ಚಿತ್ರರಂಗದಲ್ಲಿ ನಟಿ ಪ್ರೇಮಾ (Prema) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಪ್ರೇಮಾ ಅವರು ಅತ್ಯುತ್ತಮ ಅಭಿನೇತ್ರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗ ಅವರು ‘ವರಾಹಚಕ್ರಂ’ (Varaha Chakram) ಸಿನಿಮಾದಲ್ಲಿ ನಟಿಸಿದ್ದಾರೆ. ಅಚ್ಚರಿ ಏನೆಂದರೆ, ನಟನೆಯ ಜೊತೆಗೆ ಈ ಸಿನಿಮಾದ ಒಂದು ಹಾಡಿಗೆ ಪ್ರೇಮಾ ಅವರು ಧ್ವನಿ ನೀಡಿದ್ದಾರೆ! ಅವರ ಕಂಠದಲ್ಲಿ ಮೂಡಿಬಂದಿರುವುದು ದೇಶಭಕ್ತಿ ಗೀತೆ ಎಂಬುದು ಮತ್ತೊಂದು ವಿಶೇಷ. ಆ ಹಾಡಿನ ಮೂಲಕ ಪ್ರೇಮಾ ಅವರು ಗಾಯಕಿಯಾಗಿಯೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಹಾಡು ಬಿಡುಗಡೆ ಆಗಿದೆ.
ಪ್ರೇಮಾ ಅವರೊಳಗೆ ಓರ್ವ ಗಾಯಕಿಯೂ ಇರುವುದು ಬಹುತೇಕರಿಗೆ ತಿಳಿದಿರಲಿಲ್ಲ. ಅದನ್ನು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರು ಪತ್ತೆಹಚ್ಚಿದ್ದಾರೆ. ಪ್ರೇಮಾ ಅವರಿಂದ ದೇಶಭಕ್ತಿ ಗೀತೆಯನ್ನು ಹಾಡಿಸಿದ್ದಾರೆ. ‘ವರಾಹ ಚಕ್ರಂ’ ಸಿನಿಮಾದಲ್ಲಿ ಪ್ರೇಮಾ ಹಾಡಿರುವ ‘ಕಂದಾ ನಿಂದೇ ಹಿಂದುಸ್ತಾನಾ..’ ಎಂಬ ಈ ಹಾಡನ್ನು ಧಾರವಾಡ ಹಬ್ಬ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಹಾಡನ್ನು ಬಸವ ಸಮರ್ಥ ಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಫೆ.9ಕ್ಕೆ ಚಿತ್ರಮಂದಿರದಲ್ಲಿ ‘ಪ್ರಯಣಂ’; ಟ್ರೇಲರ್ ಮೂಲಕ ಝಲಕ್ ತೋರಿಸಿದ ಚಿತ್ರತಂಡ
ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರೇಮಾ ಕಾಣಿಸಿಕೊಂಡಿದ್ದಾರೆ. ವಾರಾಣಸಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಗೀತೆಯ ಇಡೀ ಸಿನಿಮಾ ಹೈಲೈಟ್ ಆಗಿರಲಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಸಾಯಿಕುಮಾರ್ ಅವರು ‘ವರಾಹಚಕ್ರಂ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯುವ ನಟ ಅರ್ಜುನ್ ದೇವ ಅವರು ಹೀರೋ ಆಗಿ ನಟಿಸಿದ್ದು, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಮುಂತಾದವರು ಇನ್ನುಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ಕುಮಾರ್ ಜಿ. ಅವರ ಛಾಯಾಗ್ರಹಣ ಮತ್ತು ಭಾರ್ಗವ ಅವರ ಸಂಕಲನ ಈ ಸಿನಿಮಾಗಿದೆ.
ಬೆಂಗಳೂರು, ಹಿರಿಯೂರು, ನೆಲ್ಲೂರು, ಭಟ್ಕಳ ಮುಂತಾದ ಕಡೆಗಳಲ್ಲಿ ‘ವರಾಹಚಕ್ರಂ’ ಶೂಟಿಂಗ್ ಮಾಡಲಾಗಿದೆ. ‘ಮನ್ವಂತರಿ ಮೂವೀ ಮೇಕರ್ಸ್’ ಮೂಲಕ ಸ್ನೇಹಿತರೆಲ್ಲ ಜೊತೆಗೂಡಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ. ರಾವ್, ಮಂಜುನಾಥ್ ಸಿ. ಗೌಡ, ಕೆ.ಎಸ್. ಜೈ ಸುರೇಶ್ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ಗೀತರಚನೆ, ಸಂಗೀತ ಸಂಯೋಜನೆ ಜೊತೆಗೆ ಒಂದು ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