James Movie Release Highlights: ‘ಜೇಮ್ಸ್’ ಇಷ್ಟಪಷ್ಟ ಫ್ಯಾನ್ಸ್; ಅಪ್ಪು ಸಮಾಧಿ ದರ್ಶನ ಮಾಡಿದ 25,000ಕ್ಕೂ ಹೆಚ್ಚು ಅಭಿಮಾನಿಗಳು

| Updated By: Digi Tech Desk

Updated on: Mar 17, 2022 | 5:58 PM

Puneeth Rajkumar | James Movie Release Highlights: ಪುನೀತ್ ರಾಜ್​ಕುಮಾರ್​​ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಇಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಪುನೀತ್ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಇದರ ಮುಖ್ಯಾಂಶಗಳು ಇಲ್ಲಿ ಲಭ್ಯವಿದೆ.

James Movie Release Highlights: ‘ಜೇಮ್ಸ್’ ಇಷ್ಟಪಷ್ಟ ಫ್ಯಾನ್ಸ್; ಅಪ್ಪು ಸಮಾಧಿ ದರ್ಶನ ಮಾಡಿದ 25,000ಕ್ಕೂ ಹೆಚ್ಚು ಅಭಿಮಾನಿಗಳು
ಪುನೀತ್ ರಾಜ್​ಕುಮಾರ್

ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಜನ್ಮದಿನವಿಂದು. ಅವರಿಲ್ಲ ಎಂಬ ಕೊರಗಿನಲ್ಲಿಯೇ ಅಪ್ಪು ನಾಯಕನಾಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ (James) ಇಂದು (ಮಾರ್ಚ್ 17) ತೆರೆಗೆ ಬಂದಿದೆ. ವಿಶ್ವಾದ್ಯಂತ ಪ್ರೇಕ್ಷಕರು ‘ಜೇಮ್ಸ್’ಗೆ ಭರ್ಜರಿ ಸ್ವಾಗತ ಕೋರುತ್ತಿದ್ದಾರೆ. ರಾಜ್ಯಾದ್ಯಂತ ಅಪ್ಪು ಅಭಿನಯದ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಮಹಿಳಾ ಅಭಿಮಾನಿಗಳು ಪುಟ್ಟ ಮಕ್ಕಳ ಜತೆ ಸಿನಿಮಾ ವೀಕ್ಷಣೆಗೆ ಬರುತ್ತಿದ್ದಾರೆ. ಹಲವರು ಪುನೀತ್ ನೆನೆದು ಭಾವುಕರಾಗಿದ್ದಾರೆ. ತುಮಕೂರು, ಬಳ್ಳಾರಿ, ಕೊಪ್ಪಳದಲ್ಲಿ ಜೇಮ್ಸ್‌ಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ಜೇಮ್ಸ್‌ಗೆ ಅದ್ದೂರಿಯಾಗಿ ವೆಲ್​ಕಂ ಮಾಡಲಾಗಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಟೆಕೆಟ್ ಸೋಲ್ಡ್‌ಔಟ್ ಆಗುತ್ತಿದೆ. ಚಾಮರಾಜನಗರ, ಮೈಸೂರು, ದಾವಣಗೆರೆ, ಕೋಲಾರ, ಕಲಬುರಗಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ‘ಜೇಮ್ಸ್’ ರಿಲೀಸ್ ಹಬ್ಬ ಭರ್ಜರಿಯಾಗಿದ್ದು ನಡೆದಿದೆ.

ರಾಜ್ಯಾದ್ಯಂತ ಪುನೀತ್ (Puneeth Rajkumar) ಜನ್ಮದಿನದ ಹರ್ಷಾಚರಣೆ ಜೋರಾಗಿತ್ತು. ಹಲವೆಡೆ ಅಭಿಮಾನಿಗಳು ಸಮಾಜಮುಖಿ ಕಾರ್ಯದ ಮೂಲಕ ಮಾದರಿಯಾದರು. ರಾಘಣ್ಣ ಹಾಗೂ ಶಿವಣ್ಣ ಅಭಿಮಾನಿಗಳೊಂದಿಗೆ ಬೆರೆತು ಚಿತ್ರದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹಲವೆಡೆ ನೇತ್ರದಾನ ಹಾಗೂ ದೇಹದಾನಕ್ಕೆ ಜನರು ನೋಂದಾಯಿಸಿದ್ದಾರೆ.

ಅಪ್ಪು ಸಮಾಧಿಗೆ ಜನಸಾಗರ; ಇದುವರೆಗೆ 25,000ಕ್ಕೂ ಹೆಚ್ಚು ಜನರಿಂದ ದರ್ಶನ: ಅಪ್ಪು ಸಮಾಧಿಗೆ ಇಂದು ಜನಸಾಗರ ಹರಿದುಬಂದಿದೆ. ಇದುವರೆಗೆ 25 ಸಾವಿರ ಜನರಿಂದ ಸಮಾಧಿ ದರ್ಶನ ಮಾಡಲಾಗಿದೆ. ಇನ್ನೂ ಸರದಿ‌ ಸಾಲಿನಲ್ಲಿ ಅಭಿಮಾನಿಗಳು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಆಗಮಿಸಿ ಪುನೀತ್ ದರ್ಶನ ಪಡೆದಿದ್ದಾರೆ. ಇಂದು ಜನರು ಹೆಚ್ಚಿರುವ ಕಾರಣ, ಅಪ್ಪು ಸಮಾಧಿ‌ ದರ್ಶನಕ್ಕೆ 8.30 ರ ವರೆಗೂ ಅವಕಾಶ ನೀಡಲಾಗಿದೆ. ಮಾಮೂಲಿ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ದರ್ಶನಕ್ಕೆ ಹೆಚ್ಚಿನ ಸಮಯಾವಕಾಶ ಕೋರಿ, ಪೊಲೀಸರಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸ್ವತಃ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ 8.30 ರ ವರೆಗೂ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

‘ಜೇಮ್ಸ್’ ರಿಲೀಸ್ ಸಂಭ್ರಮದ ಲೈವ್ ಇಲ್ಲಿ ವೀಕ್ಷಿಸಬಹುದು:

LIVE NEWS & UPDATES

The liveblog has ended.
  • 17 Mar 2022 04:04 PM (IST)

    ಅಪ್ಪು ಸಮಾಧಿಗೆ ಜನಸಾಗರ; ಇದುವರೆಗೆ 25,000ಕ್ಕೂ ಹೆಚ್ಚು ಜನರಿಂದ ದರ್ಶನ

    ಅಪ್ಪು ಸಮಾಧಿಗೆ ಇಂದು ಜನಸಾಗರ ಹರಿದುಬಂದಿದೆ. ಇದುವರೆಗೆ 25 ಸಾವಿರ ಜನರಿಂದ ಸಮಾಧಿ ದರ್ಶನ ಮಾಡಲಾಗಿದೆ. ಇನ್ನೂ ಸರದಿ‌ ಸಾಲಿನಲ್ಲಿ ಅಭಿಮಾನಿಗಳು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಆಗಮಿಸಿ ಪುನೀತ್ ದರ್ಶನ ಪಡೆದಿದ್ದಾರೆ.

    ಇಂದು ಜನರು ಹೆಚ್ಚಿರುವ ಕಾರಣ, ಅಪ್ಪು ಸಮಾಧಿ‌ ದರ್ಶನಕ್ಕೆ 8.30 ರ ವರೆಗೂ ಅವಕಾಶ ನೀಡಲಾಗಿದೆ. ಮಾಮೂಲಿ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ದರ್ಶನಕ್ಕೆ ಹೆಚ್ಚಿನ ಸಮಯಾವಕಾಶ ಕೋರಿ, ಪೊಲೀಸರಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸ್ವತಃ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ 8.30 ರ ವರೆಗೂ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

  • 17 Mar 2022 04:00 PM (IST)

    ಅಪ್ಪು ಹುಟ್ಟೂರಿಗೆ ಸೈಕ್ಲಿಂಗ್​ನಲ್ಲಿ ತೆರಳಿ ಜನ್ಮದಿನ ಆಚರಿಸಿದ ಅಭಿಮಾನಿಗಳು

    ಚಾಮರಾಜನಗರ: ಅಪ್ಪು ಸಮಾಧಿಯಿಂದ ಗಾಜನೂರಿಗೆ ಸೈಕ್ಲಿಂಗ್‌ನಲ್ಲಿ ಆಗಮಿಸಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನಿಂದ ಸೈಕ್ಲಿಂಗ್ ಮೂಲಕ ಆಗಮಿಸಿದ ಅಭಿಮಾನಿಗಳು ಗಾಜನೂರಿನ ಅಪ್ಪು ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಅಪ್ಪುಗೆ ಸೈಕ್ಲಿಂಗ್​ನಲ್ಲಿ ವಿಶೇಷ ಪ್ರೀತಿ. ಇದೇ ಕಾರಣಕ್ಕೆ ಅಭಿಮಾನಿಗಳು ಸೈಕ್ಲಿಂಗ್​ನಲ್ಲಿ ಆಗಮಿಸಿರುವುದು ವಿಶೇಷ.


  • 17 Mar 2022 03:59 PM (IST)

    ಸಂಪೂರ್ಣ ಶೋ ಟಿಕೇಟ್ ಖರೀದಿಸಿದ ಭರತ್ ರೆಡ್ಡಿ; ಅಭಿಮಾನಿಗಳಿಗೆ ಎಲ್ಲಾ 783 ಟಿಕೆಟ್ ಉಚಿತ ಹಂಚಿಕೆ

    ಬಳ್ಳಾರಿ: ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಬಳ್ಳಾರಿಯ ಟಚ್ ಪಾರ್ ಲೈಪ್ ಪೌಂಡೇಶನ್ ಅಧ್ಯಕ್ಷ ಭರತ್ ರೆಡ್ಡಿ ಭರ್ಜರಿ ಗಿಪ್ಟ್ ನೀಡಿದ್ದಾರೆ. ಅಪ್ಪು ಅಭಿಮಾನಿಗಳಿಗೆ 783 ಉಚಿತ ಟಿಕೆಟ್​ಅನ್ನು ಅವರು ವಿತರಣೆ ಮಾಡಿದ್ದಾರೆ. ಸಂಜೆಯ ಪ್ರದರ್ಶನದ ಎಲ್ಲ ಟಿಕೇಟ್ ಖರೀದಿಸಿದ ಭರತರೆಡ್ಡಿ, ಅಪ್ಪು ಅಭಿಮಾನಿಗಳಿಗೆ ಉಚಿತ ಟಿಕೇಟ್ ಹಂಚಿಕೆ ಮಾಡಿದ್ದಾರೆ. ಸಂಜೆ ಅಭಿಮಾನಿಗಳೊಂದಿಗೆ ಅವರೂ ಚಿತ್ರ ವೀಕ್ಷಿಸಲಿದ್ದಾರೆ.

