‘ಒಂದು ಸರಳ ಪ್ರೇಮಕಥೆ’ಗೆ ರಮ್ಯಾ ಬೆಂಬಲ, ಹಾಡೊಂದು ಬಿಡುಗಡೆ
Ondu Sarala Prema Kathe: ಸಿಂಪಲ್ ಸುನಿ ನಿರ್ದೇಶನ ಮಾಡಿ, ದೊಡ್ಮನೆಯ ಕುಡಿ ವಿನಯ್ ರಾಜ್ಕುಮಾರ್ ನಟಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಹಾಡನ್ನು ನಟಿ ರಮ್ಯಾ ಬಿಡುಗಡೆ ಮಾಡಿದ್ದಾರೆ.
ಸರಳ, ಸುಂದರ ಪ್ರೇಮಕತೆಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ (Simple Suni). ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’, ‘ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ’, ‘ಚಮಕ್’, ‘ಸಖತ್’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಸಿಂಪಲ್ ಸುನಿ, ಇದೀಗ ಮತ್ತೊಂದು ಪ್ರೇಮಕತೆಯೊಟ್ಟಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನಿಮಾದ ಬಿಡುಗಡೆಗೆ ಮುನ್ನ ಸಿನಿಮಾದ ಹಾಡು, ಕ್ಯಾರೆಕ್ಟರ್ ಟೀಸರ್ಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ಅಂತೆಯೇ ಇದೀಗ ಸಿಂಪಲ್ ಸುನಿ ತಮ್ಮ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
‘ಒಂದು ಸರಳ ಪ್ರೇಮಕಥೆ’ ಬಿಡುಗಡೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಫೆಬ್ರವರಿ 8ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಕ್ಯಾರೆಕ್ಟರ್ ಟೀಸರ್ ಈಗಾಗಲೇ ಬಿಡುಗಡೆ ಆಗಿ ನಿರೀಕ್ಷೆ ಹೆಚ್ಚಿಸಿದೆ. ಈಗ ಸಿನಿಮಾದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಮತ್ತೊಂದು ಮಧುರ ಹಾಡೊಂದು ಬಿಡುಗಡೆ ಆಗಕಿದೆ. ಸೂಫಿ ಶೈಲಿಯ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಈಗ ಬಿಡುಗಡೆ ಆಗಿರುವ ‘ಎಲ್ಲಾ ಮಾತನ್ನು’ ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆಯ ನಟ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ಮಲ್ಲಿಕಾ ಹಾಡಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಸಿಂಪಲ್ ಸುನಿ? ‘ಅವತಾರ ಪುರುಷ’ ನಿರ್ದೇಶಕ ಹೇಳಿದ್ದಿದು..
‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಆತಿಷಯ ಎಂಬ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ಜೋಡಿಯಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಮೈಸೂರು ರಮೇಶ್ ಹಣ ಹಾಕಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ. ಸಿನಿಮಾ ಫೆಬ್ರವರಿ 8ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