‘ರಕ್ತ ಸಂಬಂಧಿಗಳು ಮಾತ್ರ ಅಮ್ಮನ ಫ್ಯಾಮಿಲಿ ಆಗಿರಲಿಲ್ಲ, ಅವರಿಗೆ ಚಿತ್ರರಂಗವೇ ಕುಟುಂಬ’; ಜಯಂತಿ ಬಗ್ಗೆ ಮಗನ ಮಾತು
‘ಅಮ್ಮ ಯಾವಾಗಲೂ ಜನರ ಜೊತೆ ಬೆರೆಯುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ಫ್ಯಾಮಿಲಿ ಎಂದರೆ ಅವರಿಗೆ ಕೇವಲ ರಕ್ತ ಸಂಬಂಧ ಮಾತ್ರ ಅಲ್ಲ’ ಎಂದು ಜಯಂತಿ ಪುತ್ರ ಕೃಷ್ಣ ಕುಮಾರ್ ಹೇಳಿದ್ದಾರೆ.
ಅಭಿನಯ ಶಾರದೆ ಜಯಂತಿ ನಿಧನದಿಂದ ಇಡೀ ಚಿತ್ರರಂಗಕ್ಕೆ ನೋವಾಗಿದೆ. ಸೋಮವಾರ (ಜು.26) ಮುಂಜಾನೆ ಅವರು ನಿದ್ರೆಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜಯಂತಿ ಕೊನೇ ದಿನಗಳು ಹೇಗಿದ್ದವು ಎಂಬ ಬಗ್ಗೆ ಅವರ ಪುತ್ರ ಕೃಷ್ಣಕುಮಾರ್ ಅವರು ಮಾತನಾಡಿದ್ದಾರೆ. ‘ಅಮ್ಮ ಅನಾರೋಗ್ಯಕ್ಕೆ ಒಳಗಾದಾಗ ಒಂದು ಯುದ್ಧದ ರೀತಿ ಇತ್ತು. ಆದರೆ ಎಲ್ಲರ ಹಾರೈಕೆಯಿಂದ ಗೆದ್ದು ಬಂದಿದ್ದರು. ಚೇತರಿಸಿಕೊಳ್ಳುವುದು ಕಷ್ಟ ಆಗಿತ್ತು. ಅಮ್ಮ ಫೈಟರ್ ಆಗಿದ್ದರು. ಇಷ್ಟು ವರ್ಷ ಫೈಟ್ ಮಾಡಿಕೊಂಡು ಬಂದಿದ್ದ ಅವರಿಗೆ ಈಗ ಸಾಕು ಎನಿಸಿರಬಹುದು’ ಎಂದು ಕೃಷ್ಣ ಕುಮಾರ್ ಹೇಳಿದ್ದಾರೆ.
‘ಅಮ್ಮ ಯಾವಾಗಲೂ ಜನರ ಜೊತೆ ಬೆರೆಯುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ಫ್ಯಾಮಿಲಿ ಎಂದರೆ ಅವರಿಗೆ ಕೇವಲ ರಕ್ತ ಸಂಬಂಧ ಮಾತ್ರ ಅಲ್ಲ. ಇಡೀ ಚಿತ್ರರಂಗವೇ ಅವರ ಕುಟುಂಬವಾಗಿತ್ತು. ಎಲ್ಲರ ಬಗ್ಗೆ ಪ್ರೀತಿ ಇತ್ತು. ಇತ್ತೀಚೆಗೆ ಪ್ರತಿದಿನ ಹಳೇ ಹಾಡುಗಳನ್ನು ಕೇಳುತ್ತಿದ್ದರು. ತಮ್ಮ ಚಿತ್ರರಂಗದ ಸ್ನೇಹಿತರ ಹಾಡುಗಳನ್ನು ನೋಡುತ್ತ ಕಾಲ ಕಳೆಯುತ್ತಿದ್ದರು. ಸರೋಜಾದೇವಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರುತಿ, ತಾರಾ, ಗಿರಿಜಾ ಲೋಕೇಶ್ ಮುಂತಾದವರು ತುಂಬ ಹತ್ತಿರದವರಾಗಿದ್ದರು. ಅವರ ಜೊತೆ ಆಗಾಗ ಫೋನ್ನಲ್ಲಿ ಮಾತನಾಡುತ್ತಿದ್ದರು’ ಎಂದು ತಾಯಿಯ ಕೊನೇ ದಿನಗಳ ಬಗ್ಗೆ ಕೃಷ್ಣ ಕುಮಾರ್ ಮಾತನಾಡಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನರೆವೇರಲಿದೆ. ಜಯಂತಿ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೇಣುಕಾಚಾರ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಜಯಂತಿ ನಿಧನಕ್ಕೆ ಚಂದನವನದ ಹಲವು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ‘ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ ಮಾಡಿ ಅತ್ಯುತ್ತಮ ನಟಿ ಅನ್ನೋದನ್ನು ಜಯಂತಿ ತೋರಿಸಿಕೊಟ್ಟಿದ್ರು. ಅವರ ಅಗಲಿಕೆಯಿಂದ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ ಆಗಿದೆ. ದೇವರು ಅವರ ಮಗನಿಗೆ ದುಃಖ ಭರಿಸುವ ಧೈರ್ಯ ಕೊಡಲಿ. ಅವರ ಅಗಲಿಕೆ ನನಗೆ ತುಂಬಾ ನೋವಾಗಿದೆ. ಭಗವಂತ ಕುಟುಂಬ ವರ್ಗಕ್ಕೆ ನೋವು ಸಹಿಸುವ ಶಕ್ತಿ ನೀಡಲಿ. ಸಮಸ್ತ ಅಭಿಮಾನಿಗಳು ಅವರ ಮಗನಿಗೆ ಹಾರೈಸಲಿ’ ಎಂದು ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.
ಇದನ್ನೂ ಓದಿ:
‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್ವುಡ್ ಶ್ರದ್ಧಾಂಜಲಿ
‘ಜಯಂತಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಮನೆಗೆ ವಾಪಸ್ಸು ಬರ್ತೀನಿ ಅಂದಿದ್ರು’; ನಟಿ ತಾರಾ