  • 17 Mar 2022 03:52 PM (IST)

    ಹಟ್ಟಿ ಚಿನ್ನದ ಗಣಿಯಲ್ಲಿ ಅಪ್ಪು ಜನ್ಮದಿನ ಆಚರಣೆ

    ರಾಯಚೂರು: ಡಾ.ಪುನೀತ್ ರಾಜಕುಮಾರ 47 ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಲ್ಲಿ ಅಪ್ಪು ಹುಟ್ಟು ಹಬ್ಬ ಆಚರಿಸಲಾಯಿತು. ಅಪ್ಪು ಭಾವಚಿತ್ರವಿರುವ ಕನ್ನಡ ಬಾವುಟವನ್ನು ಅನಾವರಣ ಮಾಡಲಾಯಿತು. ಕಂಠೀರವ ಸ್ಟುಡಿಯೋದ ಸಮಾಧಿ ಹೋಲುವಂತೆ ಹಟ್ಟಿ ಚಿನ್ನದ ಗಣಿಯಲ್ಲಿಯೂ ಅದೇ ರೀತಿ ಡೆಕೋರೇಶನ್ ಮಾಡಲಾಗಿತ್ತು.

    ಅನಾಥ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಅಪ್ಪು ಹಬ್ಬ ಆಚರಣೆ ಮಾಡಲಾಯಿತು. ಹಟ್ಟಿಗೋಲ್ಡ್‌ಮೈನ್ ಅಧ್ಯಕ್ಷ ಮಾನಪ್ಪ ಡಿ ವಜ್ಜಲ್ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಹಟ್ಟಿ ಚಿನ್ನದ ಗಣಿ ವತಿಯಿಂದ ರಕ್ತದಾನ ಶಿಬಿರ, ಅನ್ನ ದಾಸೋಹ ಕಾರ್ಯಕ್ರಮ ಹಾಗೂ ಸಂಜೆ ಅಪ್ಪು ಆರ್ಕೆಸ್ಟ್ರಾ ಆಯೋಜಿಸಲಾಗಿದೆ.

  • 17 Mar 2022 03:46 PM (IST)

    ಮೈಸೂರು: ಚಿತ್ರಮಂದಿರಗಳ ಒಳಗೆ ಪಟಾಕಿ ಹಚ್ಚಿದ ಅಭಿಮಾನಿಗಳು; ಕೆಲ ಕಾಲ ಆತಂಕದ ವಾತಾವರಣ

    ಮೈಸೂರು: ಮೈಸೂರಿನಲ್ಲಿ ‘ಜೇಮ್ಸ್’ ಕ್ರೇಜ್ ಹೆಚ್ಚಾಗಿದೆ. ಚಿತ್ರಮಂದಿರದ ಒಳಗೆ ಅಭಿಮಾನಿಗಳು 10 ಶಾಟ್ ಪಟಾಕಿ‌ ಸಿಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಪಿರಿಯಾಪಟ್ಟಣ ಶಾರದ ಚಿತ್ರಮಂದಿರದಲ್ಲಿ ಘಟನೆ ನಡೆದಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.

  • 17 Mar 2022 03:30 PM (IST)

    ಯಾದಗಿರಿ: 17 ನೇ ತಾರೀಖಿನ ಕಾರಣ 17 ಕೆಜಿ ಕಟ್ ಮಾಡಿದ ಫ್ಯಾನ್ಸ್

    ಯಾದಗಿರಿಯಲ್ಲಿ ಅಪ್ಪು ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆಸಲಾಯಿತು. ನಗರದ ಗಾಂಧಿ ವೃತ್ತದ ಪಂಪಕವಿ ಮಂಟಪದಲ್ಲಿ‌ 17 ನೇ ತಾರೀಖಿನಂದು ಬರ್ತಡೇ ಹಿನ್ನಲೆ 17 ಕೆಜಿ ಕೇಕ್ ಕಟ್ ಮಾಡಿ ಫ್ಯಾನ್ಸ್ ಸಂಭ್ರಮಿಸಿದರು. ಅಭಿಮಾನಿಗಳಿಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

  • 17 Mar 2022 03:27 PM (IST)

    ‘ಜೇಮ್ಸ್’ಗೆ ತೆರಿಗೆ ವಿನಾಯಿತಿ ವಿಚಾರ; ’ನನ್ನ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಸಿಎಂ ಜತೆ ಚರ್ಚಿಸುವೆ’: ಸಚಿವ ಆರಗ

    ಪುನೀತ್​ರನ್ನು ಸ್ಮರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

    ಪುನೀತ್ ಬದುಕಿದ್ದರೆ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ದುರಾದೃಷ್ಟವಶಾತ್ ಅವರು ಬದುಕಿಲ್ಲ. ಅವರ ಸಿನಿಮಾ ಇಂದು ರಿಲೀಸ್ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ನಡವಳಿಕೆಯಿಂದ ಯುವಕರಿಗೆ ಉತ್ತಮ ಹಾದಿ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನುಡಿದಿದ್ದಾರೆ. ತೆರಿಗೆ ವಿನಾಯಿತಿ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ ಅವರು, ಆದರೂ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

  • 17 Mar 2022 03:19 PM (IST)

    ಚಿತ್ರದುರ್ಗ: ರಕ್ತದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿಗಳು

    ಚಿತ್ರದುರ್ಗ: ಅಪ್ಪು ಜನುಮ ದಿನ ಪ್ರಯುಕ್ತ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಸಲಾಯಿತು. ಅಪ್ಪು ಅಭಿಮಾನಿ ಬಳಗದಿಂದ ಶಿಬಿರ ಆಯೋಜಿಸಲಾಗಿತ್ತು. ಗ್ರಾಮದ ಅನೇಕ ಯುವಕರು ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.

    ಬೆಳಗಾವಿ: ಇವತ್ತು ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬ, ಜೇಮ್ಸ್ ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ್ ಪಟ್ಟಣದಲ್ಲಿ ಅಪ್ಪು ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಡಿಜೆ ಹಾಕಿ ಕುಣಿಯುತ್ತಾ ಅಪ್ಪು ಭಾವಚಿತ್ರವನ್ನು ಅಭಿಮಾನಿಗಳು ಮೆರವಣಿಗೆ ಮಾಡಿದರು. ಚಿತ್ರಮಂದಿರದಲ್ಲಿ ಉಪಹಾರ ಸೇವನೆಗೆ ಅಭಿಮಾನಿಗಳಿಂದ ವ್ಯವಸ್ಥೆ ಮಾಡಲಾಗಿತ್ತು.

  • 17 Mar 2022 03:14 PM (IST)

    ಹುಬ್ಬಳ್ಳಿ: ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ

    ಹುಬ್ಬಳ್ಳಿ: ಪುನಿತ್ ರಾಜ್​ಕುಮಾರ್ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಖಾಸಗಿ ಮಾಲ್ ಬಳಿ ನೇತ್ರದಾನ,ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಏರ್ಪಡಿಸಿದ್ದರು. ಚಿತ್ರ ವೀಕ್ಷಣೆಗೆ ಬಂದವರು ರಕ್ತ ದಾನ, ನೇತ್ರದಾನ ಮಾಡಿದ್ದಾರೆ.

  • 17 Mar 2022 03:12 PM (IST)

    ಯಾದಗಿರಿ: ನೇತ್ರದಾನ ಹಾಗೂ ದೇಹದಾನಕ್ಕೆ ನೋಂದಾಯಿಸಿದ ಅಭಿಮಾನಿಗಳು

    ಯಾದಗಿರಿ: ಅಪ್ಪು ಹುಟ್ಟುಹಬ್ಬ ಹಿನ್ನಲೆಯಲ್ಲಿ ನಗರದ ಗಾಂಧಿ ವೃತ್ತದ ಬಳಿಯ ಪಂಪಕವಿ ಮಂಟಪದಲ್ಲಿ ನೂರಕ್ಕೂ ಅಧಿಕ ಅಭಿಮಾನಿಗಳಿಂದ ರಕ್ತ ದಾನ ನಡೆಸಲಾಗಿದೆ. ಹತ್ತಾರು‌ ಮಂದಿ ಅಭಿಮಾನಿಗಳಿಂದ ನೇತ್ರದಾನಕ್ಕೆ ನೋಂದಣಿ ಮಾಡಿಸಲಾಗಿದ್ದು, ಓರ್ವ ಅಭಿಮಾನಿ ದೇಹದಾನಕ್ಕೆ ನಿರ್ಧರಿಸಿದ್ದಾರೆ.

  • 17 Mar 2022 02:51 PM (IST)

    ವಿಜಯಪುರ: ಟಿಕೆಟ್ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ ಅಭಿಮಾನಿಗಳು

    ವಿಜಯಪುರ: ಜೇಮ್ಸ್ ಚಿತ್ರದ ಟಿಕೆಟ್ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಅಪ್ಪು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.  ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಆನಂದ ಸಿನೆಮಾ ಮಂದಿರದಲ್ಲಿ ಘಟನೆ ನಡೆದಿದೆ. ಟಿಕೆಟ್ ನೀಡುವಂತೆ ಅಪ್ಪು ಅಭಿಮಾನಿಗಳ ಆಗ್ರಹಿಸಿದ್ದು, ಗುಂಪು ಗುಂಪಾಗಿ ಸೇರಿದ್ದಕ್ಕೆ ಲಾಠಿ ಹಿಡಿದು ಸಿಂದಗಿ ಪೊಲೀಸರು ಬೆನ್ನುಹತ್ತಿದ್ದಾರೆ. ಎರಡನೇ ಶೋದ ಟಿಕೆಟ್ ನೀಡದೇ ಇರುವುದಕ್ಕೆ ಯುವಕರು ಅಸಮಾಧಾನ ಹೊರಹಾಕಿದ್ದಾರೆ.

  • 17 Mar 2022 02:40 PM (IST)

    ಚಿಕ್ಕಬಳ್ಳಾಪುರ: ನೇತ್ರದಾನಕ್ಕೆ ನೋಂದಾಯಿಸಿದ 100ಕ್ಕೂ ಹೆಚ್ಚು ಯುವಕರು

    ಚಿಕ್ಕಬಳ್ಳಾಪುರ: ಜೇಮ್ಸ್ ರಿಲೀಸ್ ಹಾಗೂ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ವಾಣಿ ಚಿತ್ರಮಂದಿರದಲ್ಲಿ ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ಡಾ.ರಾಜ್ ಕುಮಾರ್ ಐ ಬ್ಯಾಂಕ್, ನಾರಾಯಣ ನೇತ್ರಾಲಯದಿಂದ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಜನ ಯುವಕರು ನೇತ್ರದಾನಕ್ಕೆ ನೋಂದಾಯಿಸಿದ್ದಾರೆ.

  • 17 Mar 2022 02:30 PM (IST)

    ಬಾಗಲಕೋಟೆ: ಪುನೀತ್ ಅಭಿಮಾನಿಗಳಿಗೆ ಲಾಠಿ ಬಿಸಿ

    ಬಾಗಲಕೋಟೆ: ಜಿಲ್ಲೆಯ ಶಕ್ತಿ ಚಿತ್ರಮಂದಿರಕ್ಕೆ ‘ಜೇಮ್ಸ್’ ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸೆಕೆಂಡ್ ಶೋ ಗೆ ಆರಂಭದ ವೇಳೆ ಫಸ್ಟ್ ಶೋ ಟಿಕೆಟ್ ಸಿಗದವರು, ಸೆಕೆಂಡ್ ಶೋಗೆ ಬಂದವರು ಎಲ್ಲರೂ ಸೇರಿ ದಟ್ಟಣೆ ಜಾಸ್ತಿ ಆಗಿತ್ತು. ಟಾಕೀಸ್ ಒಳಗೆ ಹೋಗಲು ಅಭಿಮಾನಿಗಳು ಮುಗಿಬಿದ್ದಾಗ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬಿಸಿ ತೋರಿಸಿದ್ದಾರೆ.

