
ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ (MS Umesh) ಅವರು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟನಾಗಿ ಅವರು ಕಲಾಸೇವೆ ಮಾಡಿದ್ದರು. 1960ರಿಂದಲೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. 80ನೇ ವಯಸ್ಸಿನಲ್ಲಿ ಕೂಡ ಅವರು ಸಿನಿಮಾಗಳಲ್ಲಿ ಅಭಿನಯಿಸುತ್ತ ಕುಟುಂಬಕ್ಕೆ ಆಧಾರ ಆಗಿದ್ದರು. ಎಂ.ಎಸ್. ಉಮೇಶ್ ಅವರದ್ದು ಸ್ವಾಭಿಮಾನದ ಬದುಕು. ಅಲ್ಲದೇ, ಜೀವನದಲ್ಲಿ ಅವರು ತೃಪ್ತಿ ಕಂಡಿದ್ದರು. ಎಷ್ಟು ಇದೆಯೋ ಅಷ್ಟರಲ್ಲೇ ನೆಮ್ಮದಿಯ ಜೀವನ ಮಾಡುವುದು ಹೇಗೆ ಎಂಬುದನ್ನು ಅವರು ಅರಿತಿದ್ದರು. ಆ ಬಗ್ಗೆ ಒಂದಷ್ಟು ತಿಂಗಳ ಹಿಂದೆ ಅವರು ‘ಟಿವಿ9’ ಜೊತೆ ಮಾತನಾಡಿದ್ದರು.
‘ಸರ್ಕಾರವೇ ಸಹಾಯ ಮಾಡಲಿ ಅಂತ ನಿರೀಕ್ಷಿಸುವುದು ತಪ್ಪಾಗುತ್ತದೆ. ಯಾಕೆಂದರೆ, ಪ್ರತಿಯೊಬ್ಬರಿಗೂ ದುಡಿಯುವ ಚೈತನ್ಯ ಕೊಟ್ಟಿರುತ್ತಾರೆ. ನಾನು ಕೂಡ ಯಾರಿಂದಲೂ ಅಪೇಕ್ಷೆಪಡಲ್ಲ. ಯಾರಾದರೂ ಸುಮ್ಮನೆ ದುಡ್ಡುಕೊಟ್ಟರೆ ನಾನು ಪಡೆಯಲ್ಲ. ನಮ್ಮಿಂದ ಏನಾದರೂ ಕೆಲಸ ಆಗಬೇಕಾದರೆ ನಾನು ಮಾಡುತ್ತೇನೆ. ಯಾಕೆಂದರೆ, ಕಲಾವಿದರು ಯಾವಾಗಲೂ ಸ್ವಾಭಿಮಾನಿಗಳು. ಕೆಲಸ ಮಾಡಿ ದುಡ್ಡು ಕೇಳುತ್ತೇವೆ. ಕೆಲಸ ಮಾಡದೆಯೇ ಕೈ ಚಾಚಲ್ಲ’ ಎಂದಿದ್ದರು ಎಂ.ಎಸ್. ಉಮೇಶ್.
‘ನಾವು ಸರ್ಕಾರವನ್ನು ದೂಷಿಸುವುದು ತಪ್ಪು. ಕೋಟ್ಯಂತರ ಜನರ ಸಮಸ್ಯೆಯನ್ನು ಸರ್ಕಾರದವರು ಬಗೆಹರಿಸುತ್ತಾ ಇರುತ್ತಾರೆ. ನಮಗೆ ಯಾಕೆ ಸಹಾಯ ಮಾಡಿಲ್ಲ ಅಂತ ಕೇಳಿದರೆ ಅದು ತಮ್ಮ ತಪ್ಪಾಗುತ್ತದೆ. ರಂಗಭೂಮಿಯಲ್ಲಿ ನಾನು ಬಹಳ ವರ್ಷ ಕೆಲಸ ಮಾಡಿದ್ದರಿಂದ ನನಗೆ 2 ಸಾವಿರ ರೂಪಾಯಿ ಪೆನ್ಷನ್ ಬರುತ್ತದೆ. ನನಗೆ ಅಷ್ಟು ಸಾಕು. ಯಾವುದಾದರೂ ಸಿನಿಮಾದ ಅವಕಾಶ ಸಿಕ್ಕಿದರೆ ಸಾಕು’ ಎಂದು ಉಮೇಶ್ ಅವರು ಹೇಳಿದ್ದರು.
‘ಮನುಷ್ಯನಿಗೆ ತೃಪ್ತಿ ಇರಬೇಕು. ಭಗವಂತ ನಮಗೆ ತೃಪ್ತಿ ಕೊಟ್ಟಿದ್ದಾನೆ. ನಾವು ಇರುವುದೇ ಮೂರು ಜನ. ನನ್ನ ಮಗಳು, ಪತ್ನಿ ಮತ್ತು ನಾನು. ಎಲ್ಲರೂ ನಮಗೆ ಆಸರೆಯಾಗಿ ಇದ್ದಾರೆ. ನಾವು ಅದ್ದೂರಿಯಾಗಿ ವೈಭವದ ಜೀವನ ಮಾಡಿಲ್ಲ. ನನ್ನ ಬಳಿ ಕಾರು ಕೂಡ ಇಲ್ಲ. ಕಾರು ಇಟ್ಟುಕೊಂಡರೆ ಅಲ್ಲಿ ಹೋಗಬೇಕು, ಇಲ್ಲಿ ಹೋಗಬೇಕು ಎನಿಸುತ್ತದೆ. ನನಗೆ ಯಾವ ಆಸೆ ಕೂಡ ಇಲ್ಲ. ಭಗವಂತ ಈ ಮಟ್ಟಿಗೆ ಇಟ್ಟಿದ್ದಾನೆ. ಸಾಕು ನನಗೆ. ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನರು ಪ್ರೀತಿಸುತ್ತಾರೆ ಅದಕ್ಕಿಂತ ದೊಡ್ಡ ಆಸೆ ಯಾವುದೂ ಬೇಡ’ ಎಂದಿದ್ದರು ಉಮೇಶ್.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತ್ನಿಗಾಗಿ 80ನೇ ವಯಸ್ಸಲ್ಲೂ ದುಡಿಯುತ್ತಿದ್ದ ಉಮೇಶ್
ಇತ್ತೀಚೆಗೆ ಉಮೇಶ್ ಅವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿದಾಗ 4ನೇ ಹಂತದ ಕ್ಯಾನ್ಸರ್ ಇರುವುದು ಗೊತ್ತಾಯಿತು. ಚಿಕಿತ್ಸೆ ಕೊಡಿಸಲಾಯಿತಾದರೂ ಕೂಡ ಅವರು ಬದುಕಿ ಉಳಿಯಲಿಲ್ಲ. ಅವರ ಅಗಲಿಕೆಯಿಂದ ಕುಟುಂಬಕ್ಕೆ, ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಅವರನ್ನು ಕಳೆದುಕೊಂದು ಚಿತ್ರರಂಗಕ್ಕೆ ನಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.