಒಳ್ಳೊಳ್ಳೆಯ ಅವಕಾಶಗಳು ಬರಲಾರಂಭಿಸಿವೆ.

ಇದನ್ನೂ ಓದಿ: Top 5 Googled Films in India: ‘ಗೂಗಲ್​ ಟಾಪ್​ 5’ ಪಟ್ಟಿಯಲ್ಲಿ ಕಾಂತಾರ, ಕೆಜಿಎಫ್​ 2; ಇಡೀ ದೇಶಕ್ಕೆ ಗೊತ್ತು ಕನ್ನಡದ ತಾಕತ್ತು

‘ಹೊಂಬಾಳೆ ಫಿಲ್ಮ್ಸ್​’ ಗಮನಾರ್ಹ ಸಾಧನೆ:

ಸಿನಿಮಾವನ್ನು ತುಂಬ ಶ್ರದ್ಧೆಯಿಂದ ಮಾಡುವವರಿಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬೆಂಬಲವಾಗಿ ನಿಂತಿದೆ. ಪ್ರಶಾಂತ್​ ನೀಲ್​ ಅವರಂತಹ ನಿರ್ದೇಶಕನ ಮೇಲೆ ನಂಬಿಕೆ ಇಟ್ಟು ‘ಕೆಜಿಎಫ್​’ ಸಿನಿಮಾ ನಿರ್ಮಿಸಿದ ಈ ಸಂಸ್ಥೆ ಈಗ ಅದೇ ರೀತಿಯ ಅನೇಕ ನಿರ್ದೇಶಕರಿಗೆ ವೇದಿಕೆ ಒದಗಿಸಿಕೊಡುತ್ತಿದೆ. ‘ಕಾಂತಾರ’ ಚಿತ್ರ ಮೂಡಿಬಂದಿದ್ದು ಕೂಡ ಇದೇ ಬ್ಯಾನರ್​ನಲ್ಲಿ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳನ್ನೂ ಈ ಸಂಸ್ಥೆ ನಿರ್ಮಿಸುತ್ತಿದೆ. ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ಬಲಪಡಿಸಿಕೊಳ್ಳುವಲ್ಲಿ ಕರುನಾಡಿನ ಈ ನಿರ್ಮಾಣ ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ನಂತರದ ದಿನಗಳಲ್ಲಿ ಪರಭಾಷೆಯ ಸಿನಿಮಾಗಳಲ್ಲಿ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರಿಗೆ ಅವಕಾಶ ಸಿಗಲು ಇದರಿಂದ ಅನುಕೂಲ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.