  • 17 Mar 2022 02:19 PM (IST)

    ‘ಜೇಮ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ಬಗ್ಗೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದೇನು?

    ರಾಜ್ಯದಲ್ಲಿ ಕನ್ನಡ ಚಿತ್ರಗಳಿಗೆ ಟ್ಯಾಕ್ಸ್ ಇಲ್ಲ. ಅದರ ಹೊರತಾಗಿ ಜಿಎಸ್​ಟಿ ಕಮರ್ಷಿಯಲ್ ಟ್ಯಾಕ್ಸ್ ಇದ್ದರೆ ಅದರಿಂದ ವಿನಾಯಿತಿ ನೀಡಬಹುದು ಕೋರಬಹುದು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

  • 17 Mar 2022 02:05 PM (IST)

    ಪುನೀತ್ ಪುತ್ಥಳಿ ಅನಾವರಣ ಮಾಡಿದ ಶಿವಣ್ಣ

    ಒಂದು ಕಡೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯ ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮತ್ತೊಂದು ಕಡೆ ಹುಟ್ಟುಹಬ್ಬದ ಸಂಭ್ರಮ. ಮೈಸೂರಿನ ಪಡುವಾರಹಳ್ಳಿಯಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ ಮಾಡಲಾಗಿದ್ದು, ನಾಲ್ಕು ಸಾವಿರ ಜನರಿಗೆ ಅನ್ನ ಸಂತರ್ಪಣೆ ನಡೆಸಲಾಗಿದೆ. ಪಡುವಾರಹಳ್ಳಿಗೆ ಆಗಮಿಸಿ ಪುತ್ಥಳಿ ಅನಾವರಣ ಮಾಡಿದ್ದಾರೆ ನಟ ಡಾ ಶಿವರಾಜ್‌ಕುಮಾರ್.

     

  • 17 Mar 2022 01:45 PM (IST)

    ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಅಶ್ವಿನಿ ಭೇಟಿ

    ಬೆಂಗಳೂರು: ಗವಿಪುರಂ ಗುಟ್ಟಳ್ಳಿಯ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಭೇಟಿ ನೀಡಿದ್ದಾರೆ. ಅವರು ಗವಿ ಗಂಗಾಧರೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

  • 17 Mar 2022 01:34 PM (IST)

    ದಾವಣಗೆರೆ: ಡಾ.ಪುನೀತ್ ವೃತ್ತವನ್ನು ಉದ್ಘಾಟಿಸಿದ ವಿಶೇಷ ಚೇತನ ಮಕ್ಕಳು

    ದಾವಣಗೆರೆ: ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಯುವರತ್ನ ಡಾ.ಪುನೀತ್ ರಾಜ್​ಕುಮಾರ್ ವೃತ್ತ ಉದ್ಘಾಟನೆ ಮಾಡಲಾಗಿದೆ. ಪುನೀತ್ ಜನ್ಮದಿನದ ಅಂಗವಾಗಿ ಪುನೀತ್ ರಾಜ್​ಕುಮಾರ್ ವೃತ್ತವನ್ನು ವಿಶೇಷ ಚೇತನ ಮಕ್ಕಳಿಂದ ಉದ್ಘಾಟನೆ ಮಾಡಿಸಲಾಗಿದೆ.ಈ ಗ್ರಾಮಕ್ಕೆ ಕೆಲವು ಸಲ ಪುನೀತ್ ಭೇಟಿ ನೀಡಿದ್ದರು. ನೆಚ್ಚಿನ ನಾಯಕನ ಹೆಸರು ಗ್ರಾಮದಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವಂತೆ ಗ್ರಾಮಸ್ಥರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

  • 17 Mar 2022 01:12 PM (IST)

    ‘ಜೇಮ್ಸ್’ ಚಲನಚಿತ್ರ ವೀಕ್ಷಿಸಿದ ಮಹಿಳಾ ಪೌರ ಕಾರ್ಮಿಕರು

    ಕೆಲಸಕ್ಕೆ ರಜೆ ಮಾಡಿ 70 ಮಹಿಳಾ ಪೌರ ಕಾರ್ಮಿಕರು ‘ಜೇಮ್ಸ್’ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ. ‘‘ಕಾಸ್ ಇಲ್ಲ ಅಂದ್ವಿ, ನಮ್ ಸಾಹೇಬ್ರು ಕೊಟ್ರು. ಅಪ್ಪು ಫೈಟಿಂಗ್, ಡ್ಯಾನ್ಸು, ಡೈಲಾಗ್ ಎಲ್ಲ ಸೂಪರ್’’ ಎಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.

  • 17 Mar 2022 01:10 PM (IST)

    ಇಂದಿನ ದಿನವನ್ನು ಅಭಿಮಾನಿಗಳ ದಿನವನ್ನಾಗಿ ಘೋಷಿಸಿ; ಸಾಧು ಕೋಕಿಲ ಮನವಿ

    ಹಾಸ್ಯ ನಟ ಸಾಧುಕೋಕಿಲ‌ ಕಂಠೀರವ ಸ್ಟುಡಿಯೋಗೆ ಆಗಮಿಸಿ, ಪುನೀತ್ ಸಮಾಧಿ‌‌ ದರ್ಶನ ಪಡೆದಿದ್ಧಾರೆ. ನಂತರ ಮಾತನಾಡಿದ ಅವರು, ‘‘ಇಂದಿನ ದಿವನ್ನು ಅಭಿಮಾನಿಗಳ ದಿನವನ್ನಾಗಿ ಘೋಷಿಸಬೇಕು’’ ಎಂದಿದ್ದಾರೆ. ‘‘ಇವತ್ತು ಅಪ್ಪು ಸಿನಿಮಾ ಜೇಮ್ಸ್ ರಿಲೀಸ್ ಆಗಿರೋದು ಸಂತೋಷ ತಂದಿದೆ. ಇವತ್ತು ಉತ್ಸವದ ರೀತಿಯಲ್ಲಿ ಸಿನಿಮಾ,ಜನ್ಮ ದಿನವನ್ನು‌ ಆಚರಿಸಲಾಗುತ್ತಿದೆ. ಅವರು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ, ನೋಡಿ ಖುಷಿ ಆಗುತ್ತಿದೆ. ಜನರ ಬಳಿ ಪುನೀತ್ ನಡೆದುಕೊಂಡು ರೀತಿ ಗೊತ್ತಾಗುತ್ತಿದೆ. ಅಭಿಮಾನಿಗಳ‌ ದಿನಾಚರಣೆ ಅಂತ ಈ ದಿನವನ್ನು ಘೋಷಿಸಬೇಕು’’ ಎಂದು ಅವರು ಹೇಳಿದ್ದಾರೆ.

    ಜೇಮ್ಸ್ ಸಿನಿಮಾ ಡಬ್ಬಿಂಗ್ ಮಾಡುವಾಗ 10 ಸಲ ಹೋಗಿ ಬಂದಿದ್ದೇನೆ. ಅವರನ್ನು ನೆನೆಸಿಕೊಂಡಾಗೆಲ್ಲ ಕೈ ನಡುಗುತ್ತದೆ. ಬೆಟ್ಟದ ಹೂವಿನಲ್ಲಿರುವ ಅಪ್ಪು ಸರ್ ಮುಖ ಹಾಗೆ ಉಳಿದಿದೆ. ಅವರು ಸದಾ ಹೀಗೆ ನಮ್ಮ ಜೊತೆಯಲ್ಲಿರುತ್ತಾರೆ ಎಂದು ಸಾಧು ಕೋಕಿಲ ನುಡಿದಿದ್ದಾರೆ.

  • 17 Mar 2022 01:07 PM (IST)

    ಮೈಸೂರು: ಚಿತ್ರಮಂದಿರಕ್ಕೆ ಶಿವಣ್ಣ ಭೇಟಿ; ನೆಚ್ಚಿನ ನಟನನ್ನು ನೋಡಲು ನೂಕುನುಗ್ಗಲು

    ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಡಾ.ಶಿವರಾಜ್ ಕುಮಾರ್ ಭೇಟಿ ಹಿನ್ನೆಲೆಯಲ್ಲಿ ಶಿವಣ್ಣನನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಚಿತ್ರಮಂದಿರದ ಗ್ಲಾಸ್ ಪುಡಿಪುಡಿಯಾಗಿವೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

  • 17 Mar 2022 12:58 PM (IST)

    ಕಲಬುರಗಿ: 47 ಕೆಜಿ ತೂಕದ ಕೇಕ್ ಕಟ್ ಮಾಡಿ ಪುನೀತ್ ಜನ್ಮದಿನದ ಸಂಭ್ರಮ ಆಚರಣೆ

    ಕಲಬುರಗಿ: ಪುನಿತ್ 47ನೇ ಜನ್ಮದಿನದ ಹಿನ್ನೆಲೆಯಲ್ಲಿ 47 ಕಿಲೋ ತೂಕದ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕಲಬುರಗಿ ನಗರದ ಸಂಗಮ್ ಚಿತ್ರ ಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ, ಪುನೀತ್ ಆಪ್ತರಾಗಿದ್ದ ನಿತೀನ್ ಗುತ್ತೇದಾರ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಗಿದೆ.

  • 17 Mar 2022 12:56 PM (IST)

    ನೂರು ಜನರಿಗೆ ಉಚಿತ ಟಿಕೆಟ್ ವಿತರಿಸಿದ ಅಭಿಮಾನಿ

    ಹಾವೇರಿ: ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವರು 100 ಜನರಿಗೆ ಉಚಿತವಾಗಿ ಟಿಕೆಟ್ ವಿತರಿಸಿದ್ದಾರೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದ ಮಾಲತೇಶ ಚಿತ್ರಮಂದಿರದಲ್ಲಿ ಪುನೀತ್ ಅಭಿಮಾನಿ ರಾಜು ಬಟ್ಲಕಟ್ಟಿ ಎನ್ನುವವರು ಟಿಕೆಟ್ ವಿತರಿಸಿದ್ದಾರೆ.

  • 17 Mar 2022 12:25 PM (IST)

    100 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿ, ಸನ್ಮಾನ ಮಾಡಿದ ಪುನೀತ್ ಅಭಿಮಾನಿ

    ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯ ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಮಂದಿರದ ಬಳಿ ಅಭಿಮಾನಿಗಳು ಈಗಾಗಲೇ ಹಬ್ಬ ಆಚರಿಸಿ, ಪವರ್ ಸ್ಟಾರ್ ಪುನೀತ್​ರನ್ನ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಹುಬ್ಬಳ್ಳಿಯ ಅಪ್ಪು ಅಭಿಮಾನಿ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಜೇಮ್ಸ್ ಬಿಡುಗಡೆ ಹಿನ್ನಲೆಯಲ್ಲಿ ಥಿಯೇಟರ್​ಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಈ ಕುರಿತ ವಿಡಿಯೋ ವರದಿ ಇಲ್ಲಿದೆ.

