ಕರಾವಳಿ ಕಥೆಯ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡು

ಚಯನ್ ಶೆಟ್ಟಿ ನಿರ್ದೇಶನದ ‘ಮ್ಯಾರೇಜ್ ಪಾರ್ಟಿ’ ಚಿತ್ರಕ್ಕೆ ನಟ ವಿನೀತ್ ಕುಮಾರ್ ಹೀರೋ ಆಗಿದ್ದಾರೆ. ಪ್ರಕಾಶ್ ತುಮಿನಾಡು, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಕುಂದಾಪುರದಲ್ಲಿ ‘ಮ್ಯಾರೇಜ್ ಪಾರ್ಟಿ’ ಸಿನಿಮಾಗೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಲಾಗಿದೆ.

ಕರಾವಳಿ ಕಥೆಯ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡು
Marriage Party Movie Cast

Updated on: Mar 16, 2026 | 4:31 PM

ಕರಾವಳಿ ಭಾಗದ ಕಥೆ ಹೊಂದಿರುವ ಸಿನಿಮಾಗಳಿಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಸಿನಿಮಾಗಳ ಸಾಲಿಗೆ ‘ಮ್ಯಾರೇಜ್ ಪಾರ್ಟಿ’ (Marriage Party) ಕೂಡ ಸೇರ್ಪಡೆ ಆಗಲಿದೆ. ಈ ಮೊದಲು ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ‘ಅಧಿಪತ್ರ’ ಸಿನಿಮಾದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದ ಚಯನ್ ಶೆಟ್ಟಿ ಅವರು ಈಗ ‘ಮ್ಯಾರೇಜ್ ಪಾರ್ಟಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿರಲಿದ್ದು, ಹಲವು ಹಾಸ್ಯ ಕಲಾವಿದರು ಅಭಿನಯಿಸುತ್ತಿದ್ದಾರೆ. ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು (Prakash Thuminad), ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ರಕ್ಷಿತಾ, ನಮಿತಾ ಕಿರಣ್, ರಘು ಪಾಂಡೇಶ್ವರ, ರಾಮ್‌ದಾಸ್, ಪುಷ್ಪರಾಜ್ ಬೋಳಾರ್ ಮುಂತಾದವರು ನಟಿಸುತ್ತಿದ್ದಾರೆ.

ನಿರ್ದೇಶಕ ಚಯನ್ ಶೆಟ್ಟಿ ಅವರ ಚೊಚ್ಚಲ ಸಿನಿಮಾ ‘ಅಧಿಪತ್ರ’ಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರು ‘ಮ್ಯಾರೇಜ್ ಪಾರ್ಟಿ’ ಮೂಲಕ ಸಂಪೂರ್ಣ ಮನರಂಜನೆಯ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ. ಯಾವುದೇ ಸದ್ದು ಗದ್ದಲ ಇಲ್ಲದೇ ಈ ಸಿನಿಮಾಗೆ ಮೊದಲ ಹಂತದ ಚಿತ್ರೀಕರಣ ಮುಗಿಸಲಾಗಿದೆ. ‘ಇದು ಹಾಸ್ಯಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತಿ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿ ಇರಲಿದೆ’ ಎಂದು ಚಿತ್ರತಂಡ ಹೇಳಿದೆ.

ಒಂದು ಊರಿನಲ್ಲಿ ನಡೆಯುವ ಫನ್ನಿ ಘಟನೆಗಳ ಸುತ್ತ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ಕಥೆ ಸಾಗುತ್ತದೆ. ಕುಂದಾಪುರದ ಲೊಕೇಷನ್​ಗಳಲ್ಲಿ ಶೂಟಿಂಗ್ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 2ನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಸಿನಿಮಾದಲ್ಲಿ ವಿನೀತ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಪರಿಚಯ ಆಗಿರುವ ವಿನೀತ್ ಕುಮಾರ್ ಅವರು ಈಗ ‘ಮ್ಯಾರೇಜ್ ಪಾರ್ಟಿ’ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಕುಂದಾಪುರ ಮೂಲದವರಾದ ನಿರ್ದೇಶಕ ಚಯನ್ ಶೆಟ್ಟಿ ಅವರು ತಮ್ಮೂರಿನಲ್ಲಿ ನಡೆಯುವ ಮಜವಾದ ಕಥೆಯೊಂದನ್ನು ‘ಮ್ಯಾರೇಜ್ ಪಾರ್ಟಿ’ ಸಿನಿಮಾದಲ್ಲಿ ಹೇಳಲಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಜೊತೆ ಕನ್ನಡದ ನಟಿ ನಿಮಿಕಾ ರತ್ನಾಕರ್ ಫೋಟೋ ವೈರಲ್

ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ನಿರ್ಮಾಪಕ ಸಂತೋಷ್ ವಿ. ಅವರು ‘ವರಾಹಿ ಫಿಲ್ಮ್ಸ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಶ್ರೀಕಾಂತ್ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ನಿರ್ದೇಶನ, ನಿತಿನ್ ಶೆಟ್ಟಿ ಅವರ ಸಂಕಲನ ಈ ಸಿನಿಮಾಗೆ ಇರಲಿದೆ. ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us