  • 17 Mar 2022 12:13 PM (IST)

    ಪುನೀತ್​ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ ಮೋಹನ್​ಲಾಲ್

    ಪುನೀತ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದ ಮಲಯಾಳಂನಬ ಖ್ಯಾತ ನಟ ಮೋಹನ್​ಲಾಲ್ ಪುನೀತ್​ರನ್ನು ಸ್ಮರಿಸಿಕೊಂಡಿದ್ದಾರೆ. ‘ಜೇಮ್ಸ್’ ಒಂದು ವಿಶೇಷ ಚಿತ್ರವಾಗಿರಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 17 Mar 2022 12:00 PM (IST)

    ಜೇಮ್ಸ್​​ಗೆ ತೆರಿಗೆ ವಿನಾಯಿತಿ ನೀಡಲು ಒತ್ತಾಯಿಸಿದ ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ

    ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಪುನೀತ್​ರ ಜನಪರ ಕಾಳಜಿ, ಸೇವೆಯನ್ನು ಮರೆಯಲಾಗಲ್ಲ ಎಂದಿರುವ ಮಾಜಿ ಸಿಎಂ ಯಡಿಯೂರಪ್ಪ, ಪುನೀತ್ ಮಾನವೀಯತೆ ದೃಷ್ಟಿಯಿಂದ ಎತ್ತರದಲ್ಲಿದ್ದರು. ಪುನೀತ್ ಕನ್ನಡಿಗರ ಪಾಲಿನ ಮಾಣಿಕ್ಯವಾಗಿದ್ದರು. ‘ಜೇಮ್ಸ್’ ಯಶಸ್ವಿಯಾಗಿ ಸಮಾಜದ ಮೇಲೆ ಬೆಳಕು ಚೆಲ್ಲಲಿ ಎಂದಿದ್ದಾರೆ. ಚಿತ್ರಕ್ಕೆ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಜತೆ ಚರ್ಚಿಸುವೆ ಎಂದು ಅವರು ಹೇಳಿದ್ದಾರೆ.

    ಜೇಮ್ಸ್‌ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಿಟಿ ರವಿ, ಪುನೀತ್ ಅಭಿನಯದ ಜೇಮ್ಸ್​ ಸಂದೇಶ ಇರುವ ಸಿನಿಮಾ. ಜೇಮ್ಸ್​ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡಲಿ ಎಂದು ಹೇಳಿದ್ದಾರೆ.

  • 17 Mar 2022 11:55 AM (IST)

    ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿದ ವಿಶಾಲ್

    ಅಪ್ಪು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ನಟ ವಿಶಾಲ್ ಟ್ವೀಟ್ ಮಾಡಿದ್ದಾರೆ. ಆತ್ಮೀಯ ಸಹೋದರ ಪುನೀತ್‌ಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದಿರುವ ಅವರು, ನೀವು ನಮ್ಮ ಜತೆ ಇಲ್ಲದಿದ್ದರೂ ನಿಮ್ಮ ನೆನಪುಗಳು ಇರುತ್ತವೆ ಎಂದು ಬರೆದಿದ್ದಾರೆ. ಜೇಮ್ಸ್ ಸಿನಿಮಾಗೂ ಅವರು ಶುಭ ಕೋರಿದ್ದಾರೆ.

  • 17 Mar 2022 11:52 AM (IST)

    ‘ಜೇಮ್ಸ್’ಗೆ ತೆರಿಗೆ ವಿನಾಯಿತಿ ನೀಡಲಿ; ಸಿಟಿ ರವಿ ಹೇಳಿಕೆ

    ಪುನೀತ್ ಹುಟ್ಟುಹಬ್ಬ ದುಃಖದಿಂದ ಆಚರಿಸುವಂತಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ನಟ ಪುನೀತ್ ರಾಜ್​ಕುಮಾರ್ ಒಬ್ಬ ಮಾದರಿ ವ್ಯಕ್ತಿ. ಪುನೀತ್ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಅದೇ ನಾವು ಅವರಿಗೆ ಕೊಡುವ ಗೌರವ ಎಂದು ಅವರು ಹೇಳಿದ್ದಾರೆ.

    ಜೇಮ್ಸ್‌ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎರಡು ಸಿನಿಮಾಗಳಿಗೆ ತಂದಿಡುವ ಕೆಲಸ ಮಾಡಬಾರದು. ಕಾಶ್ಮೀರ್ ಫೈಲ್ಸ್​ ಸತ್ಯಾಂಶಗಳ ಮೇಲೆ ತೆಗೆದಿರುವ ಚಿತ್ರ. ಪುನೀತ್ ಅಭಿನಯದ ಜೇಮ್ಸ್​ ಸಂದೇಶ ಇರುವ ಸಿನಿಮಾ. ಜೇಮ್ಸ್​ ಚಿತ್ರಕ್ಕೂ ಸಹ ತೆರಿಗೆ ವಿನಾಯಿತಿ ಕೊಡಲಿ. ಆದರೆ ಎರಡೂ ಸಿನಿಮಾಗಳನ್ನು ಹೋಲಿಕೆ ಮಾಡುವುದು ಬೇಡ ಎಂದು ಹೇಳಿದ್ದಾರೆ.

  • 17 Mar 2022 11:45 AM (IST)

    ಪುನೀತ್ ಅಜರಾಮರ; ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್

    ಪುನೀತ್ ಹುಟ್ಟುಹಬ್ಬಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘‘ಪುನೀತ್ ರಾಜ್‌ಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ, ಕೋಟ್ಯಂತರ ಹೃದಯಗಳಲ್ಲಿ ನಟ ಪುನೀತ್ ಅಜರಾಮರರಾಗಿದ್ದಾರೆ. ಅಪ್ಪುವನ್ನು ಇಂದು ಪ್ರೀತಿ ಮತ್ತು ದುಃಖದಿಂದ ಸ್ಮರಿಸುತ್ತೇನೆ. ಪುನೀತ್ ಸರಳ,‌ ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಇದ್ದರು. ಪುನೀತ್ ಪ್ರತಿಭಾಶಾಲಿ ವ್ಯಕ್ತಿತ್ವ ಕೋಟ್ಯಂತರ ಜನರ ಮನದಲ್ಲಿದೆ. ಪುನೀತ್ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ’’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

  • 17 Mar 2022 11:26 AM (IST)

    ಪುನೀತ್ ಹುಟ್ಟುಹಬ್ಬಕ್ಕೆ ಜಕ್ಕೂರು ಏರೊಡ್ರೋಮ್​ನಿಂದ ವಿಶೇಷ ಶುಭಾಶಯ; ವಿಶೇಷ ಹೆಲಿಕಾಪ್ಟರ್ ಹಾರಾಟದ ಮಾರ್ಗ ಹೇಗೆ?

    ಪುನೀತ್ ಹುಟ್ಟುಹಬ್ಬಕ್ಕೆ ಜಕ್ಕೂರು ಏರೊಡ್ರೋಮ್​ನಿಂದ ವಿಶೇಷ ಶುಭಾಶಯ ಸಲ್ಲಿಸಲಾಗುತ್ತದೆ. ಹ್ಯಾಪಿ ಬರ್ತ್ ಡೆ ಪವರ್ ಸ್ಟಾರ್ ಎಂಬ ಪೋಸ್ಟರ್ ಹೊತ್ತು ಹೆಲಿಕಾಪ್ಟರ್ ಹಾರಾಡಲಿದೆ. ಅದರ ಕುರಿತ ಮಾಹಿತಿ ಇಲ್ಲಿದೆ. ಇಂದು 0930 ರಿಂದ 1130 ರವರೆಗೆ ಮತ್ತು ಸಂಜೆ 1600 ರಿಂದ 1800 ರವರೆಗೆ ಬ್ಯಾನರ್‌ ಹೊತ್ತು ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಅದು ಸಾಗುವ ಮಾರ್ಗ ಹೀಗಿದೆ: 1. ಜಕ್ಕೂರಿನಿಂದ ಡಾ. ರಾಜ್‌ಕುಮಾರ್ ಸಮಾದಿ 20 ನಿಮಿಷಗಳು 2. ಓರಿಯನ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಹಿನಗರ, ಮೆಜೆಸ್ಟಿಕ್ ಮತ್ತು ಗಾಂಧಿನಗರ ಸ್ಥಳದಿಂದ 40 ನಿಮಿಷಗಳು. 3. ಕೆ ಆರ್ ಮಾರುಕಟ್ಟೆ, ವಿ ವಿ ಪುರಂ, ಭಾನಶಂಕರಿ, ಮೈಸೂರು ರಸ್ತೆ ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಳ್ಳಂದೂರು, ದೊಮ್ಮಲೂರು, ಕೆ ಆರ್ ಪುರಂ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಮನಾಯತ ಟೆಕ್ ಪಾರ್ಕ್, ಭಾರತೀಯ ಮಾಲ್ ಮತ್ತು ಜಕ್ಕೂರ್ ಏರೋಡ್ರೋಮ್ 60 ನಿಮಿಷಗಳು. ಈ ಸ್ಥಳಗಳಲ್ಲಿ ಮುಖ್ಯವಾಗಿ ಎಲ್ಲಾ ಥಿಯೇಟರ್‌ಗಳು ಮತ್ತು ಮಾಲ್‌ಗಳನ್ನು ಒಳಗೊಂಡಿದೆ.

  • 17 Mar 2022 11:16 AM (IST)

    ಶಿವಮೊಗ್ಗ: ಸಿನಿಮಾ ವೀಕ್ಷಣೆ ಬಳಿಕ ನೇತ್ರದಾನಕ್ಕೆ ನೋಂದಣಿ

    ಪುನೀತ್ ಅಭಿನಯದ ಜೇಮ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿವಮೊಗ್ಗದ ಹೆಚ್‌ಪಿಸಿ ಚಿತ್ರಮಂದಿರದ ಬಳಿ ಸಿನಿಮಾ ವೀಕ್ಷಣೆ ಬಳಿಕ ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಯಿಂದ ನೇತ್ರದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

  • 17 Mar 2022 11:08 AM (IST)

    ಚಿಕ್ಕೋಡಿಯ ಅಂಕಲಿಯಲ್ಲಿ ವಿಶೇಷವಾಗಿ ಜೇಮ್ಸ್​​ಗೆ ಸ್ವಾಗತ

    ಚಿಕ್ಕೋಡಿ: ‘ಜೇಮ್ಸ್’ ರಿಲೀಸ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪಟ್ಟಣದ ಮಯೂರ ಚಿತ್ರಮಂದಿರದ ಮುಂದೆ ಅಭಿಮಾನಿಗಳಿಂದ 400 ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಚಿತ್ರಮಂದಿರದ ಮುಂದೆ ಕಟೌಟ್ ಗೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಲಾಗಿದೆ. ಅಪ್ಪುಗೆ ಜೈಕಾರ ಕೂಗಿ, ಪಟಾಕಿ ಹೊಡೆದು ಜೇಮ್ಸ್ ಚಿತ್ರಕ್ಕೆ ಶುಭಹಾರೈಕೆ ಸಲ್ಲಿಸಲಾಗಿದೆ.

  • 17 Mar 2022 10:57 AM (IST)

    ರಾಮನಗರದಲ್ಲಿ ‘ಜೇಮ್ಸ್’ ರಿಲೀಸ್ ಸಂಭ್ರಮ

    ರಾಮನಗರ: ಜೇಮ್ಸ್ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ವಿಶೇಷ ತಿಂಡಿಯ ವ್ಯವಸ್ಥೆಯನ್ನು ಶಾನ್ ಚಿತ್ರಮಂದಿರದ ಮುಂದೆ ಆಯೋಜಿಸಲಾಗಿದೆ. ಜೊತೆಗೆ ಚಿತ್ರಮಂದಿರದ ಮುಂದೆ ಡೊಳ್ಳು, ಪೂಜಾ ಕುಣಿತ, ಪಟ್ಟದ ಕುಣಿತ ಮೊದಲಾದವುಗಳನ್ನು ಏರ್ಪಡಿಸಲಾಗಿದೆ.

  • 17 Mar 2022 10:47 AM (IST)

    ಫಿಲ್ಮ್ ಸಿಟಿಗೆ ಪುನೀತ್ ಹೆಸರಿಡುವ ಬಗ್ಗೆ ಶಿವಣ್ಣ ಹೇಳಿದ್ದೇನು?

    ನಟ ಪುನೀತ್ ಹೆಸರು ಎಲ್ಲರ ಮನದಲ್ಲಿಯೂ ಇದೆ ಎಂದಿರುವ ಶಿವರಾಜ್​ಕುಮಾರ್ ಫಿಲ್ಮ್ ಸಿಟಿಗೆ ಪುನೀತ್ ಹೆಸರಿಡುವ ಬಗ್ಗೆ ಚರ್ಚಿಸುವುದಿಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಅವರು ಮಾತನಾಡಿದ್ದಾರೆ.

  • 17 Mar 2022 10:36 AM (IST)

    ದೊಡ್ಮನೆಯಿಂದ 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಣೆ

    ವೀರೇಶ್ ಚಿತ್ರಮಂದಿರದಲ್ಲಿ ಡಾ.ರಾಜ್ ಕುಟುಂಬದಿಂದ ಸಸಿ, ಬಟ್ಟೆ ವಿತರಣೆ ಮಾಡಲಾಗಿದೆ. ಚಿತ್ರ ವೀಕ್ಷಿಸಿದ ಬಳಿಕ ಶ್ರೀಮುರಳಿ, ಯುವರಾಜ್ ಸೇರಿ ದೊಡ್ಮನೆ ಕುಟುಂಬವು ಸುಮಾರು 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಿಸಿದ್ದಾರೆ.

  • 17 Mar 2022 10:23 AM (IST)

    ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವಣ್ಣ ದಂಪತಿ

    ಮೈಸೂರಿನ‌ ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ನಟ ಶಿವರಾಜ್​ಕುಮಾರ್ ದಂಪತಿ ಭೇಟಿ ನೀಡಿದ್ದಾರೆ. ಪತ್ನಿ ಗೀತಾ ಜೊತೆ ಸ್ವತಃ ಬೈಕ್ ಚಲಾಯಿಸಿಕೊಂಡು ಶಿವಣ್ಣ ಆಗಮಿಸಿದ್ದಾರೆ. ಮೂರು ದಿನಗಳಿಂದ ಶಿವಣ್ಣ ದಂಪತಿ ಶಕ್ತಿ‌ಧಾಮದ ಮಕ್ಕಳ ಜೊತೆಗಿದ್ದಾರೆ. ಸಹೋದರ ಪುನೀತ್‌ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಲಿದ್ದಾರೆ. ಗಾಯತ್ರಿ, ಉಡ್‌ಲ್ಯಾಂಡ್, ಸಂಗಂ ಚಿತ್ರಮಂದಿರಗಳಿಗೆ ಅವರು ಭೇಟಿ ನೀಡಲಿದ್ದು, ಸಂಜೆ ಮೈಸೂರಿನಲ್ಲೇ ಜೇಮ್ಸ್ ಚಿತ್ರವನ್ನು ವೀಕ್ಷಿಸಲಿದ್ದಾರೆ.

  • 17 Mar 2022 10:18 AM (IST)

    ಪುನೀತ್​ಗೆ ತಾವೇ ಸ್ವತಃ ತಯಾರಿಸಿದ ವಿಶೇಷ ಮಂಡಕ್ಕಿ ಹಾರ ತಂದ ವೃದ್ಧೆ

    ಬೆಂಗಳೂರು: ಪುನೀತ್ ಮೇಲಿನ ಅಭಿಮಾನದಿಂದ ವೃದ್ಧೆಯೋರ್ವರು ತಾವೇ ಸ್ವತಃ ತಯಾರಿಸಿದ ಮಂಡಕ್ಕಿ ಹಾರವನ್ನು ತಂದಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘‘ಡಾ.ರಾಜ್​​ಕುಮಾರ್ ಮೃತರಾದಾಗ ಮಂಡಕ್ಕಿ‌ ಹಾರ ತಂದಿದ್ದೆ. ಅಂದಿನಿಂದ ಪುನೀತ್ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನೇ ಸ್ವತಃ ಪೋಣಿಸಿರುವ ಮಂಡಕ್ಕಿ‌ ಹಾರ ಇದು. ಈ ಹಾರ ಮಾಡಲು ಒಂದು ವಾರ ತೆಗೆದುಕೊಂಡಿದ್ದೇನೆ. ಸರಿಯಾಗಿ‌ ಕಣ್ಣು ಕಾಣಲ್ಲ, ಸೊಂಟ ನೋವು ಬರುತ್ತೆ. ಆಗ ಕೆಲ ಹೊತ್ತು ನಿಲ್ಲಿಸಿ ಮತ್ತೆ ಪೋಣಿಸುತ್ತೇನೆ’’ ಎಂದಿದ್ದಾರೆ ವೃದ್ಧೆ ಸುಮಿತ್ರಾ ಬಾಯಿ.

    ‘‘ಈ ಹಾರವನ್ನು ನಾನು ಎಲ್ಲರಿಗೂ ಮಾಡಿ ಹಾಕಲ್ಲ ಎಂದಿರುವ ಅವರು, ಡಾ.ರಾಜ್​​ಕುಮಾರ್ ಸಮಾಧಿ, ಪಾರ್ವತಮ್ಮ ರಾಜ್​​ಕುಮಾರ್, ಅಂಬರೀಶ್, ಪುನೀತ್ ರಾಜ್​​ಕುಮಾರ್ ಸಮಾಧಿಗೆ ಮಾತ್ರ ಇದನ್ನು ಹಾಕಿದ್ದೆ. ಪುನೀತ್ ನಿಧನರಾದಾಗಲೂ ಒಂದು ಸಣ್ಣ ಹಾರ ಮಾಡಿಕೊಂಡು ಬಂದಿದ್ದೆ. ಆದರೆ ಕಂಠೀರವ ಸ್ಟುಡಿಯೋ ಒಳಗೆ ಬಿಟ್ಟಿರಲಿಲ್ಲ. ಹಳೇ ಫೋಟೋ ಎಲ್ಲಾ ತೋರಿಸಿದಾಗ ಬಿಟ್ಟಿದ್ದರು’’ ಎಂದಿದ್ದಾರೆ ಸುಮಿತ್ರಾ ಬಾಯಿ.

    ಪ್ರಸ್ತುತ ಪುನೀತ್ ಸಮಾಧಿಗೆ ಹಾಕಲು ಹಾರ ತಂದಿರುವ ಅವರು, ಶಿವರಾಜ್ ಕುಮಾರ್ ಬಂದ ಮೇಲೆ ಹಾರ ಹಾಕಿ ಹೋಗುತ್ತೇನೆ. ಈ ಹಾರವನ್ನು ಮಾರಾಟ ಮಾಡೋದಿಲ್ಲ; ಕೇವಲ ಅಭಿಮಾನದಿಂದ ಮಾಡಿ ತರುತ್ತೇನೆ ಎಂದಿದ್ದಾರೆ.

  • 17 Mar 2022 10:11 AM (IST)

    ಪುನೀತ್​ರನ್ನು ಸ್ಮರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಪುನೀತ್ ಜನ್ಮದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಬೆಳೆದ, ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದ ಕರ್ನಾಟಕ ರತ್ನ, ಡಾ.ಪುನೀತ್ ರಾಜ್‌ಕುಮಾರ್‌ಗೆ ಪ್ರೀತಿಪೂರ್ವಕ ನಮನ ಎಂದು ಅವರು ಬರೆದಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಪುನೀತ್ ಮಾಡಿರುವ ಸಾಧನೆ, ಪುನೀತ್ ಜನಪ್ರಿಯತೆ, ಜನಸೇವೆ ಬಣ್ಣಿಸಲು ಪದಗಳೇ ಸಾಲದು ಎಂದು ಬೊಮ್ಮಾಯಿ ನುಡಿದಿದ್ದಾರೆ.

  • 17 Mar 2022 10:05 AM (IST)

    ಕನ್ನಡಿಗರ ಪಾಲಿಗೆ ಸ್ಫೂರ್ತಿಯ ಚಿಲುಮೆ ಪುನೀತ್: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ

    ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ‘ನಟ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಆಸ್ತಿ. ಮರೆಯಲಾಗದ ಆ ತಾರೆಗೆ ನನ್ನ ಭಾವಪೂರ್ಣ ನಮನ’ ಎಂದು ಬರೆದಿರುವ ಅವರು, ‘ಕನ್ನಡಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿದ್ದರು. ನಮ್ಮ ಪಾಲಿಗೆ ಪುನೀತ್ ಸದಾ ಅಮರ’ ಎಂದು ಹೇಳಿದ್ದಾರೆ.

  • 17 Mar 2022 09:57 AM (IST)

    ‘ಜೇಮ್ಸ್’ ವೀಕ್ಷಣೆ ಬಳಿಕ ಕಣ್ಣೀರಾದ ನಾಯಕಿ ಪ್ರಿಯಾ ಆನಂದ್

    ಜೇಮ್ಸ್ ವೀಕ್ಷಣೆ ಬಳಿಕ ನಟಿ ಪ್ರಿಯಾ ಆನಂದ್ ಕಣ್ಣೀರಾಗಿದ್ದಾರೆ. ನವರಂಗ್ ಥಿಯೇಟರ್​ನಲ್ಲಿ ಸಿನಿಮಾ ನೋಡಿ ಭಾವುಕರಾದ ಅವರು, ಕಾರಿನಲ್ಲಿ ಬಂದು ಕುಳಿತು ಕಣ್ಣೀರಿಟ್ಟಿದ್ದಾರೆ.

  • 17 Mar 2022 09:54 AM (IST)

    ಜೇಮ್ಸ್ ಸಿನಿಮಾ ವೀಕ್ಷಣೆ ಬಳಿಕ ರಾಘಣ್ಣ ಹೇಳಿದ್ದೇನು?

    ‘ಜೇಮ್ಸ್ ನನಗೆ ಸಿನಿಮಾ ಅಲ್ಲ, ಎಮೋಷನ್’ ಎಂದು ನಟ ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ. ಚಿತ್ರದ ವೀಕ್ಷಣೆ ನಂತರ ಅವರು ಮಾತನಾಡಿದರು. ‘‘ತಮ್ಮನ ಬಗ್ಗೆ ಹೊಗಳಬಾರದೆಂದು ನಮ್ಮ ತಂದೆ ಹೇಳಿದ್ದಾರೆ. ನನ್ನ ತಮ್ಮ ಏನೇ ಮಾಡಿದರೂ ಅದು ನನಗೆ ಇಷ್ಟವಾಗುತ್ತದೆ. ನಮಗೆ ನಟ ಪುನೀತ್ ಉಡುಗೊರೆ ಕೊಟ್ಟು ಹೋಗಿದ್ದಾನೆ. ಪುನೀತ್ ಸಿನಿಮಾಗಳು ಮತ್ತೆ ರೀ ರಿಲೀಸ್ ಆಗುತ್ತದೆ ಎಂದು ರಾಘಣ್ಣ ಹೇಳಿದ್ದಾರೆ.

  • 17 Mar 2022 09:51 AM (IST)

    ಜೇಮ್ಸ್ ಸಿನಿಮಾ ವೀಕ್ಷಣೆಗೆ ಬಂದ ಮೊಹಮ್ಮದ್ ನಲಪಾಡ್

    ಬೆಂಗಳೂರಿನ ಮಾಲ್‌ವೊಂದರಲ್ಲಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಗಮಿಸಿದ್ದಾರೆ. ವೀಕ್ಷಣೆಗೂ ಮುನ್ನ ಮಾತನಾಡಿದ ಅವರು, ಅಪ್ಪು ಇಲ್ಲದಿರುವುದು ಕರ್ನಾಟಕಕ್ಕೆ ದೊಡ್ಡ ನಷ್ಟ.ನಾನು ಅಪ್ಪು ಅಭಿಮಾನಿಯಾಗಿ ಸಿನಿಮಾ ವೀಕ್ಷಣೆಗೆ ಬಂದಿದ್ದೇನೆ ಎಂದಿದ್ದಾರೆ.

  • 17 Mar 2022 09:41 AM (IST)

    ಅಭಿಮಾನಿಗಳಿಂದ ಹಾವೇರಿ, ಚಿತ್ರದುರ್ಗದಲ್ಲಿ ಉಚಿತ ಉಪಹಾರ ವಿತರಣೆ

    ಪುನೀತ್ ರಾಜಕುಮಾರ ಬರ್ತ್ ಡೇ ಹಿನ್ನೆಲೆಯಲ್ಲಿ ಹಾವೇರಿ ನಗರದ ಪುನೀತ್ ಅಭಿಮಾನಿಯೋರ್ವರು ಉಚಿತ ಉಪಹಾರ ವಿತರಣೆ ನಡೆಸಿದ್ದಾರೆ. ಉಳವಿ ಚನ್ನಬಸವೇಶ್ವರ ಟಿಫಿನ್ ಸೆಂಟರ್ ನಡೆಸುತ್ತಿರುವ ಪುನೀತ್ ಅಭಿಮಾನಿ ಮಣಿಕಂಠ, ಐವತ್ತು ಕೆ.ಜಿ ಪಲಾವ್ ತಯಾರಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಟಿಫಿನ್ ಸೆಂಟರ್‌ ಮುಂದೆ ಪುನೀತ್ ರಾಜಕುಮಾರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ನಂತರ ಅವರು ಉಪಹಾರ ವಿತರಿಸಿದ್ದಾರೆ. ಪುನೀತ್ ಭಾವಚಿತ್ರಕ್ಕೆ ಕೈ ಮುಗಿದು ನಮಿಸಿ, ಜನರು ಉಪಹಾರ ಸೇವಿಸಿದ್ದಾರೆ.

    ಚಿತ್ರದುರ್ಗದ ಅಪ್ಪು ಅಭಿಮಾನಿಗಳಿಗೆ ಬಸವೇಶ್ವರ ಟಾಕೀಸ್ ಬಳಿ ಪಲಾವ್ ವಿತರಣೆ ಮಾಡಲಾಗಿದೆ. ಅಪ್ಪು ಅಭಿಮಾನಿಗಳ ಸಂಘದಿಂದ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ಸಂಘದ ಅಧ್ಯಕ್ಷ ಮೋಹನ್ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಡೀ ದಿನ ಉಪಹಾರ, ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಉಪಹಾರಕ್ಕೆ ಪಲಾವ್, ಮಧ್ಯಾಹ್ನ ಬಿರಿಯಾನಿ ವಿತರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

  • 17 Mar 2022 09:37 AM (IST)

    ಚಾಮರಾಜನಗರ: 1001 ಈಡುಗಾಯಿ ಒಡೆದು ‘ಜೇಮ್ಸ್’ಗೆ ಸ್ವಾಗತ

    ಚಾಮರಾಜನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಜೇಮ್ಸ್ ಸಿನಿಮಾಗೆ 1001 ಈಡುಗಾಯಿ ಒಡೆದು ಅದ್ಧೂರಿ ಸ್ವಾಗತ ಮಾಡಲಾಗಿದೆ. ಸಿನಿಮಾ ವೀಕ್ಷಿಸಿ ಹೊರಬಂದ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ ವಿತರಣೆ ಮಾಡಲಾಗಿದೆ.

  • 17 Mar 2022 09:25 AM (IST)

    ‘ಜೇಮ್ಸ್’ ಬಗ್ಗೆ ಮಾತನಾಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ

    ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ‘‘ಅಪ್ಪು ಇಂದು ಇರಬೇಕಿತ್ತು. ಥಿಯೇಟರ್ ಹೊರಗೆ ಬಂದರೆ ನೋವಾಗುತ್ತದೆ. ಅವರ ಮನೆಗೆ ಬಂದು ಆಶೀರ್ವಾದ ಪಡೆದಿದ್ದೇವೆ. ಜೇಮ್ಸ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ’’ ಎಂದಿದ್ದಾರೆ.

  • 17 Mar 2022 09:12 AM (IST)

    1 ಲಕ್ಷಕ್ಕೂ ಹೆಚ್ಚು ಉಪಹಾರದ ವ್ಯವಸ್ಥೆ ಮಾಡಿದ ಅಭಿಮಾನಿ 

    ಕರ್ನಾಟಕ ರತ್ನ, ನಟ ಪುನೀತ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಆಗಮಿಸಿದ್ದಾರೆ. ಲಕ್ಷ್ಮಿ ನಾರಾಯಣ ಎಂಬ ಡಾ.ರಾಜ್ ಕುಮಾರ್ ಅಭಿಮಾನಿಯೋರ್ವರು 1 ಲಕ್ಷಕ್ಕೂ ಹೆಚ್ಚು ಜನರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.

  • 17 Mar 2022 08:58 AM (IST)

    ಮೌಂಟ್​​ ಎವರೆಸ್ಟ್​​ನಲ್ಲಿ ಅಪ್ಪು ಜನ್ಮದಿನ ಆಚರಣೆ

    ಮೌಂಟ್ ಎವರೆಸ್ಟ್ನಲ್ಲಿ ಅಪ್ಪು ಹುಟ್ಟಹಬ್ಬವನ್ನು ಆಚರಿಸಲಾಗಿದೆ. ಅಪ್ಪುಅಭಿಮಾನಿಗಳಿಂದ ಕೇಕ್ ಕತ್ತರಿಸಿ ಮೌಂಟ್ ಎವರೆಸ್ಟನಲ್ಲಿ ನಿಂತು ಬೆಂಗಳೂರಿನ ಫ್ಯಾನ್ಸ್ ಶುಭಾಶಯ ಹೇಳಿದ್ದಾರೆ.

  • 17 Mar 2022 08:46 AM (IST)

    ‘ಜೇಮ್ಸ್’ ಪ್ರದರ್ಶನಕ್ಕೂ ಮುನ್ನ ಅಪ್ಪು ರಿಲೀಸ್ ಮಾಡಬೇಕಿದ್ದ ಸಂಚಾರಿ ವಿಜಯ್​ರ ‘ತಲೆದಂಡ’ ಟ್ರೇಲರ್ ರಿಲೀಸ್

    ಜೇಮ್ಸ್ ಚಿತ್ರ ಪ್ರದರ್ಶನಕ್ಕೂ ಮುನ್ನ ಮೈಸೂರಿನ ಜಯಲಕ್ಷ್ಮಿಪುರಂನ ಡಿಆರ್‌ಸಿ ಮಲ್ಟಿಫ್ಲೆಕ್ಸ್‌ನಲ್ಲಿ ತಲೆದಂಡ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ದಿವಂಗತ ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಟ್ರೇಲರ್​ಅನ್ನು ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಬೇಕಿತ್ತು. ಪರಿಸರ ಕಥೆಯುಳ್ಳ ತಲೆದಂಡ ಸಿನಿಮಾದ ಟ್ರೇಲರ್​ಅನ್ನು ಅಪ್ಪು ಇಲ್ಲದ ಕಾರಣ ಅಭಿಮಾನಿಗಳಿಂದಲೇ ಬಿಡುಗಡೆ ಮಾಡಿಸಲಾಗಿದೆ. ಅಪ್ಪು ಅಭಿಮಾನಿಗಳನ್ನೇ ದೇವರು ಅಂದುಕೊಂಡಿದ್ದರು. ಅದಕ್ಕಾಗಿ ಅವರಿಂದಲೇ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

  • 17 Mar 2022 08:36 AM (IST)

    ಅಪ್ಪು ಇಲ್ಲದ ನೋವು ಕಾಡುತ್ತಿದೆ; ನಿರ್ದೇಶಕ ಚೇತನ್

    ತೆರೆಯ ಮೇಲೆ ಪುನೀತ್‌ರನ್ನು ಕಂಡು ಖುಷಿಯಾಗಿದ್ದಾರೆ ಎಂದು ‘ಜೇಮ್ಸ್’ ನಿರ್ದೇಶಕ ಚೇತನ್ ಹೇಳಿದ್ದಾರೆ. ಅಪ್ಪು ಆಶೀರ್ವಾದ ಪಡೆಯಲು ಚಿತ್ರತಂಡ ಆಗಮಿಸಿತ್ತು. ನಂತರ ಮಾತನಾಡಿದ ಅವರು, ‘‘ಎಲ್ಲಾ ಕಡೆ ತುಂಬಾ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಅಭಿಮಾನಿಗಳು ಅಪ್ಪು ತೆರೆ ಮೇಲೆ ನೋಡಿ ಖುಷಿಯಾಗಿದ್ದಾರೆ. ಆದರೂ ಸಿನಿಮಾ ಥಿಯೇಟರಿಂದ ಹೊರಗೆ ಬಂದರೆ ನೋವು ಕಾಡುತ್ತದೆ. ಅಶ್ವಿನಿಯವರು ಕೂಡ ಸಿನಿಮಾ ರಿಲೀಸ್​ಗೆ ಶುಭಾಶಯ ಕೋರಿದ್ದಾರೆ. ಇಂದು ಅಪ್ಪು ವಾಸವಿದ್ದ ಮನೆಗೆ ಬಂದು ಅವರ ಆಶೀರ್ವಾದ ಪಡೆದಿದ್ದೇವೆ. ಇಲ್ಲಿಂದ ಪ್ರತಿ ಥಿಯೇಟರ್ ವಿಸಿಟ್ ಮಾಡುವ ಮೂಲಕ ಚಿತ್ರದ ಪ್ರಚಾರ ಶುರುಮಾಡುತ್ತೇವೆ. ಅಪ್ಪು ಇಲ್ಲದ ನೋವು ಕಾಡುತ್ತಿದೆ’’ ಎಂದಿದ್ದಾರೆ ಚೇತನ್.

  • 17 Mar 2022 08:22 AM (IST)

    ‘ಅಪ್ಪು ನಮ್ಮ ಜತೆ ಇಲ್ಲವೆಂದು ಹೇಗೆ ಹೇಳಲಿ?’; ರಾಘಣ್ಣ ಮಾತು 

    ‘ಅಪ್ಪು ನಮ್ಮ ಜತೆ ಇಲ್ಲವೆಂದು ನಾನು ಹೇಗೆ ಹೇಳಲಿ? ಎಲ್ಲಾ ಅಭಿಮಾನಿಗಳಲ್ಲಿ ನಾನು ಅಪ್ಪುವನ್ನು ಕಾಣುತ್ತಿದ್ದೇನೆ’ ಎಂದು ನಟ ರಾಘವೇಂದ್ರ ರಾಜ್​ಕುಮಾರ್ ನುಡಿದಿದ್ದಾರೆ. ‘‘ನನ್ನ ತಮ್ಮನ ನಿಮ್ಮಲ್ಲೇ ನೋಡುತ್ತೇನೆ. ಇನ್ಮುಂದೆ ಅಭಿಮಾನಿಗಳಲ್ಲಿ ಅಪ್ಪು ಕಾಣಿಸುತ್ತಾರೆ. ಜೇಮ್ಸ್ ಚಿತ್ರದಲ್ಲೂ ಅಪ್ಪು ಜೀವಂತನೇ. ಇದು ಅಭಿಮಾನಿಗಳ ಅಪ್ಪು ಹಬ್ಬ’’ ಎಂದು ಭಾವುಕರಾಗಿ ಹೇಳಿದ್ದಾರೆ ರಾಘಣ್ಣ.

  • 17 Mar 2022 08:22 AM (IST)

    ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಅಭಿಮಾನಿಗಳು; ಕಂಠೀರವ ಸ್ಟುಡಿಯೋಗೆ ಬಿಗಿ ಭದ್ರತೆ

    ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ಹೀಗಾಗಿ ಕಂಠೀರವ ಸ್ಟುಡಿಯೋದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

  • 17 Mar 2022 08:17 AM (IST)

    ಇಂದು ಮೈಸೂರಿನಲ್ಲಿ ‘ಜೇಮ್ಸ್’ ವೀಕ್ಷಿಸಲಿರುವ ಶಿವಣ್ಣ

    ಸಹೋದರ ಪುನೀತ್ ನಾಯಕನಾಗಿ ಕಾಣಿಸಿಕೊಂಡಿರುವ ಕೊನೆಯ ಸಿನಿಮಾ ‘ಜೇಮ್ಸ್’ಅನ್ನು ಶಿವರಾಜ್​ಕುಮಾರ್ ಇಂದು ವೀಕ್ಷಿಸಲಿದ್ದಾರೆ. ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ಸ್ನೇಹಿತರ ಜತೆ ಇಂದು ಸಂಜೆ 4 ಗಂಟೆಗೆ ಶಿವಣ್ಣ ಚಿತ್ರ ವೀಕ್ಷಿಸಲಿದ್ದಾರೆ.

  • 17 Mar 2022 08:15 AM (IST)

    ‘ಜೇಮ್ಸ್’ ನೋಡಿದ ಅಭಿಮಾನಿಗಳು ಭಾವುಕ; ಚಿತ್ರಮಂದಿರಗಳಲ್ಲಿ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಫ್ಯಾನ್ಸ್

    ಕರ್ನಾಟಕ ರತ್ನ ಪುನೀತ್ ಅಭಿನಯದ ‘ಜೇಮ್ಸ್’ ವಿಶ್ವದಾದ್ಯಂತ 4 ಸಾವಿರ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಿದೆ. ‘ಜೇಮ್ಸ್’ ನೋಡಿ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಜೇಮ್ಸ್ ರಿಲೀಸ್ ಆದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದ್ದು, ರಾಜ್ಯದ ಕೆಲ ಚಿತ್ರಮಂದಿರಗಳ ಬಳಿ ಅನ್ನದಾನ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಗದಗದಲ್ಲಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ಬಂದವರಿಗೆ ಸಸಿ ವಿತರಣೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಗಿದೆ.

  • 17 Mar 2022 08:11 AM (IST)

    ಗದಗ: ನಿವೃತ್ತ ಸೈನಿಕರಿಗೆ ಸನ್ಮಾನ, ನೂರಾರು ಸಸಿ ವಿತರಣೆ ಮಾಡಲಿರುವ ಅಭಿಮಾನಿಗಳು

    ಗದಗ: ಜಿಲ್ಲೆಯಲ್ಲೂ ‘ಜೇಮ್ಸ್’ ರಿಲೀಸ್ ಸಂಭ್ರಮ ಜೋರಾಗಿದ್ದು, ವೆಂಕಟೇಶ ಚಿತ್ರಮಂದಿರದಲ್ಲಿ ಬೃಹತ್ ಅಪ್ಪು ಕಟೌಟ್ ಅಳವಡಿಸಲಾಗಿದೆ.  ಇಂದು ಬೆಳಗ್ಗೆ 8.30 ಕ್ಕೆ ಜೇಮ್ಸ್ ಚಿತ್ರದ ಮೊದಲ ಶೋ ಆರಂಭವಾಗಲಿದ್ದು, ನೂರಾರು ಸಸಿಗಳ ವಿತರಣೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

  • 17 Mar 2022 08:09 AM (IST)

    ಪುನೀತ್ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು; ಎ17 ಸೀಟ್ ಬುಕ್

    ಬೆಂಗಳೂರಿನ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಪುನೀತ್ ಹೆಸರಿನಲ್ಲಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿದ್ದಾರೆ. ಬೆಳಗಾವಿಯ ಚಿತ್ರಾ ಚಿತ್ರಮಂದಿರದಲ್ಲೂ A17 ಸೀಟ್ ಬುಕ್ ಮಾಡಿ, ಸೀಟ್‌ನಲ್ಲಿ ಅಪ್ಪು ಭಾವಚಿತ್ರವಿಟ್ಟು ಫ್ಯಾನ್ಸ್ ಸಿನಿಮಾ ವೀಕ್ಷಿಸಿದ್ದಾರೆ.

  • 17 Mar 2022 08:01 AM (IST)

    ಜೇಮ್ಸ್ ಸಿನಿಮಾ ವೀಕ್ಷಿಸಿದ ಅಭಿಮಾನಿಗೆ 2 ಗ್ರಾಂ ಚಿನ್ನ

    ಬೆಂಗಳೂರಿನಲ್ಲಿ ಲಕ್ಕಿ ಡಿಪ್ ಮೂಲಕ ‘ಜೇಮ್ಸ್’ ವೀಕ್ಷಿಸಿದ ಅಭಿಮಾನಿಗೆ ಚಿನ್ನದ ನಾಣ್ಯ ವಿತರಣೆ ಮಾಡಲಾಗಿದೆ. ಗೆದ್ದ ಅಭಿಮಾನಿಗೆ 2 ಗ್ರಾಂ ಚಿನ್ನದ ನಾಣ್ಯವನ್ನು ಸಚಿವ ಕೆ.ಗೋಪಾಲಯ್ಯ ಬೆಂಗಳೂರಿನ ವೀರಭದ್ರೇಶ್ವರ ಚಿತ್ರಮಂದಿರದ ಬಳಿ  ವಿತರಿಸಿದ್ದಾರೆ.

  • 17 Mar 2022 07:59 AM (IST)

    ವಿಶ್ವದ 4,000 ಚಿತ್ರಮಂದಿರಗಳಲ್ಲಿ, ಕರ್ನಾಟಕದ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ರಿಲೀಸ್

    ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ರಿಲೀಸ್ ಆಗಿದೆ. ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಆಂಧ್ರಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಲ್ಲಿ ಈಗಾಗಲೇ ಹಲವೆಡೆ ‘ಜೇಮ್ಸ್’ ಪ್ರದರ್ಶನ ಆರಂಭವಾಗಿದೆ.

  • 17 Mar 2022 07:56 AM (IST)

    ಬಾಗಲಕೋಟೆಯಲ್ಲಿ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರ; ನಿವೃತ್ತ ಯೋಧರಿಗೆ ಸನ್ಮಾನ

    ಬಾಗಲಕೋಟೆ: ಇಂದು ಪುನಿತ್ ಅವರ ‘ಜೇಮ್ಸ್’ ಬಿಡುಗಡೆ ಹಾಗೂ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬಾಗಲಕೋಟೆ ಪುನೀತ್ ಅಭಿಮಾನಿಗಳಿಂದ ನಗರದ ಶಕ್ತಿ ಚಿತ್ರಮಂದಿರ ಹಾಗೂ ಚಂದನ ಚಿತ್ರಮಂದಿರದಲ್ಲಿ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಥಿಯೇಟರ್ ಮುಂದೆ ಅಪ್ಪು ಬೃಹತ್ ಕಟೌಟ್ ಅಳವಡಿಸಲಾಗಿದ್ದು, ಎಂಟು ಗಂಟೆ ಬಳಿಕ ಶಕ್ತಿ ಚಿತ್ರಮಂದಿರದ ಮುಂದೆ ಕಟೌಟ್​ಗೆ ಪೂಜೆ ನಡೆಯಲಿದೆ. ಪ್ರತಿ ಪ್ರದರ್ಶನದಲ್ಲೂ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದ್ದು, ಪುನೀತ್ ಅಭಿಮಾನಿಗಳಿಂದ ರಕ್ತದಾನ ,ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ಶಕ್ತಿ ಚಿತ್ರಮಂದಿರದ ಮುಂದೆ ಐದು ಜನ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಗುತ್ತದೆ. ಬಾಗಲಕೋಟೆ ಜಿಲ್ಲೆಯಾದ್ಯಂತ 20 ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ರಿಲೀಸ್ ಆಗಿದೆ.

  • 17 Mar 2022 07:49 AM (IST)

    ಕಂಠೀರವ ಸ್ಟುಡಿಯೋದಲ್ಲಿ ಇಂದು ಅಭಿಮಾನಿಗಳಿಗೆ ಕೆಎಂಎಫ್​ನಿಂದ ಉಚಿತ ಮಜ್ಜಿಗೆ ವಿತರಣೆ

    ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಎಂಎಫ್‌ನಿಂದ ಇಂದು ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ. ಕರ್ನಾಟಕ ರತ್ನ, ನಟ ಡಾ.ಪುನೀತ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋಗೆ ಫ್ಯಾನ್ಸ್ ಆಗಮಿಸಿದ್ದಾರೆ. ಡಾ.ಪುನೀತ್ ನಂದಿನಿ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

  • 17 Mar 2022 07:48 AM (IST)

    ಅಭಿಮಾನಿಗಳೊಂದಿಗೆ ‘ಜೇಮ್ಸ್’ ನೋಡಿದ ರಾಘಣ್ಣ, ಅಪ್ಪು ಪುತ್ರಿ ವಂದಿತಾ

    ಅಪ್ಪು ಅಭಿನಯದ ಕೊನೇ ಸಿನಿಮಾ ‘ಜೇಮ್ಸ್‌’ ರಿಲೀಸ್ ಆಗಿದ್ದು, ಅಭಿಮಾನಿಗಳ ಜೊತೆ ರಾಘಣ್ಣ ಸಿನಿಮಾ ವೀಕ್ಷಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ ಅವರಿಗೆ ಪತ್ನಿ ಮಂಗಳ, ಪುತ್ರರಾದ ವಿನಯ್, ಯುವ ಮೊದಲಾದವರು ಸಾಥ್ ನೀಡಿದ್ದಾರೆ. ಅಪ್ಪು ಪುತ್ರಿ ವಂದಿತಾ ಕೂಡ ಚಿತ್ರ ವೀಕ್ಷಿಸಿದ್ದಾರೆ. 10 ಗಂಟೆಯ ನಂತರ ಅಶ್ವಿನಿ ಕಂಠೀರವ ಸ್ಟುಡಿಯೋಗೆ ತೆರಳುವ ಸಾಧ್ಯತೆ ಇದೆ.

  • 17 Mar 2022 07:44 AM (IST)

    ವೀರೇಶ್ ಚಿತ್ರಮಂದಿರದಲ್ಲಿ ಅಪ್ಪುಗೆ ದೇವಸ್ಥಾನ ಮಾದರಿಯ ಸೆಟ್ ನಿರ್ಮಾಣ ಮಾಡಿ, 30 ಕಟೌಟ್ ಹಾಕಿದ ಅಭಿಮಾನಿಗಳು

    ಬೆಂಗಳೂರಿನ ವೀರೇಶ್ ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಸೆಲೆಬ್ರೇಷನ್ ಜೋರಾಗಿದೆ. ಅಪ್ಪು ನಟನೆಯ 30 ಸಿನಿಮಾಗಳ ಕಟೌಟ್ ಹಾಕಿ ಸಂಭ್ರಮಾಚರಣೆ ನಡೆಸಲಾಗಿದ್ದು, ಅವುಗಳಿಗೆ ಕ್ರೇನ್ ಸಹಾಯದಿಂದ ಹೂವಿನ‌ ಹಾರ ಹಾಕಿ ಸಿಂಗಾರ ಮಾಡಲಾಗಿದೆ. ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ, ಜೈಕಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಥಿಯೇಟರ್ ಅಂಗಳದಲ್ಲಿ ದೇವಸ್ಥಾನ ‌ಮಾದರಿಯ ಸೆಟ್ ಹಾಕಿ ಅಪ್ಪು ಭಾವಚಿತ್ರ ಹಾಕಲಾಗಿದೆ. ವೀರೇಶ್ ಥಿಯೇಟರ್​ನಲ್ಲಿ ಇವತ್ತಿನ 6 ಶೋಗಳು ಹೌಸ್ ಫುಲ್ ಆಗಿವೆ.

  • 17 Mar 2022 07:41 AM (IST)

    ಕೊಪ್ಪಳ: ಟಿಕೆಟ್ ಸಿಗದಿದ್ದಕ್ಕೆ ಅಭಿಮಾನಿಗಳಿಂದ ಚಿತ್ರಮಂದಿರಕ್ಕೆ ಕಲ್ಲುತೂರಾಟ

    ಕೊಪ್ಪಳ: ‘ಜೇಮ್ಸ್’ ಚಿತ್ರಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ ಟಿಕೆಟ್ ಸಿಗದ ಅಭಿಮಾನಿಗಳು ಟಿಕೆಟ್ ಸಿಗದಿದ್ದಕ್ಕೆ ಟಾಕೀಸ್​ಗೆ ಕಲ್ಲು ತೂರಾಟ ನಡೆಸಿದ್ದಾರೆ. ಚಿತ್ರಮಂದಿರದ ಹಿಂಭಾಗದ ಕಿಟಕಿಗಳು ಪುಡಿಯಾಗಿವೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ‌ಪಟ್ಟಿದ್ದಾರೆ.

  • 17 Mar 2022 07:35 AM (IST)

    ಚಿಕ್ಕಬಳ್ಳಾಪುರ: ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ಅನ್ನದಾನ, ರಕ್ತದಾನ, ನೇತ್ರದಾನ ಶಿಬಿರ ಆಯೋಜನೆ

    ಚಿಕ್ಕಬಳ್ಳಾಫುರ: ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದ ವಾಣಿ ಚಲನಚಿತ್ರ ಮಂದಿರಲ್ಲಿ ಅನ್ನದಾನ, ನೇತ್ರದಾನ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲದವರೆಗೂ ನಿರಂತರ ಅನ್ನಸಂತರ್ಪಣೆ ನಡೆಯಲಿದೆ.

  • 17 Mar 2022 07:25 AM (IST)

    ರಾಜ್ಯಾದ್ಯಂತ ಮುಗಿಲುಮುಟ್ಟಿದ ಅಭಿಮಾನಿಗಳ ಹರ್ಷೋದ್ಗಾರ

    ರಾಜ್ಯಾದ್ಯಂತ ಅಪ್ಪು ಅಭಿನಯದ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಮಹಿಳಾ ಅಭಿಮಾನಿಗಳು ಪುಟ್ಟ ಮಕ್ಕಳ ಜತೆ ಸಿನಿಮಾ ವೀಕ್ಷಣೆಗೆ ಬಂದಿದ್ದಾರೆ. ಹಲವರು ಪುನೀತ್ ನೆನೆದು ಭಾವುಕರಾಗಿದ್ದಾರೆ. ರಾಜ್ಯದ ಹಲವು ಚಿತ್ರಮಂದಿರಗಳ ಬಳಿ ಅನ್ನದಾನ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ತುಮಕೂರು, ಬಳ್ಳಾರಿ, ಕೊಪ್ಪಳದಲ್ಲಿ ಜೇಮ್ಸ್‌ಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ಜೇಮ್ಸ್‌ಗೆ ಅದ್ದೂರಿಯಾಗಿ ವೆಲ್​ಕಂ ಮಾಡಲಾಗಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಟೆಕೆಟ್ ಸೋಲ್ಡ್‌ಔಟ್ ಆಗಿದೆ. ಚಾಮರಾಜನಗರ, ಮೈಸೂರು, ದಾವಣಗೆರೆ, ಕೋಲಾರ, ಕಲಬುರಗಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ‘ಜೇಮ್ಸ್’ ರಿಲೀಸ್ ಹಬ್ಬ ಭರ್ಜರಿಯಾಗಿದ್ದು, ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿದೆ.

  • 17 Mar 2022 07:18 AM (IST)

    ತುಮಕೂರಿನಲ್ಲಿ ಸಂಜೆವರೆಗೆ ಅನ್ನಸಂತರ್ಪಣೆಗೆ ಸಿದ್ಧತೆ, ರಕ್ತದಾನ ಶಿಬಿರ ಆಯೋಜನೆ

    ತುಮಕೂರು: ತುಮಕೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮೊದಲ ಶೋ ಆರಂಭವಾಗಿದ್ದು, ತುಮಕೂರು ನಗರದಲ್ಲಿ ಪುನೀತ್ ರಾಜ್‍ಕುಮಾರ್ ಫ್ಲೆಕ್ಸ್, ಬ್ಯಾನರ್​ಗಳು ತುಂಬಿವೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆವರೆಗೂ ಅನ್ನ ಸಂತರ್ಪಣೆ, ಜೊತೆಗೆ ಮಜ್ಜಿಗೆ ವಿತರಣೆ, ಹಲವೆಡೆ ರಕ್ತದಾನ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಅಭಿಮಾನಿಗಳು ನಡೆಸಲಿದ್ದಾರೆ.

  • 17 Mar 2022 07:05 AM (IST)

    ಜೇಮ್ಸ್​ ಸಿನಿಮಾ ವೀಕ್ಷಿಸಲಿರುವ ಯೂತ್ ಕಾಂಗ್ರೆಸ್ ಸದಸ್ಯರು

    ಯೂತ್​ ಕಾಂಗ್ರೆಸ್​​ ಸದಸ್ಯರು ಜೇಮ್ಸ್​ ಸಿನಿಮಾ ವೀಕ್ಷಿಸಲಿದ್ದಾರೆ. ಬೆಳಗ್ಗೆ 7.45ಕ್ಕೆ ಗರುಡಾ ಮಾಲ್​ನಲ್ಲಿ ಜೇಮ್ಸ್​​ ಸಿನಿಮಾ ವೀಕ್ಷಣೆಗೆ ಯುತ್​ ಕಾಂಗ್ರೆಸ್​​ ಸದಸ್ಯರಿಗೆ ವಿಶೇಷ ಪ್ರದರ್ಶನ ಏರ್ಪಾಡು ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್​​’ಗೆ ಕೌಂಟರ್ ಪ್ಲ್ಯಾನ್ ಮಾಡಿದ ಕಾಂಗ್ರೆಸ್, ಜೇಮ್ಸ್ ಚಿತ್ರ ಹಬ್ಬದ ರೀತಿಯಲ್ಲಿ ಆಚರಿಸಲಿದೆ. ಡಿಕೆಶಿ​​ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಹ್ವಾನವನ್ನು ನೀಡಿದ್ದಾರೆ.

  • 17 Mar 2022 07:01 AM (IST)

    ಕಂಠೀರವ ಸ್ಟುಡಿಯೋ ಬಳಿ ಅಪ್ಪು ಜನ್ಮದಿನ ಆಚರಿಸಿದ ರಾಘಣ್ಣ; ಅಭಿಮಾನಿಗಳು ಸಾಥ್

    ‘ದೊಡ್ಮನೆ ಹುಡುಗ’ ಪುನೀತ್ ರಾಜ್​ಕುಮಾರ್ 47ನೇ ಹುಟ್ಟುಹಬ್ಬವನ್ನು ಕಂಠೀರವ ಸ್ಟುಡಿಯೋ ಬಳಿ, ಅಭಿಮಾನಿಗಳೊಂದಿಗೆ ಕೇಕ್ ಕಟ್​ ಮಾಡುವ ಮೂಲಕ ರಾಘವೇಂದ್ರ ರಾಜ್​ಕುಮಾರ್ ಆಚರಿಸಿದರು. ಅಭಿಮಾನಿಗಳಿಗೆ ನಾಳೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Published On - 6:56 am, Thu, 17 March 22

Follow us on